ಚಿಕ್ಕಮಗಳೂರು: ಕೋವಿಡ್-19ರ ಎರಡನೇ ಅಲೆ ತೀವ್ರಗತಿಯಲ್ಲಿ ಹಬ್ಬುತ್ತಿದ್ದು, ಶುಕ್ರ ವಾರ ಒಂದೇ ದಿನ ಜಿಲ್ಲಾದ್ಯಂತ 542 ಸೋಂಕಿತರು ಪತ್ತೆಯಾಗುವುದರೊಂದಿಗೆ ಇಡೀ ಜಿಲ್ಲೆಯೇ ಬೆಚ್ಚಿಬೀಳುವಂತೆ ಮಾಡಿದೆ.
ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ 500 ಗಡಿಯನ್ನು ದಾಟಿದ್ದು, ಸೋಂಕು ಸಮುದಾಯಕ್ಕೆ ವ್ಯಾಪಿಸಿರುವ ಶಂಕೆಯುಂಟಾಗಿದೆ. ಸೋಂಕಿನ ಆರ್ಭಟಕ್ಕೆ ಶುಕ್ರವಾರ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕಿನ ಎರಡನೇ ಅಲೆಗೆ ಕಳೆದ ಕೆಲವೆ ದಿನಗಳಲ್ಲಿ 16 ಜನರನ್ನು ಬಲಿ ಪಡೆದುಕೊಂಡಿದೆ.
ಶುಕ್ರವಾರ ಪತ್ತೆಯಾದ 542 ಸೋಂಕಿತರಲ್ಲಿ 518 ಸೋಂಕಿತರನ್ನು ಹೋಮ್ ಐಸೋ ಲೇಶನ್‍ಗೆ ಒಳಪಡಿಸಲಾಗಿದೆ. 19 ಸೋಂಕಿತರನ್ನು ಕೋವಿಡ್ ಆಸ್ಪತ್ರೆ ಹಾಗೂ 5 ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಸೋಂಕು ಯಾವ ಮಟ್ಟದಲ್ಲಿ ಹಬ್ಬಲಾರಂಭಿಸಿದೆ ಎಂದರೆ 1ವರ್ಷ ಬಾಲಕಿಯಿಂದ ಹಿಡಿದು 80 ವರ್ಷದ ಒಳಗಿನ ವೃದ್ಧರು, ವೃದ್ಧೆಯರು ಯುವಕರು, ಯುವತಿಯರು, ಮಕ್ಕಳು ಎನ್ನದೇ ಬೆಂಬಿಡದೆ ಕಾಡುತ್ತಿದೆ.
ಶುಕ್ರವಾರ ಕೊಪ್ಪ ತಾಲ್ಲೂಕಿನ 65 ವರ್ಷದ ಮಹಿಳೆ ಹಾಗೂ ಕಡೂರು ತಾಲ್ಲೂಕಿನ 55 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇವರಿಗೆ ಸೋಂಕು ತಗುಲಿದ್ದು, ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಕೋವಿಡ್ ನಿಮಯದಂತೆ ಅಂತ್ಯಕ್ರಿಯೇ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ ಇದುವರೆಗೂ 18,070 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 15,173 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ 2,542 ಸೋಂಕು ಪ್ರಕರಣ ಸಕ್ರೀಯವಾಗಿದ್ದು, ಇಂದು 200 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 155 ಮಂದಿ ಸೋಂಕಿಗೆ ಉಸಿರು ಚೆಲ್ಲಿದ್ದಾರೆ.