ಬೀಜಿಂಗ್: ಇತ್ತೀಚೆಗೆ ಬೀಜಿಂಗ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಹೊಸ ಕೊರೊನಾ ವೈರಸ್‌ನ ಮೂಲದ ಬಗ್ಗೆ ಅಂಕಿ – ಅಂಶ ಬಿಡುಗಡೆ ಮಾಡಿದೆ. ಪ್ರಾಥಮಿಕ ಅಧ್ಯಯನಗಳ ಆಧಾರದ ಮೇಲೆ ಚೀನ ಅಧಿಕಾರಿಗಳು ಶುಕ್ರವಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಹೊಸ ಕೋವಿಡ್ -19ನ ವಂಶವಾಹಿಯು ಯುರೋಪಿಯನ್ ಮೂಲದ್ದು ಎಂದು ಗುರುತಿಸಲಾಗಿದೆ ಎಂದಿದ್ದಾರೆ.
ದೇಶದ ರಾಜಧಾನಿಯಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೇಗನೆ ದತ್ತಾಂಶವನ್ನು ಸಾರ್ವಜನಿಕರಿಗೆ ತಿಳಿಯ ಪಡಿ ಸಬೇಕಾದ ಒತ್ತಡದಲ್ಲಿದ್ದ ಚೀನವು ಇದೀಗ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ ಎನ್ನಲಾಗಿದೆ. ಚೀನದ ನ್ಯಾಷನಲ್ ಮೈಕ್ರೋಬಯಾಲಜಿ ಡಾಟಾ ಸೆಂಟರ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಜೀನೋಮ್ ಸೀಕ್ವೆನ್ಸಿಂಗ್ ಡೇಟಾ ವಿವರಗಳನ್ನು ಜೂನ್ 11ರಂದು ಸಂಗ್ರಹಿಸಲಾದ ಮೂರು ಮಾದರಿ (ಎರಡು ಮಾನವ ಮೂಲ ಮತ್ತು ಒಂದು ಪರಿಸರ ಮೂಲ)ಗಳ ದಂತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.
ಜೂ. 11ರಂದು ಬೀಜಿಂಗ್‌ನಲ್ಲಿ ಮೊದಲ ಹೊಸ ಸ್ಥಳೀಯ ಕೋವಿಡ್ -19 ಪ್ರಕರಣ ಪತ್ತೆಯಾಗಿತ್ತು. ಅನಂತರದ ಎಂಟು ದಿನಗಳಲ್ಲಿ ಸುಮಾರು 183 ಪ್ರಕರಣಗಳು ನಗರದಲ್ಲಿ ವರದಿಯಾಗಿವೆ. ಇದು ನಗರದ ನೈಋತ್ಯದಲ್ಲಿರುವ ಕ್ಸಿನ್‌ಫಾಡಿಯದ ಸಗಟು ಆಹಾರ ಮಾರುಕಟ್ಟೆ ಕೇಂದ್ರದ ಮೂಲಕ ಹರಡಿದ ಪ್ರಕರಣಗಳು ಎನ್ನಲಾಗಿವೆ. ಪ್ರಾಥಮಿಕ ಜೀನೋಮಿಕ್ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನ ಫಲಿತಾಂಶಗಳ ಪ್ರಕಾರ, ವೈರಸ್ ಯುರೋಪಿನಿಂದ ಬಂದಿದೆ, ಆದರೆ ಇದು ಪ್ರಸ್ತುತ ಯುರೋಪಿನಲ್ಲಿ ಹರಡಿರುವ ವೈರಸ್‌ಗಿಂತ ಅದು ಭಿನ್ನವಾಗಿದೆ ಎಂದು ಚೀನದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (ಸಿಡಿಸಿ) ಅಧಿಕಾರಿ ಜಾಂಗ್ ಯೋಂಗ್ ಶುಕ್ರವಾರ ಪ್ರಕಟಿಸಿದ ಲೇಖನದಲ್ಲಿ ತಿಳಿಸಿದ್ದಾರೆ. ಆದರೆ ಬೀಜಿಂಗ್‌ನಲ್ಲಿ ಕಾಣಿಸಿಕೊಂಡ ವೈರಸ್ ಪ್ರಸ್ತುತ ಯುರೋಪಿನಲ್ಲಿ ಹರಡುವ ವೈರಸ್‌ಗಿಂತ ಹಳೆಯದು ಎಂದಿದ್ದಾರೆ.
ಚೀನಾದಲ್ಲಿ ವೈರಸ್ ಹೇಗೆ ಬಂದಿತು ಎಂಬುದಕ್ಕೆ ಹಲವಾರು ಸಾಧ್ಯತೆಗಳಿವೆ ಎಂದು ಜಾಂಗ್ ಹೇಳಿದರು. ಆಮದು ಮಾಡಿದ ಹೆಪ್ಪುಗಟ್ಟಿದ ಆಹಾರ ಉತ್ಪನ್ನಗಳಲ್ಲಿ ವೈರಸ್ ಮರೆಯಾಗಿದ್ದರಬಹುದು ಅಥವಾ ಕ್ಸಿನ್‌ಫಾಡಿಯದ ಸಗಟು ಮಾರುಕಟ್ಟೆ ತೇವಾಂಶವುಳ್ಳ ವಾತಾವರಣದಿಂದ ಕೂಡಿದ್ದು ಅಲ್ಲಿ ವೈರಸ್ ಸುಪ್ತವಾಗಿ ಅಡಗಿರುವ ಸಾಧ್ಯತೆ ಇದೆ. ಆ ಪರಿಸರವನ್ನು ಸೋಂಕುರಹಿತ ಅಥವಾ ಕ್ರಿಮಿನಾಶಕಗಳನ್ನು ಬಳಸಿ ಸ್ವತ್ಛಗೊಳಿಸಿರಲಿಲ್ಲ ಎಂದು ಜಾಂಗ್ ಸೆಂಟ್ರಲ್ ಕಮಿಷನ್ ಫಾರ್‌ಡಿಸಿಪ್ಲಿನ್ ಇನ್‌ಸ್ಪೆಕ್ಷನ್‌ನಲ್ಲಿ ಪ್ರಕಟಿಸಿದ ಲೇಖನದಲ್ಲಿ ವಿವರಿಸಿದ್ದಾರೆ.