Advertisement

ಹಸೆಮಣೆ ಏರಿದಾಕ್ಷಣ ರಕ್ತದಾನ ಮಾಡಿದ ನವಜೋಡಿ; ಲಗ್ನಪತ್ರಿಕೆಯಲ್ಲಿ ಮಾಹಿತಿ

04:50 PM Feb 04, 2023 | Team Udayavani |

ಅಕ್ಕಿಆಲೂರು: ಪಟ್ಟಣದಲ್ಲಿ ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಪರೂಪದ ಜೋಡಿಯೊಂದು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ರಕ್ತದಾನಕ್ಕಿರುವ ಮಹತ್ವ ಸಾರುವಲ್ಲಿ ಯಶಸ್ವಿಯಾಗಿದೆ.

Advertisement

ಪಟ್ಟಣದ ಮಾರುತಿ ನಗರದ ನಿವಾಸಿ ಪ್ರವೀಣ ಸುಬ್ಬಣ್ಣನವರ ಮತ್ತು ಸಾವಿತ್ರಿ ದಂಪತಿ ತಮ್ಮ ಮದುವೆ ದಿನವಾದ ಫೆ.3ರಂದು ಸ್ಥಳೀಯ ಸ್ನೇಹಮೈತ್ರಿ ರಕ್ತದಾನಿಗಳ ಬಳಗ ಮತ್ತು ಹಾವೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಿ ಗಮನ ಸೆಳೆದಿದ್ದಾರೆ. ರಕ್ತದಾನ ಶಿಬಿರದ ಆಯೋಜನೆ ಕುರಿತು ತಮ್ಮ ಲಗ್ನ ಪತ್ರಿಕೆಯಲ್ಲಿ ಪ್ರತಿಯೊಬ್ಬರಿಗೂ ಆಮಂತ್ರಣ ನೀಡಿದ್ದರು.

ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ ಸುಬ್ಬಣ್ಣವರ, ಕಳೆದೆರಡು ವರ್ಷಗಳ ಹಿಂದೆ ಅನಾರೋಗ್ಯದ ಸಮಸ್ಯೆಯಿಂದ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಸ್ವತಃ ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಅವರು ಸಂಕಟ ಅನುಭವಿಸಿದ್ದರು. ಆ ಸಂಕಷ್ಟ ಮತ್ತೂಬ್ಬರು ಅನುಭವಿಸಬಾರದು ಎಂಬ ಸದುದ್ದೇಶದಿಂದ ಪ್ರವೀಣ ಈ ಕಾರ್ಯಕ್ಕೆ ಮುಂದಾಗಿದ್ದು ವಿಶೇಷ.

ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಅಧ್ಯಯನ ಮಾಡಿದ್ದ ಪ್ರವೀಣ ಅವರು ತಮ್ಮ 16ನೇ ವಯಸ್ಸಿನಲ್ಲೇ ವಿವೇಕಾನಂದ ವಿಚಾರಧಾರೆಗಳೊಂದಿಗೆ ಬೆಳೆದವರು. ಮದುವೆ ಮನೆಯಲ್ಲಿ ಮಾಂಗಲ್ಯಧಾರಣೆಯಾದ ಮೇಲೆ ಎಲ್ಲ ಬಂಧು-ಮಿತ್ರರು ಒಂದೆಡೆ ಸೇರಿ ಸಂಭ್ರಮಿಸುವ ಬದಲು ಸ್ವಯಂಪ್ರೇರಿತ ರಕ್ತದಾನ ಮಾಡುವಂತೆ ಪ್ರೇರೇಪಿಸಿದ್ದು ವಿಶೇಷವಾಗಿತ್ತು. ಪ್ರವೀಣ ತಮ್ಮ ಧರ್ಮಪತ್ನಿ ಸಾವಿತ್ರಾ ಅವರೊಟ್ಟಿಗೆ ತಮ್ಮನ್ನಗಲಿದ ತಂದೆ-ತಾಯಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಕ್ತದಾನಕ್ಕೆ ಮುಂದಾದರು. ರಕ್ತದಾನದ ಮಹತ್ವ ಅರಿತು ಮದುವೆಗೆಂದು ಆಗಮಿಸಿದ್ದ ಯುವಕರು, ಸ್ನೇಹಿತರು, ನೆಂಟರಿಷ್ಟರು ರಕ್ತದಾನ ಶಿಬಿರದಲ್ಲಿ
ಪಾಲ್ಗೊಂಡರು.

ಈ ಸಮಯದಲ್ಲಿ ಪ್ರಪ್ರಥಮ ಬಾರಿಗೆ ರಕ್ತ ಸೈನಿಕರಾದವರ ಸಂಖ್ಯೆಯೇ ಹೆಚ್ಚು. ಇದು ಪ್ರವೀಣ ಅವರ 17ನೇ ಬಾರಿಯ ರಕ್ತದಾನವಾಗಿತ್ತು. ಇನ್ನೂ ಮದುವೆ ಮುಗಿದರೂ ಈ ಶಿಬಿರದ ಗುಂಗಿನಿಂದ ಯಾರು ಕೂಡ ಹೊರಬರದೇ ಅಪರೂಪದ ಮದುವೆಯಲ್ಲಿ ಪಾಲ್ಗೊಂಡಿದ್ದು ತುಂಬ ಸಂತಸ ತಂದಿದೆ ಎಂದು ಮಾತನಾಡುತ್ತಿದ್ದುದು ಎಲ್ಲೆಡೆ ಕೇಳಿಬರುತ್ತಿತ್ತು. ಮದುವೆಗೆ ಆಗಮಿಸಿದ್ದ ಹಿರಿಯರು, ಕಿರಿಯರು, ನೆಂಟರಿಷ್ಟರು ಪ್ರವೀಣ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.

Advertisement

*ಪ್ರವೀಣಕುಮಾರ ಸಿ.ಅಪ್ಪಾಜಿ

Advertisement

Udayavani is now on Telegram. Click here to join our channel and stay updated with the latest news.

Next