Advertisement

ಹೇಮೆ ನದಿಯಲ್ಲಿ ನವ ದಂಪತಿ ಶವ ಪತ್ತೆ

12:28 PM May 09, 2020 | mahesh |

ಸಕಲೇಶಪುರ: ತಿರುಗಾಡಲು ಹೋಗಿದ್ದ ನವ ದಂಪತಿಗಳು ಆಕಸ್ಮಿಕವಾಗಿ ಹೇಮಾವತಿ ನದಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಪಟ್ಟಣಕ್ಕೆ ಸಮೀಪವಿರುವ ತಾಲೂಕಿನ ಹೆನ್ನಲಿ ಗ್ರಾಮದ ಸಮೀಪ ನಡೆದಿದೆ. ಬೇಲೂರು ತಾಲೂಕು ಮುರಳ್ಳಿ ಗ್ರಾಮದ ಅರ್ಥೇಶ್‌ (27), ಹೆನ್ನಲಿ ಗ್ರಾಮದ ಕೃತಿಕಾ (23) ಮೃತಪಟ್ಟ ದುರ್ದೈವಿಗಳು. ಕಳೆದ 2 ತಿಂಗಳ ಹಿಂದೆ ಯಷ್ಟೇ ಮದುವೆಯಾಗಿದ್ದು ಅರ್ಥೇಶ್‌ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

Advertisement

ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತನ್ನ ಸ್ವಗ್ರಾಮ ಬೇಲೂರು ತಾಲೂಕಿನ ಮುರಳ್ಳಿ ಗ್ರಾಮಕ್ಕೆ ಕಳೆದ ಕೆಲವು ದಿನಗಳ ಹಿಂದಯಷ್ಟೇ ಬಂದಿದ್ದು ಬುಧವಾರ ಹೆನ್ನಲಿ ಗ್ರಾಮದ ಪತ್ನಿ ಮನೆಗೆ ಬಂದಿದ್ದ. ಗುರುವಾರ ಸಂಜೆ ದಂಪತಿ ತಿರುಗಾಡಿ ಕೊಂಡು ಬರುತ್ತೇವೆ ಎಂದು ಬೈಕ್‌ನಲ್ಲಿ ಹೊರ ಹೋಗಿದ್ದು ಎಷ್ಟೊತ್ತು ಆದರೂ ಹಿಂತಿರುಗಿ ಬಾರದ ಕಾರಣ ಮನೆಯವರು ಮೊಬೈಲ್‌ಗೆ ಕರೆ ಮಾಡಿದ್ದರು. ಆದರೆ, ಎರಡೂ ಮೊಬೈಲ್‌ ಸ್ವಿಚ್‌ ಆಫ್ ಆಗಿದ್ದರಿಂದ ಮನೆಯವರು ಹಾಗೆಯೇ ಹುಡುಕಿ ಕೊಂಡು ಬಂದಾಗ, ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್‌ ಕಾಣಿಸಿದೆ. ಹೀಗೆ ಬೈಕ್‌ ಸುತ್ತಮುತ್ತ ಹುಡುಕಿದಾಗ, ಅಲ್ಲೇ ಪಕ್ಕದಲ್ಲಿ ಮೀನುಗಾರರು ಹಾಕಿದ್ದ ಬಲೆಗೆ ಯುವತಿ ಶವ ಸಿಲುಕಿದ್ದು ತಕ್ಷಣ ಶವವನ್ನು ಮೇಲೆತ್ತಿ ಪೊಲೀಸರ ಮುಖಾಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಕತ್ತಲಾಗಿದ್ದರಿಂದ ಪತಿಯ ಶವವನ್ನು ಹೊರ ತೆಗೆಯಲು ಆಗಿರಲಿಲ್ಲ. ಶುಕ್ರವಾರ ಮುಂಜಾನೆ ಈಜುಗಾರರ ಸಹಾಯದಿಂದ ಅರ್ಥೇಶ್‌ ಶವವನ್ನು ಹೊರ ತೆಗೆಯಲಾಗಿದೆ. ಗುರುವಾರ ರಾತ್ರಿ ಭರ್ಜರಿಯಾಗಿ ಮಳೆ ಸುರಿದಿದ್ದರೂ ಈಜುಗಾರರು ಶವವನ್ನು ಹುಡುಕಿ ಹೊರ ತೆಗೆದಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿದ್ದಾರೆ ಎಂದು ಕೆಲವರು ಹೇಳುತ್ತಿದ್ದು ಹೇಮಾವತಿ ನದಿ ತೀರದಲ್ಲಿ ಇಟ್ಟಿಗೆ, ಮರಳು ಗಣಿಗಾರಿಕೆಗೆ ಗುಂಡಿ ತೆಗೆಯುವುದರಿಂದ ಈ ರೀತಿ ಘಟನೆಯಾಗಳು ಕಾರಣ ಎಂದೂ ಕೆಲವರು ಆರೋಪಿಸಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದಷ್ಟೇ ಪಟ್ಟಣದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸ್ನಾನ ಮಾಡಲು ಹೋಗಿ ಕೌಡಹಳ್ಳಿ ಸಮೀಪದ ಹೇಮಾವತಿ ನದಿ ತೀರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಘಟನೆಯಿಂದ ಹೊರ ಬರುವ ಮುನ್ನವೇ ನವ ದಂಪತಿ ಹೇಮೆ ನದಿಯಲ್ಲಿ ಸಾವನ್ನಪ್ಪಿರುವುದು ವಿಷಾದಕರ. ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಡಿವೈಎಸ್‌ಪಿ ಗೋಪಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಗಿರೀಶ್‌, ನಗರ ಠಾಣೆ ಪಿಎಸ್‌ಐ ರಾಘವೇಂದ್ರ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next