Advertisement

ಹುಳಿ ಮೊಸರಿಂದ ಹೊಸ ಅಡುಗೆ

06:57 PM Jul 09, 2019 | mahesh |

ಮೊಸರು ಹುಳಿ ಬಂದರೆ ತಿನ್ನಲು ಆಗುವುದಿಲ್ಲ. ಬೇಡ ಅಂತ ಚೆಲ್ಲುವುದಕ್ಕೂ ಮನಸ್ಸಾಗುವುದಿಲ್ಲ. ಹಾಗಾಗಿ ಕೆಲವರು ಹುಳಿ ಮೊಸರಿಗೆ ನೀರು ಅಥವಾ ಹಾಲು ಬೆರೆಸಿ ಉಪಯೋಗಿಸುತ್ತಾರೆ. ಆದರೆ, ಹುಳಿ ಮೊಸರು ಅಷ್ಟಕ್ಕೇ ಸೀಮಿತವಲ್ಲ. ಅದನ್ನು ಬಳಸಿ ಹಲವು ಬಗೆಯ ರುಚಿಕರ ಖಾದ್ಯ ತಯಾರಿಸಬಹುದು. ಕೆಲವು ಸ್ಯಾಂಪಲ್‌ಗ‌ಳ ರೆಸಿಪಿ ಇಲ್ಲಿದೆ…

Advertisement

1. ಅಕ್ಕಿಹಿಟ್ಟಿನ ಹುಳಿ ಮಿಡ್ಡೆ
ಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು – 1 ಕಪ್‌, ಕಡೆದ ಹುಳಿ ಮೊಸರು-1 ಕಪ್‌, ರುಚಿಗೆ ಉಪ್ಪು, ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು.

ಮಾಡುವ ವಿಧಾನ: ದಪ್ಪತಳದ ಪಾತ್ರೆಯಲ್ಲಿ ಎರಡು ಕಪ್‌ ನೀರನ್ನು ಕಾಯಲು ಇಡಿ. ನೀರು ಕುದಿಯಲು ಶುರುವಾದಾಗ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಹಿಂದೆಯೇ ಅಕ್ಕಿಹಿಟ್ಟನ್ನು ಹಾಕಿ ಗಂಟಾಗದಂತೆ ಕೈಯಾಡಿಸಿ. ಹಿಟ್ಟು ಮುಕ್ಕಾಲು ಬೆಂದಾಗ, ಕಡೆದ ಹುಳಿಮೊಸರನ್ನು ಸೇರಿಸಿ, ಚೆನ್ನಾಗಿ ಗೊಟಾಯಿಸಿ. ಸಣ್ಣಉರಿಯಲ್ಲಿ ಐದು ನಿಮಿಷ ಬೇಯಿಸಿ. ಮಿಡ್ಡೆಯ ಸಾಂದ್ರತೆ ತೆಳ್ಳಗೆ ಬೇಕೆಂದರೆ ಇನ್ನೂ ಸ್ವಲ್ಪ ಹುಳಿಮೊಸರನ್ನು ಸೇರಿಸಿ. ನಂತರ ಸಾಸಿವೆ ಸಿಡಿಸಿ ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟು, ತಣಿಯಲು ಬಿಡಿ.

2. ಹುಳಿಮೊಸರಿನ ಸಾರು
ಬೇಕಾಗುವ ಸಾಮಗ್ರಿ: ಕಡೆದ ಹುಳಿ ಮೊಸರು- ಒಂದು ಕಪ್‌, ಸಾರು/ರಸಂ ಪುಡಿ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು.

ಮಾಡುವ ವಿಧಾನ: ಎರಡರಿಂದ ಮೂರು ಲೋಟ ನೀರನ್ನು ಬಿಸಿ ಮಾಡಿ, ನಂತರ ಅದಕ್ಕೆ ಅರಿಶಿನ , ಒಂದು ಚಮಚ ಸಾರು/ರಸಂ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಐದು ನಿಮಿಷ ಕುದಿಸಿ. ಉರಿ ಚಿಕ್ಕದು ಮಾಡಿ, ಹುಳಿ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ,ಉರಿ ಆರಿಸಿ. ಸಾಸಿವೆ ಸಿಡಿಸಿ ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟು, ಮುಚ್ಚಿಟ್ಟು ಬಿಡಿ.
(ಹುಳಿಮೊಸರಿನ ಸಾರನ್ನು ಅನ್ನಕ್ಕೆ ಕಲಸಿಕೊಳ್ಳಲೂಬಹುದು ಅಥವಾ ಹಾಗೇ ಕುಡಿಯಲೂ ರುಚಿಯಾಗಿರುತ್ತದೆ. ಬೇಳೆ ಹಾಕದಿರುವುದರಿಂದ ಹೊಟ್ಟೆಗೆ ಭಾರ ಎನಿಸುವುದಿಲ್ಲ.)

Advertisement

3. ಹುಳಿಮೊಸರು-ಹಸಿಕೊಬ್ಬರಿ ಚಟ್ನಿ
ಬೇಕಾಗುವ ಸಾಮಗ್ರಿ: ಗಟ್ಟಿ ಹುಳಿಮೊಸರು- ಅರ್ಧ ಕಪ್‌, ತೆಂಗಿನತುರಿ- ಒಂದು ಕಪ್‌, ಸಣ್ಣಗೆ ಹೆಚ್ಚಿದ ಟೊಮೇಟೊ- 1(ಬೇಕಿದ್ದರೆ ಮಾತ್ರ), ಸಕ್ಕರೆ- 1 ಚಮಚ, ಹಸಿರುಮೆಣಸಿನಕಾಯಿ-6, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಹಸಿಯಾಗಿಯೇ ರುಬ್ಬಿಕೊಳ್ಳಿ. ನಂತರ ಅದಕ್ಕೆ ಇಂಗು, ಸಾಸಿವೆಯ ಒಗ್ಗರಣೆ ಕೊಟ್ಟರೆ ಹುಳಿಮೊಸರಿನ ಚಟ್ನಿ ರೆಡಿ. ಇದನ್ನು ಚಪಾತಿ, ದೋಸೆಗಳಿಗೆ ನೆಂಚಿಕೊಳ್ಳಲು ವ್ಯಂಜನವಾಗಿ ಬಳಸಬಹುದು.

4. ದಿಢೀರ್‌ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿ: ಕಡೆದ ಹುಳಿ ಮೊಸರು- ಒಂದು ಕಪ್‌, ಹುರಿಗಡಲೆ- 2 ಚಮಚ, ತೆಂಗಿನ ತುರಿ- 1/4 ಕಪ್‌, ಕೊತ್ತಂಬರಿ ಸೊಪ್ಪು- ಐದು ಎಸಳು, ಹಸಿ ಶುಂಠಿ- ಸಣ್ಣ ತುಂಡು, ಒಣಮೆಣಸಿನಕಾಯಿ-5, ಚಿಟಿಕೆ ಅರಿಶಿನ, ರುಚಿಗೆ ಉಪ್ಪು. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು.

ಮಾಡುವ ವಿಧಾನ: ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು, ಹುರಿಗಡಲೆ, ಕೊತ್ತಂಬರಿಸೊಪ್ಪು, ಶುಂಠಿ, ಒಣಮೆಣಸು,ತೆಂಗಿನ ತುರಿ ಹಾಕಿ ರುಬ್ಬಿಕೊಳ್ಳಿ. ನೀರು ಕುದಿಯುವಾಗ ಅರಿಶಿನ, ಉಪ್ಪು ಹಾಗೂ ರುಬ್ಬಿದ ಮಸಾಲೆ ಹಾಕಿ, ಹತ್ತು ನಿಮಿಷ ಕುದಿಸಿ, ಉರಿ ಆರಿಸಿ. ಈ ಮಿಶ್ರಣಕ್ಕೆ ಕಡೆದ ಹುಳಿ ಮೊಸರನ್ನು ಸೇರಿಸಿ ಚೆನ್ನಾಗಿ ಬೆರೆಸಿ, ಒಗ್ಗರಣೆ ಕೊಡಿ. ತಣಿದ ನಂತರ, ರುಚಿರುಚಿಯಾದ ತರಕಾರಿರಹಿತ ಸಾದಾ ಮಜ್ಜಿಗೆಹುಳಿ ಸವಿಯಲು ಸಿದ್ಧ.

– ಕೆ.ವಿ.ರಾಜಲಕ್ಷ್ಮಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next