Advertisement

ಹೊಸಬರ ಓಂಕಾರ

12:30 AM Feb 15, 2019 | |

ಒಂದು ಅಕ್ಷರವನ್ನು ಸಿನಿಮಾ ಶೀರ್ಷಿಕೆಯನ್ನಾಗಿಸಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದ್ದು ಉಪೇಂದ್ರ ಅವರ “ಎ’ ಚಿತ್ರ. ಈಗ ಹೊಸಬರ ತಂಡವೊಂದು ಅಕ್ಷರವೊಂದನ್ನು ತಮ್ಮ ಸಿನಿಮಾ ಟೈಟಲ್‌ನ್ನಾಗಿಸಿ ಸಿನಿಮಾ ಮಾಡಲು ಹೊರಟಿದೆ. ಅದು “ಓ’. ಹೌದು, “ಓ’ ಎಂಬ ಸಿನಿಮಾವೊಂದು ಸೆಟ್ಟೇರಿದ್ದು, ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಕಿರಣ್‌ ತಲಕಾಡು ಈ ಸಿನಿಮಾದ ನಿರ್ಮಾಪಕರು. ಬಾಲ್ಯದಿಂದಲೂ ಸಿನಿಮಾ ನಟನಾಗಬೇಕೆಂಬ ಕನಸು ಕಂಡಿದ್ದ ಅವರು ಆಗಿದ್ದು ಬಿಝಿನೆಸ್‌ಮ್ಯಾನ್‌. ಬಿಝಿನೆಸ್‌ನಲ್ಲಿ ಬಿಝಿಯಾದರೂ ಸಿನಿಮಾದ ಆಸಕ್ತಿ ಹೆಚ್ಚಿದ್ದರಿಂದ ನಟನೆಯ ಆಸೆಯನ್ನು ಬದಿಗೊತ್ತಿ, ನಿರ್ಮಾಣಕ್ಕೆ ಇಳಿದಿದ್ದಾರೆ. “ಓ’ ಎಂಬ ಸಿನಿಮಾಕ್ಕೆ ಬಂಡವಾಳ ಹಾಕುವ ಮೂಲಕ ಮುಂದೆ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಿರಣ್‌ ಅವರದು. ಮಹೇಶ್‌ ಎನ್ನುವವರು ಈ ಸಿನಿಮಾದ ನಿರ್ದೇಶಕರು. ಕನ್ನಡ ಚಿತ್ರರಂಗದ ಅನೇಕ ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವಿರುವ ಮಹೇಶ್‌ ಈಗ “ಓ’ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಎಲ್ಲಾ ಓಕೆ, ಈ ಚಿತ್ರದಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಇಂದಿನ ಯುವಜನಾಂಗದ ಚಿಂತನೆಗಳ ಸುತ್ತ ಈ ಸಿನಿಮಾವನ್ನು ಮಾಡುತ್ತಿದ್ದಾರಂತೆ. “ಯುವ ಜನಾಂಗದ ಮನಸ್ಸಲ್ಲಿ ಕೆಟ್ಟ ಯೋಚನೆಗಳಿದ್ದು, ಅದು ಹಾಗೆಯೇ ಮುಂದುವರೆದರೆ ಜೀವನದಲ್ಲಿ ಯಾವ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ಮಹೇಶ್‌. ಮೂರು ಹಂತಗಳಲ್ಲಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕರಿಗಿದೆ. ಚಿತ್ರದಲ್ಲಿ ಸಿದ್ದು ಮೂಲಿಮನಿ ನಾಯಕರಾಗಿ ನಟಿಸುತ್ತಿದ್ದು, ಇವರಿಗೆ ನಾಯಕಿಯಾಗಿ ಸೋನಿಕಾ ಗೌಡ ಇದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಮಿಲನ ನಾಗರಾಜ್‌ ಕೂಡಾ ನಟಿಸುತ್ತಿದ್ದಾರೆ. ಸುಮಾರು 320ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟರೊಬ್ಬರು ಇಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 

Advertisement

ಚಿತ್ರಕ್ಕೆ ಕಿರಣ್‌ ರವೀಂದ್ರನಾಥ್‌ ಸಂಗೀತ, ಶ್ರೀಕಾಂತ್‌ ಸಂಕಲನವಿದೆ. ಸುಮಾರು 40 ದಿನಗಳ ಕಾಲ ಚಿತ್ರೀಕರಿಸುವ ಯೋಚನೆ ಚಿತ್ರತಂಡಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next