Advertisement

ಭಾರತ ಕ್ರಿಕೆಟ್‌ ತಂಡಕ್ಕೆ ನೂತನ ಕೋಚ್‌?

12:35 AM Mar 21, 2019 | |

ಮುಂಬೈ: ಭಾರತ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಯಶಸ್ಸು ಹಾಗೂ ವೈಫ‌ಲ್ಯಗಳನ್ನು ಸರಿಸಮನಾಗಿ ಕಂಡಿರುವ ರವಿಶಾಸ್ತ್ರಿ, ತರಬೇತುದಾರನ ಸ್ಥಾನದಿಂದ ಹೊರಹೋಗಲಿದ್ದಾರ? ಹೀಗೊಂದು ಅನುಮಾನ ಮೂಡಿದೆ. 

Advertisement

ಈ ವರ್ಷ ಜುಲೈ 14ರಷ್ಟೊತ್ತಿಗೆ ಏಕದಿನ ವಿಶ್ವಕಪ್‌ ಮುಗಿಯಲಿದೆ. ಅಲ್ಲಿಗೆ ರವಿಶಾಸ್ತ್ರಿ ಅವಧಿ ಮುಗಿಯಲಿದೆ. ಶಾಸ್ತ್ರಿಯವರನ್ನೇ ಮತ್ತೆ ಭಾರತ ಕ್ರಿಕೆಟ್‌ ತಂಡದ ತರಬೇತುದಾರನಾಗಿ ಮುಂದುವರಿಸುವ ಬದಲು, ಹುದ್ದೆಗೆ ಮತ್ತೆ ಅರ್ಜಿಗಳನ್ನು ಆಹ್ವಾನಿಸುವ ಸುಳಿವನ್ನು ಬಿಸಿಸಿಐ ನೀಡಿದ್ದು ಎಲ್ಲ ಊಹಾಪೋಹಗಳಿಗೆ ಕಾರಣ.

ಭಾರತ ಕ್ರಿಕೆಟ್‌ ತಂಡದ ತರಬೇತುದಾರನಾಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದು, ಭಾರೀ ವಿವಾದದ ನಡುವೆ. ಅಷ್ಟೆಲ್ಲ ವಿವಾದ ಎಬ್ಬಿಸಿ ಸ್ಥಾನ ಪಡೆದ ಅವರು ಉತ್ತಮ ಸಾಧನೆ ಮಾಡಿದ್ದಾರೆ ಎನ್ನಲು ಅಡ್ಡಿಯಿಲ್ಲ. ಅವರ ಅವಧಿಯಲ್ಲಿ ಇಂಗ್ಲೆಂಡ್‌ನ‌ಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತಿದ್ದು, ದ.ಆಫ್ರಿಕಾದಲ್ಲೂ ಟೆಸ್ಟ್‌ ಸರಣಿ ಕಳೆದುಕೊಂಡಿದ್ದು ಕಹಿ ನೆನಪು. ಆದರೆ ದ.ಆಫ್ರಿಕಾ ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದ್ದು ಎಲ್ಲ ಬೇಸರವನ್ನು ಮರೆಸಿತು. ಇತ್ತೀಚೆಗಷ್ಟೇ ಆಸ್ಟ್ರೇಲಿಯಕ್ಕೆ ತೆರಳಿದ್ದ ಭಾರತ ತಂಡ ಅಲ್ಲಿ ಟೆಸ್ಟ್‌ ಹಾಗೂ ಏಕದಿನ ಎರಡೂ ಸರಣಿಗಳನ್ನು ಐತಿಹಾಸಿಕವಾಗಿ ಗೆದ್ದುಕೊಂಡಿತ್ತು. ಹಿಂದಿನ ಯಾವ ಭಾರತೀಯ ತಂಡಗಳೂ ಈ ಸಾಧನೆ ಮಾಡಿಲ್ಲ. ಬೆನ್ನಿಗೇ ನ್ಯೂಜಿಲೆಂಡ್‌ಗೆ ತೆರಳಿದ್ದ ಭಾರತ ಅಲ್ಲಿ ಐತಿಹಾಸಿಕವಾಗಿ ಏಕದಿನ ಸರಣಿ ಗೆದ್ದುಕೊಂಡಿತ್ತು. ಅದರ ಬೆನ್ನಲ್ಲೇ ತನ್ನ ನೆಲದಲ್ಲೇ ಆಸ್ಟ್ರೇಲಿಯ ವಿರುದ್ಧ ಭಾರತ ಏಕದಿನ, ಟಿ20 ಎರಡೂ ಸರಣಿಗಳನ್ನು ಕಳೆದುಕೊಂಡಿತು. ಇದು ಶಾಸ್ತ್ರಿ ತರಬೇತುದಾರನ ಸಾಮರ್ಥ್ಯದ ಜೊತೆಗೆ, ಕೊಹ್ಲಿ ನಾಯಕತ್ವದ ಸಾಮರ್ಥ್ಯದ ಮೇಲೂ ಅನುಮಾನ ಮೂಡಿಸಿದ ಸರಣಿ.

ಮತ್ತೆ ಅರ್ಜಿ ಕರೆದಿದ್ದೇಕೆ?: ರವಿಶಾಸ್ತ್ರಿ ಜೊತೆಗೆ ನಾಯಕ ಕೊಹ್ಲಿ ಸಂಬಂಧ ಚೆನ್ನಾಗಿಯೇ ಇದೆ. ತಂಡದ ಪ್ರದರ್ಶನವೂ ಉತ್ತಮವಾಗಿಯೇ ಇದೆ. ಭಾರತ ಪ್ರಸ್ತುತ ಏಕದಿನ ವಿಶ್ವಕಪ್‌ ಗೆಲ್ಲುವ ಮೆಚ್ಚಿನ ತಂಡವೂ ಹೌದು. ಇಷ್ಟೆಲ್ಲ ಇದ್ದರೂ ನೂತನ ತರಬೇತುದಾರನ ಆಯ್ಕೆಗೆ ಅರ್ಜಿ ಕರೆಯುವ ಸಂಭಾವ್ಯತೆ ಬಂದಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ. ರವಿಶಾಸ್ತ್ರಿಯೊಂದಿಗೆ ಇನ್ನೊಮ್ಮೆ ಮಾತುಕಥೆ ನಡೆಸಿ ಅವರನ್ನೇ ಮುಂದುವರಿಸುವ ಆಸಕ್ತಿ ಬಿಸಿಸಿಐಗಿಲ್ಲವೇ? ಅಥವಾ ರವಿಶಾಸ್ತ್ರಿಗೇ ಈ ಹುದ್ದೆಯಲ್ಲಿ ಮುಂದುವರಿಯುವ ಆಸಕ್ತಿಯಿಲ್ಲವೇ ಎಂಬ ಅನುಮಾನಗಳೂ ಮೂಡಿವೆ. ಅರ್ಜಿ ಕರೆಯುವ ಪ್ರಕ್ರಿಯೆಯನ್ನು ಕೇವಲ ಶಿಷ್ಟಾಚಾರವಾಗಿ ಬಿಸಿಸಿಐ ಪಾಲಿಸುತ್ತಿದೆಯೇ? ಇಲ್ಲಿ ಅಂತಿಮವಾಗಿ ರವಿಶಾಸ್ತ್ರಿಯೇ ಆಯ್ಕೆಯಾಗಲಿದ್ದಾರೆಯೇ ಎಂಬ ಕುತೂಹಲವೂ ಇದೆ.

ಕುಂಬ್ಳೆ-ರವಿಶಾಸ್ತ್ರಿಆಯ್ಕೆ ಜಟಾಪಟಿ
2014ರಿಂದ 2016ರವರೆಗೆ ರವಿಶಾಸ್ತ್ರಿ ಭಾರತ ತಂಡದ ನಿರ್ದೇಶಕರಾಗಿದ್ದರು. ಆ ಅವಧಿಯಲ್ಲಿಯೂ ಭಾರತ ತಂಡದ್ದು, ಸರಾಸರಿ ಪ್ರದರ್ಶನ. ಮುಂದೆ ಬಿಸಿಸಿಐ ಅರ್ಜಿ ಆಹ್ವಾನಿಸಿದಾಗ, ಅನಿಲ್‌ ಕುಂಬ್ಳೆ ದಿಢೀರೆಂದು ರವಿಶಾಸ್ತ್ರಿಯನ್ನು ಹಿಂದಿಕ್ಕಿ 2016ರಲ್ಲಿ ತರಬೇತುದಾರನಾಗಿ ಆಯ್ಕೆಯಾದರು. ಆಗ ಗಂಗೂಲಿ-ರವಿಶಾಸ್ತ್ರಿ ನಡುವೆ ಭಾರೀ ವಿವಾದ ಸಂಭವಿಸಿತ್ತು. ಕುಂಬ್ಳೆ 2017ರ ಜುಲೈನಲ್ಲಿ ಹುದ್ದೆಗೆ ತಾವೇ ರಾಜೀನಾಮೆ ನೀಡಿದರು. ಸಲಹಾ ಸಮಿತಿ ಕುಂಬ್ಳೆಯೇ ಮುಂದುವರಿಯಲು ಬಯಸಿದರೂ, ನಾಯಕ ಕೊಹ್ಲಿಗೆ ನನ್ನ ಕಾರ್ಯಾಚರಣೆ ಶೈಲಿ ಇಷ್ಟವಾಗದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕುಂಬ್ಳೆ ತಿಳಿಸಿದ್ದರು. 

Advertisement

ಕುಂಬ್ಳೆ ಅವಧಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತ್ತು. 2017ರಲ್ಲಿ ಮತ್ತೆ ಅರ್ಜಿ ಕರೆದಾಗ ಇಡೀ ದಿನ ಹೆಚ್ಚು ಕಡಿಮೆ ಮಧ್ಯರಾತ್ರಿವರೆಗೆ ಭಾರೀ ಗೊಂದಲ ನಡೆದು, ಕಡೆಗೆ ರವಿಶಾಸ್ತ್ರಿ ಮತ್ತೂಮ್ಮೆ ತರಬೇತುದಾರನಾಗಿ ಆಯ್ಕೆಯಾಗಿದ್ದು ಖಚಿತವಾಯಿತು. ಈ ಗೊಂದಲಗಳಿಗೆ ರವಿಶಾಸ್ತ್ರಿ ಮತ್ತು ಸಲಹಾ ಸಮಿತಿ ಸದಸ್ಯ ಸೌರವ್‌ ಗಂಗೂಲಿ ನಡುವಿನ ಭಿನ್ನಮತವೇ ಕಾರಣವೆಂದು ಹೇಳಲಾಗಿತ್ತು.

ನೂತನ ತರಬೇತುದಾರನ ಆಯ್ಕೆ ಪ್ರಕ್ರಿಯೆ ಹೇಗೆ?
ಭಾರತ ಕ್ರಿಕೆಟ್‌ ತಂಡದ ಮಾಜಿ ದಂತಕಥೆಗಳಾದ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌, ಬಿಸಿಸಿಐನ ಉನ್ನತ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತರಬೇತುದಾರರ ಆಯ್ಕೆ ವೇಳೆ ಬಿಸಿಸಿಐ ಈ ಮೂವರನ್ನೇ ಸಂಪರ್ಕಿಸಿತ್ತು. ಈ ಬಾರಿಯೂ ಬಿಸಿಸಿಐ ಆಡಳಿತಾಧಿಕಾರಿಗಳು ಇದೇ ಪರಂಪರೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಈ ಮೂವರು ಸಂಭಾವ್ಯರ ಅರ್ಜಿ ಪರಿಶೀಲಿಸಿ, ಅಂತಿಮ ಹಂತಕ್ಕೆ ಬಂದವರ ಸಂದರ್ಶನ ನಡೆಸಿ, ನೂತನ ತರಬೇತುದಾರನನ್ನು ಆಯ್ಕೆ ಮಾಡಲಿದ್ದಾರೆ. ಸದ್ಯ ತರಬೇತುದಾರರಾಗಿರುವ ರವಿಶಾಸ್ತ್ರಿ ಅಂತಿಮ ಹಂತದ ಸಂದರ್ಶನಕ್ಕೆ ನೇರ ಪ್ರವೇಶ ಪಡೆಯಲಿದ್ದಾರೆ. ಅವರು ಇನ್ನಿತರ ಆಕಾಂಕ್ಷಿಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಹುದ್ದೆಗೆ ತರಬೇತುದಾರನ ಆಯ್ಕೆ ಮಾಡುವುದು ಭಾರೀ ಗೊಂದಲ ಮೂಡಿಸಿದೆ.

ಮುಂದಿನ ತರಬೇತುದಾರ ಯಾರಾಗಬಹುದು?
ಒಂದು ವೇಳೆ ತರಬೇತುದಾರನ ಹುದ್ದೆಗೆ ಅರ್ಜಿ ಕರೆದಿದ್ದೇ ಹೌದಾದರೆ, ನೂತನ ತರಬೇತುದಾರ ಯಾರಾಗಬಹುದು ಎಂಬ ಪ್ರಶ್ನೆ ಮೂಡಿದೆ. ರವಿಶಾಸ್ತ್ರಿ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಶೇ.90ರಷ್ಟು ಇದೆ. ಒಂದು ವೇಳೆ ಈ ಸ್ಥಾನಕ್ಕೆ ಬಲವಾದ ಹೆಸರುಗಳು ಸ್ಪರ್ಧೆ ನಡೆಸಿದರೆ, ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಪ್ರಶ್ನೆ. ಸದ್ಯ ಭಾರತ ಎ ತಂಡ, 19 ವಯೋಮಿತಿಯೊಳಗಿನ ತಂಡಕ್ಕೆ ತರಬೇತುದಾರರಾಗಿ ಅತ್ಯಂತ ಯಶಸ್ವಿ ಪ್ರದರ್ಶನ ನೀಡಿರುವ ರಾಹುಲ್‌ ದ್ರಾವಿಡ್‌ ಈ ಹುದ್ದೆಗೆ ಅರ್ಜಿ ಸಲ್ಲಿಸಿದರೆ, ಅವರು ಆಯ್ಕೆಯಾಗುವುದು ಶೇ.100ರಷ್ಟು ಖಚಿತ. ಕಿರಿಯರ ತಂಡದ ತರಬೇತುದಾರರಾಗಿ ಅವರು ಪ್ರಭಾವೀ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂಬ ಹೆಗ್ಗಳಿಕೆಯೂ ಅವರಿಗಿದು. ಆದರೆ ಸ್ವತಃ ದ್ರಾವಿಡ್‌ಗೆ ಈ ಹುದ್ದೆಯಲ್ಲಿ ಆಸಕ್ತಿಯಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next