Advertisement

ಪ್ರಧಾನಿ ಮೋದಿ ಕನಸು ಸಾಕಾರಗೊಳಿಸಲು ಪಣ :ಉದಯವಾಣಿ ವೇದಿಕೆಯಲ್ಲಿ ನೂತನ ಕೇಂದ್ರ ಸಚಿವರ ಸಮಾಗಮ

12:56 AM Jul 12, 2021 | Team Udayavani |

ಕೇಂದ್ರ ಸಂಪುಟದ ನೂತನ ಸಹಾಯಕ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ, ಎ.ನಾರಾಯಣ ಸ್ವಾಮಿ ಹಾಗೂ ಭಗವಂತ ಖೂಬಾ ಅವರು ತಮ್ಮ ಇಲಾಖೆಗಳ ಕಾರ್ಯವೈಖರಿ, ಭವಿಷ್ಯದ ಯೋಜನೆಗಳ ಕುರಿತು “ಉದಯವಾಣಿ’ ವರ್ಚುವಲ್‌ ಸಂವಾದದಲ್ಲಿ ಹಂಚಿಕೊಂಡಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿರುವ ತಮ್ಮನ್ನು ಗುರುತಿಸಿ ಪ್ರಧಾನಿಯವರು ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದು, ಅವರ ನಂಬಿಕೆ ಹಾಗೂ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

Advertisement

ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಕ್ರಮ : ಸಚಿವ ಭಗವಂತ ಖೂಬಾ
ಹುಬ್ಬಳ್ಳಿ: “ರಸಗೊಬ್ಬರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಆಗಬೇಕೆಂಬುದು ಪ್ರಧಾನಿ ನರೇಂ ದ್ರ ಮೋದಿಯವರ ಆಶಯ. ಐದಾರು ವರ್ಷ ಗಳಲ್ಲಿ ರಸಗೊಬ್ಬರ ಆಮದು ಸ್ಥಗಿತಗೊಳಿಸಿ, ಸ್ವಾವಲಂಬನೆಗೆ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ’ ಎಂದು ಕೇಂದ್ರ ಹೊಸ ಮತ್ತು ನವೀಕರಿ ಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಕೇಂದ್ರದ ಮೂವರು ನೂತನ ಸಚಿವ ರೊಂದಿಗೆ “ಉದಯವಾಣಿ’ ಕೈಗೊಂಡ ಸಂವಾದದಲ್ಲಿ ಮಾತ ನಾಡಿದ ಅವರು, ಯೂರಿಯಾ ರಸ ಗೊಬ್ಬರ ತಯಾರಿಕೆಯಲ್ಲಿ ಭಾರತ ಬಹುತೇಕವಾಗಿ ಸ್ವಾವಲಂಬನೆ ಸಾಧಿಸಿದೆ. ಡಿಎಪಿ ರಸಗೊಬ್ಬರದ ಒಟ್ಟು ಬೇಡಿಕೆಯಲ್ಲಿ ಶೇ.40 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಡಿಎಪಿ ಆಮದು ನಿಲ್ಲಿಸಿ ಅದರಲ್ಲೂ ಸ್ವಾವಲಂಬನೆ ಯತ್ನಗಳು ನಡೆದಿವೆ ಎಂದರು.

ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಐದು ಕಾರ್ಖಾನೆಗಳು ಬಂದ್‌ ಆಗಿದ್ದವು. ಐದು ಕಾರ್ಖಾನೆಗಳ ಪುನಾರಂಭಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದು, ಡಿಸೆಂಬರ್‌ ವೇಳೆಗೆ ಎರಡು, ಎಪ್ರಿಲ್‌ನಲ್ಲಿ ಎರಡು ಸೇರಿ ಒಟ್ಟು ನಾಲ್ಕು ಕಾರ್ಖಾನೆಗಳು ಆರಂಭವಾಗಲಿವೆ. 2023ರಲ್ಲಿ ಇನ್ನೊಂದು ಕಾರ್ಖಾನೆ ರಸಗೊಬ್ಬರ ಉತ್ಪಾದನೆ ಆರಂಭಿಸಲಿದೆ. ಈ ಹಿಂದೆ ರಸಗೊಬ್ಬರದ ಕೊರತೆ ದೇಶದ ಅನೇಕ ಕಡೆ ಕಂಡು ಬರುತ್ತಿತ್ತು. ಕಳೆದ 7 ವರ್ಷಗಳಿಂದ ಒಂದೆರಡು ಕಡೆ ಬಿಟ್ಟರೆ ಕೊರತೆ ಕಂಡು ಬಂದಿಲ್ಲ. ರಸಗೊಬ್ಬರ ಸಾಗಣೆ ಸಮಸ್ಯೆಗಳಿವೆ. ಅದನ್ನು ಸರಿಪಡಿಸಲಾಗುವುದು. ರಾಜ್ಯ ಸರಕಾರಗಳು ಯಾವ ಜಿಲ್ಲೆಗೆ ಎಷ್ಟು ರಸಗೊಬ್ಬರ ಬೇಕೆಂದು ಪ್ರಸ್ತಾವನೆ ಸಲ್ಲಿಸಿದರೆ ಪೂರೈಕೆ ಮಾಡಲಾಗುವುದು. ಜಿಲ್ಲೆ ಮತ್ತು ತಾಲೂಕುವಾರು ರಸಗೊಬ್ಬರ ಬೇಡಿಕೆ ಮಾಹಿತಿ ಪಡೆದು ನಿಖರವಾದ ಪ್ರಸ್ತಾವನೆ ಸಲ್ಲಿಕೆಗೆ ರಾಜ್ಯಗಳಿಗೆ ಸೂಚಿಸಲಾಗಿದೆ. ಕಳಪೆ ರಸಗೊಬ್ಬರ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಔಷಧ ಬೆಲೆ ನಿಯಂತ್ರಣ: ಔಷಧಗಳ ಉತ್ಪಾದನೆಯಲ್ಲಿ ಭಾರತ ವಿಶ್ವಕ್ಕೆ ಚಾಂಪಿಯನ್‌ ಆಗಿದೆ. ಬಡವರು ಸೇರಿ ಜನರ ಆರೋಗ್ಯ ಕಾಳಜಿಯೊಂದಿಗೆ ಕಡಿಮೆ ದರದಲ್ಲಿ ಔಷಧ, ವೈದ್ಯಕೀಯ ಸಲಕರಣೆಗಳು ದೊರೆಯಬೇಕೆಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಔಷಧ ಬೆಲೆ ನಿಯಂತ್ರಣ ಕ್ರಮ ಕೈಗೊಂಡಿದೆ. ಹಿಂದಿನ ಯುಪಿಎ ಸರಕಾರದಲ್ಲಿ ಬೆಲೆ ನಿಯಂತ್ರಣವೇ ಇರಲಿಲ್ಲ. 2007-08ರಲ್ಲಿ ದೇಶದಲ್ಲಿ 86 ಜನೌಷಧ ಕೇಂದ್ರಗಳಿದ್ದವು. ಪ್ರಧಾನಿಯವರ ವಿಶೇಷ ಕಾಳಜಿಯೊಂದಿಗೆ ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ಸುಮಾರು 7,900 ಜನೌಷಧ ಕೇಂದ್ರಗಳು ಆರಂಭವಾಗಿವೆ ಎಂದರು.
ನಿರುದ್ಯೋಗಿ ಯುವಕ-ಯುವತಿಯರಿಗೆ ಸಿಪೆಟ್‌ ಸಂಸ್ಥೆ ಮೂಲಕ ತರಬೇತಿ ಹಾಗೂ ಉದ್ಯೋಗಾವಕಾಶ ದೊರಕಿಸಲಾಗುವುದು. ಯುಪಿಎ 10 ವರ್ಷಗಳಲ್ಲಿ 70 ಸಾವಿರ ಯವ ಕರಿಗೆ ತರಬೇತಿ ನೀಡಿದ್ದರೆ, ಎನ್‌ಡಿಎ ಸರಕಾರ 5 ವರ್ಷಗಳಲ್ಲಿ 4.86 ಲಕ್ಷ ಯುವಕರಿಗೆ ತರಬೇತಿ ನೀಡಿ, ಉದ್ಯೋಗವಕಾಶ ಕಲ್ಪಿಸಿದೆ ಎಂದರು.

Advertisement

ರಾಜ್ಯದಲ್ಲಿ 2 ಸೋಲಾರ್‌ ಪಾರ್ಕ್‌ ಸ್ಥಾಪನೆಗೆ ಯತ್ನ
ನವೀಕರಿಸಬಹುದಾದ ಇಂಧನ ಮೂಲಗಳ ಸಮರ್ಪಕ ಬಳಕೆ ಅಗತ್ಯವಿದೆ. ಸೌರ ವಿದ್ಯುತ್‌ ಶಕ್ತಿ ಉತ್ಪಾದನೆಗೆ ಕರ್ನಾಟಕ ಹಾಗೂ ಕೇರಳದಲ್ಲಿ ಉತ್ತಮ ಅವಕಾಶವಿದೆ. ರಾಜ್ಯದ ಪಾವಗಡದಲ್ಲಿ ಸುಮಾರು 12 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕೆ ಜಮೀನನ್ನು ರಾಜ್ಯ ಸರಕಾರಗಳೇ ನೀಡಬೇಕು. ರಾಜ್ಯದಲ್ಲಿ ಇನ್ನೂ ಎರಡು ಸೋಲಾರ್‌ ಪಾರ್ಕ್‌ಗಳ ನಿರ್ಮಾಣ ನಿಟ್ಟಿನಲ್ಲಿ ಸಿಎಂ ಜತೆ ಚರ್ಚಿಸುತ್ತೇನೆ. ಅದೇ ರೀತಿ ಕೇರಳದ ಮುಖ್ಯಮಂತ್ರಿಯೊಂದಿಗೂ ಚರ್ಚಿಸುತ್ತೇನೆ. ಕಳೆದ ಏಳು ವರ್ಷಗಳಲ್ಲಿ ವಿದ್ಯುತ್‌ ಉತ್ಪಾದನೆ ಅಧಿಕವಾಗಿದ್ದು, ಕರ್ನಾಟಕ ನೆರೆ ರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್‌ ನೀಡತೊಡಗಿದೆ. ರೈತರಿಗೆ ಮೂರು ಫೇಸ್‌ ಗುಣಮಟ್ಟದ ವಿದ್ಯುತ್‌ ನೀಡಲಾಗುತ್ತಿದೆ. ವಿದ್ಯುತ್‌ ಉತ್ಪಾದನೆ ಹೆಚ್ಚಳ ನಿಟ್ಟಿನಲ್ಲಿ ಸೌರಶಕ್ತಿ, ಪವನಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಇದರ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತ ಗ್ರೀನ್‌ ಎನರ್ಜಿ ದೇಶವಾಗಿಸುವ ಪ್ರಧಾನಿ ನರೇಂದ್ರ ಮೋದಿ ಆಶಯವನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸಚಿವ ಖೂಬಾ ತಿಳಿಸಿದರು.

ಉದ್ಯೋಗ ಸೃಷ್ಟಿ ಯೋಜನೆ
ಬೀದರ್‌ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವಂಥ ಮತ್ತು ಅಭಿವೃದ್ಧಿಗೆ ಪೂರಕವಾಗಬಲ್ಲ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನಿಸುವುದಾಗಿ ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದರು.

ನನ್ನ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವೆ. “ಕಾಯಕ ಸಂಸ್ಕೃತಿ’ಗೆ ನನಗೆ ಪ್ರಧಾನಿ ನರೇಂದ್ರ ಮೋದಿ ಪ್ರೇರಣೆಯಾಗಿದ್ದಾರೆ. ಬೀದರ್‌ ಜಿಲ್ಲೆಗೆ ಬಂಡವಾಳ ಹೂಡಿಕೆದಾರರ ಆಕರ್ಷಣೆಯೊಂದಿಗೆ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳುತ್ತೇನೆ.
– ಭಗವಂತ ಖೂಬಾ, ಹೊಸ , ನವೀಕರಿಸ ಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ
**
ಭ್ರಷ್ಟಾಚಾರ ರಹಿತ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ : ಸಚಿವ ಎ. ನಾರಾಯಣಸ್ವಾಮಿ
ಬೆಂಗಳೂರು: “ಚಮ್ಮಾರನ ಮಗನಾಗಿ ಹುಟ್ಟಿದ್ದ ನನಗೆ ಬಡತನ, ಹಸಿವು, ನೋವುಗಳ ಅನುಭವವಿದ್ದು, ಜನರಿಂದ ಇವುಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ಪ್ರತಿ ಪೈಸೆಗೂ ಲೆಕ್ಕವಿಟ್ಟು, ಭ್ರಷ್ಟಾಚಾರ ರಹಿತ ಮತ್ತು ಸಾಮಾಜಿಕ ನ್ಯಾಯವೇ ನನ್ನ ಆದ್ಯತೆಯಾಗಿರುತ್ತದೆ..’

– ಇದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಹಾಯಕ ಸಚಿವ ಎ. ನಾರಾಯಣಸ್ವಾಮಿ ಮಾತುಗಳು.

“ಉದಯವಾಣಿ’ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ವಿಶಾಲ ವ್ಯಾಪ್ತಿ ಹೊಂದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಇಲಾಖೆಯ ಮೂಲಕ ಸಹಾಯ ಮಾಡಬಹುದಾಗಿದೆ. ಒಪ್ಪತ್ತಿಗೂ ಊಟ ಇಲ್ಲದ ಮನೆಯಲ್ಲಿ ಹುಟ್ಟಿದ್ದೇನೆ. ಬಡ ತನದಿಂದ ಶಾಲೆಗೆ ತೆರಳಲು ಪರದಾಡಿದ್ದೇನೆ. ಚಮ್ಮಾರನ ಮಗನಾಗಿ ಹುಟ್ಟಿದ್ದ ನನಗೆ ಬಡತನ, ಹಸಿವು, ನೋವುಗಳ ಅನು ಭವವಿದ್ದು, ಈ ಸಾಮಾಜಿಕ ಪಿಡುಗುಗಳನ್ನು ಜನರಿಂದ ದೂರ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಕೇಂದ್ರ ಸರಕಾರವು ಈಗಾಗಲೇ ಬಡ, ಹಿಂದುಳಿದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಅವುಗಳನ್ನು ತಲುಪಿಸಲಾಗುವುದು. ಈಗಾಗಲೇ ಇರುವ ಯೋಜನೆಗಳು ಜನರನ್ನು ಆರ್ಥಿಕ ಸಶಕ್ತೀಕರಣ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆಯೋ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟಾರೆ ಇಲಾಖೆಯಲ್ಲಿ ಕಾರ್ಯಚಟುವಟಿಕೆಯಲ್ಲಿ ದೊಡ್ಡ ಸುಧಾರಣೆ ತರುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕದ ಮಾದರಿ: ರಾಜ್ಯದ ಹಲವು ಯೋಜನೆಗಳು ಮಾದರಿಯಾಗಿದ್ದು, ಅವುಗಳಲ್ಲಿ ಎಸ್‌ಟಿಪಿ, ಟಿಎಸ್‌ಪಿ ಯೋಜನೆ ಅನುಷ್ಠಾನ, ವಸತಿ ಶಾಲೆಗಳ ಯೋಜನೆಗಳು ಮತ್ತು ಆ ಶಾಲೆಗಳು ಉತ್ತಮ ಫ‌ಲಿತಾಂಶ ನೀಡುತ್ತಿರುವುದು ಪ್ರಮುಖವಾಗಿದೆ. ಈ ರೀತಿ ರಾಜ್ಯದ ಮಾದರಿ ಯೋಜನೆಗಳನ್ನು ದೇಶಾದ್ಯಂತ ಜಾರಿಗೆ ಅನೇಕ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸಿದ್ದೇನೆ. ಪ್ರತೀ ಜಿಲ್ಲೆಯಲ್ಲಿಯೂ ಕೌಶಲ ತರಬೇತಿಗಳಿಗೆ ಆದ್ಯತೆ ನೀಡಲಾಗುತ್ತದೆ. ಎಲ್ಲ ವಿಧದ ಸ್ಥಳೀಯ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೂ ಯೋಜನೆಯ ಜವಾಬ್ದಾರಿಗಳನ್ನು ಸಫ‌ಲತೆಗೆ ಶ್ರಮಿಸಲು ಸೂಚಿಸಲಾಗುವುದು ಎಂದರು.

ಭದ್ರಾ, ಎತ್ತಿನಹೊಳೆ ನೀರಾವರಿ ಯೋಜನೆ, ಚಿತ್ರದುರ್ಗದ ಮೆಡಿಕಲ್‌ ಕಾಲೇಜು, ದಾವಣಗೆರೆ -ಚಿತ್ರದುರ್ಗ ರೈಲು ಯೋಜನೆ ಸದ್ಯ ನಮ್ಮ ಮುಂದಿರುವ ಕಾರ್ಯಗಳಾಗಿದ್ದು, ಇವುಗಳನ್ನು ಯಾವುದೇ ಅಹಂ, ಸ್ಥಾನಮಾನದ ಗರ್ವ ಇಲ್ಲದೆ ವಿವಿಧ ಇಲಾಖೆ, ಸಚಿವರ ನೆರವು ಕೋರುವುದರ ಮೂಲಕ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಪ್ರತಿ ಪೈಸೆಗೂ ಲೆಕ್ಕ
ಅಂಗವಿಕಲರ ಅಭಿವೃದ್ಧಿಗೆ, ಮಾದಕವ್ಯಸನಿಗಳ ಪುನರ್ವಸತಿ ಕೇಂದ್ರ ಮತ್ತು ವೃದ್ಧಾಶ್ರಮಗಳ ನಿರ್ವಹಣೆಗಾಗಿಯೇ ಕೇಂದ್ರ ಸರಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ಈ ಯೋಜನೆಗಳ ಅನುಷ್ಠಾನಗೊಳಿಸುವವರ ಬಳಿ ಲೆಕ್ಕ ಇಲ್ಲ. ಆದರ್ಶ ಗ್ರಾಮ ಯೋಜನೆ ಇದ್ದು, ಇವುಗಳ ನಿಖರ ಅನುಷ್ಠಾನ ಮಾತ್ರ ಮರೀಚಿಕೆಯಾಗಿದೆ. ಇವೆಲ್ಲವುಗಳನ್ನು ಗಂಭೀರವಾಗಿ ತೆರೆದುಕೊಂಡಿದ್ದೇನೆ. ಕಳೆದ ಮೂರು ದಿನಗಳಿಂದ ಇಲಾಖೆ ಕುರಿತು ಅಧ್ಯಯನ ನಡೆಸಿ, ವಿಮರ್ಶೆ ಮಾಡಲಾಗುತ್ತಿದೆ. ಯೋಜನೆಗಳ ಪ್ರತೀ ಪೈಸೆಗೂ ಲೆಕ್ಕವಿಟ್ಟು ಭ್ರಷ್ಟಾಚಾರ ರಹಿತ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ದಲ್ಲಾಳಿಗಳನ್ನು ದೂರವಿಡುತ್ತೇನೆ
ಸಮಾಜ ಕಲ್ಯಾಣ ಇಲಾಖೆ ಎಂದರೆ ಅವುಗಳ ಯೋಜನೆ ಫ‌ಲ ಪಡೆಯುವುದಕ್ಕೆ ದಲ್ಲಾಳಿ ಕಾಟ ಇರುತ್ತದೆ ಎಂಬ ಅಭಿಪ್ರಾಯ ಇದೆ. ಇದನ್ನು ದೂರ ಮಾಡುವ ನಿಟ್ಟಿನಲ್ಲಿ ಇಲಾಖೆಯ ಕಚೇರಿಗಳಲ್ಲಿ ತಂತ್ರಜ್ಞಾನ ಅಳವಡಿಸಿ ಪಾರದರ್ಶಕ ಆಡಳಿತ ತರುವುದಕ್ಕೆ ಎಲ್ಲ ರಾಜ್ಯಗಳಿಗೂ ಸೂಚನೆ ನೀಡುತ್ತೇನೆ ಎಂದು ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಪಕ್ಷ ನಿಷ್ಠೆ, ಕಾರ್ಯವೈಖರಿ ಗುರುತಿಸಿ ದೊಡ್ಡ ಜವಾಬ್ದಾರಿ ನೀಡಿದೆ. ಆನೇಕಲ್‌ನಲ್ಲಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷ ಅವಕಾಶ ಮಾಡಿಕೊಟ್ಟಿತು. ಆ ಬಳಿಕ ಶಾಸಕರಾಗಿ, ರಾಜ್ಯದ ಸಚಿವನಾಗಿ ಕಾರ್ಯ ನಿರ್ವಹಿಸಿದೆ. ಈಗ ಸಂಸದನಾಗಿ ನನ್ನನ್ನು ಒಪ್ಪಿಕೊಂಡು ಗೆಲುವು ನೀಡಿದ ಚಿತ್ರದುರ್ಗ ಜಿಲ್ಲೆಯ ಜನರಿಗೆ ಋಣಿಯಾಗಿರುತ್ತೇನೆ.
– ಎ. ನಾರಾಯಣಸ್ವಾಮಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಹಾಯಕ ಸಚಿವ
**
ಕಟ್ಟಕಡೆಯ ರೈತನಿಗೂ ಯೋಜನೆ ತಲುಪಿಸಲು ಪ್ರಯತ್ನ : ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು: “ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿಯೂ ದೇಶದ ಜನರಿಗೆ ಆಹಾರ ಕೊರತೆ ಎದುರಾಗದಂತೆ ಶ್ರಮವಹಿಸಿದ ರೈತರಿಗೆ ಋಣಿಯಾಗಿದ್ದೇನೆ. ಕಟ್ಟಕಡೆಯ ರೈತನಿಗೂ ಕೇಂದ್ರ ಸರಕಾರದ ಯೋಜನೆ ತಲುಪುವಂತೆ ಕಾರ್ಯನಿರ್ವಹಿಸುತ್ತೇನೆ….’
– ಇದು ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಮಾತು.

“ಉದಯವಾಣಿ’ ವೆಬಿನಾರ್‌ನಲ್ಲಿ ಮಾತನಾಡಿದ ಅವರು, “ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಅನೇಕ ದೇಶಗಳಲ್ಲಿ ತರಕಾರಿ, ಹಾಲು, ಹಣ್ಣು, ಧಾನ್ಯ ಸೇರಿ ಹಲವು ಆಹಾರ ಸಾಮಗ್ರಿಗಳ ಕೊರತೆಯಾಗಿತ್ತು. ಆದರೆ, ನಮ್ಮ ದೇಶದಲ್ಲಿ ಸುದೀರ್ಘ‌ ಲಾಕ್‌ಡೌನ್‌ನಿಂದ ರಫ್ತು, ಆಮದು, ಕೈಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡರೂ, ಆಹಾರ ಪದಾರ್ಥಗಳ ಕೊರತೆಯಾಗಲಿಲ್ಲ. ಕಾರ್ಮಿಕರ ವಲಸೆ ಸಂದರ್ಭದಲ್ಲಿ ಸೂಕ್ತ ಪೂರೈಕೆಯಾಗದೇ ಒಂದಿಷ್ಟು ಸಮಸ್ಯೆಯಾಗಿದ್ದು ಬಿಟ್ಟರೆ ಎಲ್ಲಿಯೂ ಆಹಾರ ಸಾಮಗ್ರಿ ದಾಸ್ತಾನು ಕೊರತೆ ತಲೆದೋರಲಿಲ್ಲ. ಇದರ ಹಿರಿಮೆ ರೈತರಿಗೆ ಸಲ್ಲಬೇಕಿದ್ದು, ಇದಕ್ಕೆ ಋಣಿಯಾಗಿರುತ್ತೇನೆ. ಈ ನಿಟ್ಟಿನಲ್ಲಿ ರೈತರಿಗಾಗಿಯೇ ಮೋದಿ ಜೀ ಜಾರಿಗೆ ತಂದಿರುವ ಕಿಸಾನ್‌ ಸಮ್ಮಾನ್‌, ಫ‌ಸಲ್‌ ಭೀಮಾ, ಹನಿ ನೀರಾವರಿಗೆ ಶೇ.90ರಷ್ಟು ಸಬ್ಸಿಡಿ, ಜಲಶಕ್ತಿ ಮಿಷನ್‌ ಸೇರಿ ಹಲವು ಯೋಜನೆಗಳನ್ನು ದೇಶದ ಕಟ್ಟಕಡೆಯ ರೈತನಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಸಚಿವ ಸ್ಥಾನದ ಕಾರ್ಯ ವೈಖರಿಯಲ್ಲಿ ರಾಜ್ಯ ಮತ್ತು ಕೇಂದ್ರಕ್ಕೆ ಸಾಕಷ್ಟು ವ್ಯತ್ಯಾಸವಿದೆ. ರಾಜ್ಯದಲ್ಲಿ ಯೋಜನೆಯನ್ನು ಅಳವಡಿಸುವ ಜಾಗದಲ್ಲಿರುತ್ತೇವೆ. ಇಲ್ಲಿ ಯೋಜನೆ ರೂಪಿಸುವ ಜಾಗದಲ್ಲಿದ್ದೇವೆ. ಸದ್ಯ ಕೃಷಿಗೆ ಸಂಬಂಧಿಸಿದ ಮೂರು ಪ್ರಮುಖ ಕಾಯ್ದೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಇವುಗಳ ಕುರಿತು ಜನರಿಗೆ ಅರಿವು ಮೂಡಿಸುವ, ಹೇಗೆ ರೈತರಿಗೆ ಅನುಕೂಲವಾಗುತ್ತದೆ ಎನ್ನುವುದನ್ನು ತಿಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದ್ದು, ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಉತ್ತಮವಾಗಿ ನಿಭಾಯಿಸು ತ್ತೇನೆಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಸಮಸ್ಯೆ ಅರಿಯಲು ರಾಜ್ಯಾದ್ಯಂತ ಪ್ರವಾಸ
ಬೀದರ್‌, ಕೋಲಾರ, ಕರಾವಳಿ, ಬೆಳಗಾವಿ, ಮೈಸೂರು ಹೀಗೆ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಕೃಷಿ ಪದ್ಧತಿಯಲ್ಲಿ ಭಿನ್ನತೆ ಇದೆ. ಅಂತೆಯೇ ರೈತರ ಸಮಸ್ಯೆಗಳು ಕೂಡಾ ವಿಭಿನ್ನವಾಗಿರುತ್ತವೆ. ಪ್ರಮುಖವಾಗಿ ಉಡುಪಿ, ಚಿಕ್ಕಮಗಳೂರು ಕಡೆಗಳಲ್ಲಿ ರೈತರು ಕಾಡು, ಕಾಡು ಪ್ರಾಣಿ ಹಾಗೂ ಕಾನೂನು ಜತೆಯಲ್ಲಿ, ಕೋಲಾರ ಭಾಗದ ರೈತರು ಮಳೆ ನೀರಿನ ಹೋರಾಟದೊಂದಿಗೆ ಕೃಷಿ ಚಟುವಟಿಕೆಗಳನ್ನು ಮಾಡುತ್ತಾರೆ. ಇವುಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಅಡಿಕೆ ಪ್ರಕರಣ; ಆರೋಗ್ಯ ಸಚಿವ ಭೇಟಿ
ಅಡಿಕೆ ಕಾನೂನು ಹೋರಾಟ 10 ವರ್ಷಗಳಿಂದ ನಡೆಯುತ್ತಿದೆ. ಸದ್ಯ ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದ್ದು, ಅತ್ಯುತ್ತಮ ವಕೀಲರನ್ನು ಹಾಕಿ ಬೆಳೆಗಾರರ ಪರವಾಗಿ ತೀರ್ಪು ಬರುವಂತೆ ವಾದ ಮಾಡಲು ಕ್ರಮವಹಿಸುವಂತೆ ನೂತನ ಆರೋಗ್ಯ ಸಚಿವರಿಗೆ ರಾಜ್ಯದ ಎಲ್ಲ ಸಚಿವರು ಮನವಿ ಮಾಡುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಆಗಸ್ಟ್‌ 15 ರ ಬಳಿಕ ರಾಜ್ಯಕ್ಕೆ
ಸದ್ಯ ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ಅಧ್ಯಯನ, ಅಧಿವೇಶನ ತಯಾರಿ ನಡೆಯುತ್ತಿದೆ. ಲೋಕ ಸಭೆ ಅಧಿವೇಶನ ಮುಗಿಯು ವವರೆಗೂ ರಾಜ್ಯಕ್ಕೆ ಮರಳದಂತೆ ಪ್ರಧಾನಿಗಳು ಸೂಚನೆ ನೀಡಿದ್ದಾರೆ. ಆ.15ರ ಬಳಿಕ ಬಂದು ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಜನ ಪರ ಕೆಲಸ ಮಾಡುವುದಾಗಿ ಮೂವರು ಸಚಿವರು ತಿಳಿಸಿದ್ದಾರೆ.

ಡಾ| ಹೆಗ್ಗಡೆ ನೇತೃತ್ವದಲ್ಲಿ ಮತ್ತೂಮ್ಮೆ ಮನವಿ
ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಈ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಬಳಿ ಮಾತನಾಡಿದ್ದರು. ಈ ಮತ್ತೂಮ್ಮೆ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲೇ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ನೀಡುತ್ತೇವೆ. ಭಾಷೆಗೆ ಸೂಕ್ತ ಸ್ಥಾನಮಾನ ಸಿಗುವವರೆಗೂ ನಿರಂತರ ಹೋರಾಟ ಇರುತ್ತದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ರಾಜ್ಯದ 25 ಸಂಸದರ ನಡುವೆ ನನಗೆ ಅನಿರೀಕ್ಷಿತ ಅವಕಾಶವನ್ನು ಮೋದಿಜೀ ನೀಡಿದ್ದಾರೆ. ನಮ್ಮ ರಾಜ್ಯದ ರೈತರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತರುವುದು. ಜತೆಗೆ ಕೇಂದ್ರ ಸರಕಾರದ ಎಲ್ಲÉ ಯೋಜನೆಗಳನ್ನು ನಮ್ಮ ರಾಜ್ಯದ ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
– ಶೋಭಾ ಕರಂದ್ಲಾಜೆ, ರಾಜ್ಯ ಸಚಿವೆ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next