Advertisement

ಈ ಬಾರಿ ಕೆಎಸ್‌ಆರ್‌ಟಿಸಿಯಿಂದ ಹೊಸ ಬಸ್‌ ಖರೀದಿಗೆ ತಡೆ !

10:14 PM Nov 11, 2020 | mahesh |

ಮಹಾನಗರ: ಕೊರೊನಾ ಕಾರಣದಿಂದಾಗಿ ಸಾರಿಗೆ ವಲಯಕ್ಕೆ ಪೆಟ್ಟು ಬಿದ್ದಿದ್ದು, ಕೆಎಸ್‌ಆರ್‌ಟಿಸಿ ಕೋಟ್ಯಂತರ ರೂ. ನಷ್ಟ ಅನುಭವಿಸಿದೆ. ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಹೊಸ ಬಸ್‌ ಖರೀದಿ ಮಾಡದಿರಲು ನಿಗಮ ನಿರ್ಧರಿಸಿದೆ. ಅದೇ ರೀತಿ ವರ್ಷಂಪ್ರತಿ ನಡೆಯುತ್ತಿದ್ದ ಬಸ್‌ ಸ್ಕ್ರಾಪ್‌ ಯೋಜನೆ ನಿಯಮವನ್ನು ಸಡಿಲಗೊಳಿಸಲು ತೀರ್ಮಾನಿಸಿದೆ.

Advertisement

ಕೆಎಸ್‌ಆರ್‌ಟಿಸಿಯಿಂದ ಪ್ರತೀ ವರ್ಷ ಸಾಮಾನ್ಯವಾಗಿ ವಿವಿಧ ಮಾದರಿಗಳ ಬಸ್‌ಗಳನ್ನು ಖರೀದಿ ಮಾಡಲಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ನಿಗಮ ನಷ್ಟದತ್ತ ಸಾಗುತ್ತಿದ್ದು, ಸಂಪನ್ಮೂಲ ಕ್ರೋಡೀಕರಣ ಸದ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವರ್ಷಾಂತ್ಯಕ್ಕೆ ಆದಾಯ ಚೇತರಿಸುವ ನಿರೀಕ್ಷೆ ಇದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಇದೇ ಕಾರಣಕ್ಕೆ ಹೊಸ ಬಸ್‌ ಖರೀದಿಸುವುದನ್ನು ಸದ್ಯಕ್ಕೆ ತಡೆಯಲಾಗಿದೆ.

ಗುತ್ತಿಗೆ ಆಧಾರದಲ್ಲಿ ಬಸ್‌ ಪಡೆಯಲು ಚಿಂತನೆ
ಕೆಎಸ್‌ಆರ್‌ಟಿಸಿಯಲ್ಲಿ ಒಟ್ಟು 16 ವಿಭಾಗಗಳಿದ್ದು, ಸದ್ಯ 8,738 ಬಸ್‌ಗಳಿವೆ. ಇದರಲ್ಲಿ ಅತೀ ಹೆಚ್ಚು ಅಂದರೆ 759 ಬಸ್‌ಗಳು ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿವೆ. ಅತೀ ಕಡಿಮೆ ಅಂದರೆ 295 ಬಸ್‌ಗಳು ಚಿತ್ರದುರ್ಗ ವಿಭಾಗದಲ್ಲಿವೆ. ನಿಗಮಕ್ಕೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಭವಿಷ್ಯದಲ್ಲಿ ಹೊಸ ಬಸ್‌ ಖರೀದಿಯ ಬದಲು ಗುತ್ತಿಗೆ ಆಧಾರದಲ್ಲಿ ಬಸ್‌ ಪಡೆಯುವ ಬಗ್ಗೆಯೂ ಕೆಎಸ್‌ಆರ್‌ಟಿಸಿ ಚಿಂತನೆ ನಡೆಸುತ್ತಿದೆ.

ಬಸ್‌ ನಿಷ್ಕ್ರಿಯ ಪ್ರಕ್ರಿಯೆಗೆ ಹಿನ್ನಡೆ
ಸಾಮಾನ್ಯವಾಗಿ ಪ್ರತೀ ವರ್ಷ ಶೇ. 10ರಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೆ ಈ ಬಾರಿ ಸುಮಾರು ಶೇ.5ರಷ್ಟು ಬಸ್‌ಗಳನ್ನು ಮಾತ್ರ ನಿಷ್ಕ್ರಿಯಗೊಳಿಸಲು ನಿಗಮ ನಿರ್ಧರಿಸಿದೆ. ಸಂಚಾರಕ್ಕೆ ಯೋಗ್ಯವಿರುವ, ದೃಢತೆ ಪ್ರಮಾಣ ಪತ್ರ ಹೊಂದಿದ ಬಸ್‌ಗಳನ್ನು ಮರು ಬಳಕೆ ಮಾಡಲಾಗುತ್ತದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಷ್ಕ್ರಿಯ ಗೊಳಿಸಲು ನಿಗಮ ಕೆಲವೊಂದು ಮಾರ್ಗಸೂಚಿ ರೂಪಿಸಿದೆ. ಅದರಂತೆ 9 ಲಕ್ಷ ಕಿ.ಮೀ. ಕ್ರಮಿಸಿದ ಸಾಮಾನ್ಯ ಸಾರಿಗೆ ಬಸ್‌, 13 ಲಕ್ಷ ಕಿ.ಮೀ. ಕ್ರಮಿಸಿದ ವೋಲ್ವೋ ಬಸ್‌ ಸಾðಪ್‌ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಂದು ಬಸ್‌ ವರ್ಷದಲ್ಲಿ 1.80 ಲಕ್ಷ ಕಿ.ಮೀ. ಕ್ರಮಿಸುತ್ತದೆ. ಹೀಗಿದ್ದಾಗ ಹೊಸ ಬಸ್‌ ಸರಾಸರಿ 8 ವರ್ಷಗಳ ಲ್ಲಿ ನಿಷ್ಕ್ರಿಯಗೊಳ್ಳುತ್ತದೆ.

Advertisement

ಕೇಂದ್ರ ಕಚೇರಿಗೆ ಮಾಹಿತಿ
ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಐದು ವರ್ಷಗಳಿಂದ ಮಂಗಳೂರು-ಮಣಿಪಾಲ ನಡುವಣ ಎ.ಸಿ. ಬಸ್‌ ಸಂಚರಿಸುತ್ತಿತ್ತು. ಲಾಕ್‌ಡೌನ್‌ ಆರಂಭದ ವೇಳೆ ಈ ಸೇವೆಯನ್ನು ರದ್ದುಗೊಳಿಸಲಾಗಿದ್ದು, ಇನ್ನೂ ಆರಂಭ ಗೊಳ್ಳಲಿಲ್ಲ. ಪ್ರತೀ ಬಸ್‌ ನಿಗದಿತ ಕಿ.ಮೀ.ಗಿಂತ ಹೆಚ್ಚು ಸಂಚರಿಸಿದ ಹಿನ್ನೆಲೆಯಲ್ಲಿ ಆಗಾಗ ಕೆಲವೊಂದು ತಾಂತ್ರಿಕ ಸಮಸ್ಯೆ ಉಂಟಾಗುತ್ತಿತ್ತು. ಇದೇ ಕಾರಣಕ್ಕೆ ಎಸಿ ಬಸ್‌ ಸಂಚಾರ ನಿಲ್ಲಿಸಲಾಗಿದೆ. ಈ ಕುರಿತು ಕೇಂದ್ರ ಕಚೇರಿಗೂ ಮಾಹಿತಿ ನೀಡಲಾಗಿದೆ. ಸದ್ಯ ಆ ವೇಳಾಪಟ್ಟಿಯಲ್ಲಿ ನಾನ್‌ ಎಸಿ ಬಸ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ಸೀಮಿತ ಟ್ರಿಪ್‌ ಮಾತ್ರ ಸಂಚರಿಸುತ್ತಿದೆ.

10 ವರ್ಷಗಳಿಗೆ ಮೇಲ್ಪಟ್ಟ 565 ಬಸ್‌ಗಳು
ರಾಜ್ಯದ 16 ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿ 10 ವರ್ಷ ಮೇಲ್ಪಟ್ಟ 565 ಬಸ್‌ಗಳಿವೆ. ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ 11, ರಾಮನಗರ-0, ತುಮಕೂರು-57, ಕೋಲಾರ-18, ಚಿಕ್ಕಬಳ್ಳಾಪುರ-32, ಮೈಸೂರು ನಗರ ಸಾರಿಗೆ-188, ಮೈಸೂರು ಗ್ರಾಮಾಂತರ-76, ಮಂಡ್ಯ-36, ಚಾಮರಾಜನಗರ-33, ಹಾಸನ-31, ಚಿಕ್ಕಮಗಳೂರು-0, ಮಂಗಳೂರು-44, ಪುತ್ತೂರು-20, ದಾವಣಗೆರೆ-2, ಶಿವಮೊಗ್ಗ -13, ಚಿತ್ರದುರ್ಗ ವಿಭಾಗದಲ್ಲಿ
4 ಬಸ್‌ಗಳಿವೆ.

ಹೊಸ ಬಸ್‌ ಖರೀದಿ ಇಲ್ಲ
ಕೆಎಸ್‌ಆರ್‌ಟಿಸಿ ಆದಾಯಕ್ಕೆ ಕೊರೊನಾ ಪರಿಣಾಮ ಬೀರಿದ್ದು, ಈಗಾಗಲೇ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಸಾಮಾನ್ಯವಾಗಿ ಪ್ರತೀ ವರ್ಷ ಶೇ.10ರಷ್ಟು ಬಸ್‌ಗಳನ್ನು ನಿಷ್ಕ್ರಿಯಗೊಳಿಸುತ್ತೇವೆ. ಈ ಬಾರಿ ಈ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದೇವೆ. ಆದಾಯ ಕ್ರೋಡೀಕರಣದ ನಿಟ್ಟಿನಲ್ಲಿ ಸದ್ಯಕ್ಕೆ ಹೊಸ ಬಸ್‌ ಖರೀದಿ ಮಾಡಲಾಗುವುದಿಲ್ಲ.
-ಚಂದ್ರಪ್ಪ, ಕೆಎಸ್‌ಆರ್‌ಟಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next