ನೆಲಮಂಗಲ: ಬಿರುಕು ಬಿಟ್ಟ ಕಟ್ಟಡ, ಮಳೆ ಬಂದಾಗ ಒಳಗೆ ನುಗ್ಗುವ ನೀರು, ಬಿದ್ದ ಮೇಲ್ಚಾವಣಿ ಸೇರಿದಂತೆ ಹಲವು ಸಮಸ್ಯೆಗಳು ಪಟ್ಟಣದ ಪೊಲೀಸರಿಗೆ ನೀಡಿದ ವಸತಿ ಗೃಹದ ಅವ್ಯವಸ್ಥೆಗೆ ಸಾಕ್ಷಿಯಾಗಿವೆ.
ಪಟ್ಟಣದ ಹೃದಯ ಭಾಗದಲ್ಲಿ ಪೊಲೀಸರಿಗೆ ನೀಡಲಾಗಿರುವ 27 ವಸತಿ ಗೃಹದ ಕೆಲವು ಮನೆಗಳು ಸಂಪೂರ್ಣ ಬೀಳುವ ಹಂತ ತಲುಪಿವೆ. ಹದಗೆಟ್ಟ ರಸ್ತೆ, ಮಳೆ ಬಂದು ವಿದ್ಯುತ್ ಇಲ್ಲದಿದ್ದರೆ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಪರ್ಯಾಯವಾಗಿ 32 ನೂತನ ವಸತಿ ಗೃಹ ನಿರ್ಮಿಸಿ ಐದಾರು ತಿಂಗಳಾದರೂ ಉದ್ಘಾಟನೆ ಮಾಡಲು ಮೀನಾಮೇಷ ಎಣಿಸಲಾಗುತ್ತಿದೆ.
ಉದ್ಘಾಟನೆ ಯಾವಾಗ? : ಸಮಾಜದ ಜನರ ರಕ್ಷಣೆಗೆ ಹಗಲು ರಾತ್ರಿ ದುಡಿಯುವ ಪೊಲೀಸರ ಕುಟುಂಬದ ನೆಮ್ಮದಿಗಾಗಿ ಉತ್ತಮ ಮನೆಗಳಿಲ್ಲದೆ, ಸಂಕಷ್ಟ ಅನುಭಸುತಿದ್ದರೂ, ಮೇಲಾಧಿಕಾರಿಗಳು ಮಾತ್ರ ವಸತಿ ಗೃಹಗಳನ್ನು ವಿತರಣೆ ಮಾಡಲು ಮುದಾಗುತ್ತಿಲ್ಲ. ಹಳೆಯ ಕಟ್ಟಡದಲ್ಲಿರುವ ಪೊಲೀಸರ ಸಮಸ್ಯೆಗೆ ಮುಕ್ತಿ ಯಾವಾಗ? ನೂತನ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಯಾವಾಗ? ಎಂಬುದು ತಿಳಿಯದಾಗಿದೆ.
ಭರವಸೆಯಲ್ಲಿ ಪೊಲೀಸರು : ಹಳೆಯ ಕಟ್ಟಡಗಳ ದುಸ್ಥಿತಿಯನ್ನು ಕಣ್ಣಾರೆ ಕಂಡ ಜಿಲ್ಲಾ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಸ್ಥಳ ಪರಿಶೀಲನೆ ವೇಳೆ 3ದಿನಗಳಲ್ಲಿ ಮನೆಗಳನ್ನು ಪೊಲೀಸರಿಗೆ ಹಸ್ತಾಂತರಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ, 2 ತಿಂಗಳಾದದರು ಮನೆ ವರ್ಗಾವಣೆ ಮಾಡದೆ ವಿಳಂಬ ಮಾಡುತ್ತಿರುವುದು ಏಕೆ? ಎಸ್ಪಿ ಅವರ ಭರವಸೆ ಪೊಲೀಸರಿಗೆ ಯಾಕೆ ವರದಾನವಾಗಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ನಾನು ಡಿವೈಎಸ್ಪಿಗೆ ವಸತಿ ನಿಲಯಗಳನ್ನು ಹಸ್ತಾಂತರಿಸಿ ಉದ್ಘಾಟನೆ ಮಾಡಲು ತಿಳಿಸಿದ್ದೇನೆ. ತಡವಾಗುತ್ತಿರುವ ಬಗ್ಗೆ ತಿಳಿದಿಲ್ಲ. ಇನ್ನೂ ಎರಡು-ಮೂರು ದಿನಗಳಲ್ಲಿ ಸಮಸ್ಯೆ ಬಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು.
–ರವಿ ಡಿ. ಚನ್ನಣ್ಣನವರ್, ಬೆಂ.ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ