Advertisement
ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಪಹಣಿಪತ್ರದ ಗೊಂದಲ ಇದ್ದು ಕೂಡಲೇ ಸರಿಪಡಿಸಿ ಸಮಸ್ಯೆ ಪರಿಹರಿಸಬೇಕೆಂದು ಉಲ್ಲೇಖೀಸಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹಾಗೂ ಕಾರ್ಕಳ ತಹಶೀಲ್ದಾರ್‌ಅವರಿಗೆ ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ರಘುವೀರ ಶೆಣೈ ಅವರು ಬರೆದಿರುವ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಈ ಮೂಲಕ ಅತೀ ಶೀಘ್ರ ಪಹಣಿ ತಿದ್ದುಪಡಿ ನಡೆದು ಮುಂಡ್ಕೂರು ಗ್ರಾಮ ಪಂಚಾಯತ್‌ನ ಜನಸಾಮಾನ್ಯರ ಆರೋಗ್ಯ ಕಾಪಾಡುವ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ವ ಸುಸಜ್ಜಿತ ನೂತನ ಕಟ್ಟಡ ಭಾಗ್ಯ ಲಭಿಸಲಿದೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆ ಉತ್ತಮವಾಗಿದ್ದರೂ ಇಲ್ಲಿನ ಆಸ್ಪತ್ರೆಯ ಕಟ್ಟಡ ಮಾತ್ರ ಹಳೆಯದಾಗಿದೆ. ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 1,783 ಕುಟುಂಬಗಳ 7,781 ಮಂದಿಯ ಆರೋಗ್ಯ ಕಾಪಾಡುತ್ತ ಬಂದಿರುವ ಆಸ್ಪತ್ರೆಗೆ ಹೊಸ ಕಟ್ಟಡದ ಆವಶ್ಯಕತೆಯಿದ್ದು ಪಹಣಿ ಪತ್ರದ ಸಮಸ್ಯೆ ಎದುರಾಗಿತ್ತು. ದೋಷದ ಮಾಹಿತಿ
ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯಲ್ಲಿ ಸರ್ವೆ ನಂಬ್ರ 340/1ಬಿ ರ 2.54 ಎಕರೆ ಸ್ಥಳದಲ್ಲಿ ಈ ಹಿಂದೆ 1960ರಲ್ಲಿ ನಿರ್ಮಾಣಗೊಂಡ ಈ ಆಸ್ಪತ್ರೆಯ ಜಾಗದ ಪಹಣಿ ಪತ್ರದ ಕಲಂ 9ರಲ್ಲಿ ಸರಕಾರ ಎಂದು ನಮೂದಾಗಿರುವುದು ಈ ಕಟ್ಟಡ ಪುನರ್‌ನಿರ್ಮಾಣ ಯೋಜನೆಗೆ ಅಡ್ಡಿಯಾಗಿತ್ತು. ಈ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್ ಆಡಳಿತ ಕಾರ್ಕಳ ಶಾಸಕರು ಹಾಗೂ ಜಿಲ್ಲಾ ಪಂಚಾಯತ್‌ಗೆ ಕಟ್ಟಡ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿದಾಗ ಈ ದೋಷದ ಮಾಹಿತಿ ಲಭ್ಯವಾಗಿತ್ತು. ಪಹಣಿ ಪತ್ರದಲ್ಲಿ ಸರಕಾರ ಎಂಬ ಪದದ ಬದಲಿಗೆ ಆರೋಗ್ಯ ಇಲಾಖೆ ಎಂಬುದಾಗಿ ತಿದ್ದುಪಡಿ ಮಾಡಿ ನಮೂದಿಸುವಂತೆ ಪಂಚಾಯತ್ ಸದಸ್ಯ ರಘುವೀರ ಶೆಣೈ ಮನವಿ ಮಾಡಿದ್ದರು. ಈಗ ಎಲ್ಲ ಕಡೆಗಳಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು ಮುಂಡ್ಕೂರಿನ ಜನತೆ ನೂತನ ಕಟ್ಟಡ ಭಾಗ್ಯಕ್ಕಾಗಿ ಕಾತರರಾಗಿದ್ದಾರೆ.
Related Articles
ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡದ ಜತೆಯಲ್ಲಿ ಹಲವಾರು ಬೇಡಿಕೆಗಳು ಈಡೇರಬೇಕಾಗಿದೆ. ಪ್ರತೀ ದಿನ ನೂರಕ್ಕೂ ಹೆಚ್ಚು ಜನಸಾಮಾನ್ಯರು ವೈದ್ಯಕೀಯ ಸೇವೆ, ಶುಶ್ರೂಷೆ ಹಾಗೂ ಮಾಹಿತಿಗಾಗಿ ಬರುತ್ತಿದ್ದು ಎಲ್ಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತಿದೆ. ಹೈಟೆಕ್ ಆಸ್ಪತ್ರೆ ಗಳಲ್ಲಿ ಸಿಗುವ ಹೆಚ್ಚಿನ ಸೌಲಭ್ಯಗಳನ್ನು ಇಲ್ಲಿನ ವೈದ್ಯಾದಿಕಾರಿಗಳು ಹಾಗೂ ಸಿಬಂದಿ ನೀಡುತ್ತಿದ್ದರೂ ಹಲವಾರು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. 4 ಉಪ ಕೇಂದ್ರಗಳಿರುವ ಈ ಆಸ್ಪತ್ರೆಯ ಮುಂಡ್ಕೂರು ಹಾಗೂ ಸಚ್ಚೇರಿಪೇಟೆ ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡ ಇದೆ. 4 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿ ಇದ್ದು, ಸದ್ಯಕ್ಕೆ 2 ಮಂದಿಯನ್ನಾದರೂ ನೀಡಿದರೆ ಉತ್ತಮ ಎನ್ನುವುದು ಜನರ ಅಹವಾಲು. ನೀರಿನ ವ್ಯವಸ್ಥೆಗೆ ಬೋರ್‌ವೆಲ್, ಸಿಬಂದಿಗೆ ವಸತಿಗೃಹದ ಆವಶ್ಯಕತೆಯಿದೆ.
Advertisement
ಕಾರ್ಕಳ ಶಾಸಕರು, ಉಡುಪಿ ಜಿಲ್ಲಾ ಪಂಚಾಯತ್, ಮುಂಡ್ಕೂರು ಗ್ರಾಮ ಪಂಚಾಯತ್ ಈ ಆಸ್ಪತ್ರೆಯ ನೂತನ ಕಟ್ಟಡದ ಬಗ್ಗೆ ಸಮಗ್ರ ಚಿಂತನ ನಡೆಸಲು ಸಕಾಲವಾಗಿದ್ದು, ಈಗಾಗಲೇ ಪಂಚಾಯತ್ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಶೀಘ್ರವೇ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ದೊರಕುವಲ್ಲಿ ಜನಪ್ರತಿನಿಧಿಗಳು ಅ ಧಿಕಾರಿಗಳು ಶ್ರಮಿಸಬೇಕಾಗಿದೆ.
60 ವರ್ಷ ಹಳೆಯದು1960ರಲ್ಲಿ ನಿರ್ಮಾಣಗೊಂಡ ಈ ಆಸ್ಪತ್ರೆಯ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾ ಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿ ಧಿಗಳ ಮುತುವರ್ಜಿಯಲ್ಲಿ ಇಲಾಖೆಯ ನೆರವಿನಿಂದ ಕೆಲವೊಂದು ಬಾರಿ ನವೀಕರಣಗೊಂಡದ್ದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣಗೊಳ್ಳದೇ ಇರು ವುದು ಈ ಭಾಗದ ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಈ ಹಿಂದೆ 2012ರಲ್ಲಿ ನಬಾರ್ಡ್ ಯೋಜನೆಯಡಿ ನೂತನ ಕಟ್ಟಡ ನಿರ್ಮಾಣದ ಚಿಂತನೆ ನಡೆಸಲಾಗಿತ್ತಾದರೂ ಆಸ್ಪತ್ರೆ ಇರುವ ಜಾಗದ ಪಹಣಿ ಪತ್ರದ ಗೊಂದಲ ಹೊಸ ಕಟ್ಟಡ ನಿರ್ಮಾಣದ ಆಸೆಗಳಿಗೆ ತಣ್ಣೀರೆರಚಿತ್ತು. ಪಹಣಿಪತ್ರ ತಿದ್ದುಪಡಿ
ಶಾಸಕನ ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಕಂದಾಯ ಇಲಾಖೆಯ ಮೂಲಕ ಪಹಣಿಪತ್ರ ತಿದ್ದುಪಡಿ ಮಾಡಿಸಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಎಲ್ಲ ಸಹಕಾರ ನೀಡಲಾಗುವುದು.
-ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ ಎಲ್ಲ ಸಹಕಾರ
ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲ ನೆರವು ನೀಡಲಾಗುವುದು.
-ರೇಷ್ಮಾ ಉದಯ ಶೆಟ್ಟಿ,ಜಿಲ್ಲಾ ಪಂಚಾಯತ್ ಸದಸ್ಯೆ ಸಕಾರಾತ್ಮಕ ಸ್ಪಂದನೆ
ಪಂಚಾಯತ್ ಪರವಾಗಿ ನೀಡಿದ್ದ ಪತ್ರಗಳಿಗೆ ಸಂಬಂಧಪಟ್ಟವರಿಂದ ಸಕಾರಾತ್ಮಕ ಪ್ರತ್ಯುತ್ತರ ಬಂದಿದೆ. ಈ ಬಗ್ಗೆ ಪಂಚಾಯತ್ ಆಡಳಿತ ಗಂಭೀರವಾಗಿ ಮುನ್ನಡೆಯಲಿದೆ.
-ರಘುವೀರ ಶೆಣೈ,ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ನೂತನ ಕಟ್ಟಡ ಅಗತ್ಯ
ಆಸ್ಪತ್ರೆಯಲ್ಲಿ ಉತ್ತಮ ಸೇವೆ ದೊರಕುತ್ತಿದ್ದು ಇಲ್ಲಿಗೆ ನೂತನ ಕಟ್ಟಡದ ಆವಶ್ಯಕತೆ ಯಿದೆ. ಹಲವು ವರ್ಷಗಳಿಂದ ನೂತನ ಕಟ್ಟಡ ಬೇಡಿಕೆಯಿದ್ದರೂ ಪಹಣಿ ಪತ್ರದ ಸಮಸ್ಯೆಯಿಂದ ನೂತನ ಕಟ್ಟಡ ನಿರ್ಮಾಣಗೊಂಡಿಲ್ಲ. ಜನಪ್ರತಿನಿ ಧಿಗಳು ಈ ಬಗ್ಗೆ ಶ್ರಮ ವಹಿಸಿ ಕಟ್ಟಡ ನಿರ್ಮಾಣವಾಗುವತ್ತ ಮನ ಮಾಡಬೇಕಾಗಿದೆ.
-ರಮೇಶ್ ಶೆಟ್ಟಿ,ಗ್ರಾಮಸ್ಥರು -ಶರತ್ ಶೆಟ್ಟಿ ಮುಂಡ್ಕೂರು