ಸುಳ್ಯ : ಬೆಳ್ಳಾರೆ ಗ್ರಾಮದ 2ನೇ ವಾರ್ಡ್‌ನ ನೇಲ್ಯಮಜಲು ಎಂಬಲ್ಲಿ ಹರಿಯುತ್ತಿರುವ ತೋಡಿಗೆ ಸರ್ವಋತು ಸೇತುವೆ ಬೇಡಿಕೆ ವ್ಯಕ್ತವಾಗಿದೆ. ಕಲ್ಲೋನಿ ಜಂಕ್ಷನ್‌ನಿಂದ ನೇಲ್ಯಮಜಲು ಪುಡ್ಕಾಜೆ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಹಲವು ದಶಕಗಳ ಹಿಂದೆ ಇಲ್ಲಿ ಕಾಲು ಸಂಕ ನಿರ್ಮಾಣಗೊಂಡಿದ್ದು, ಇದರ ಮೂಲಕವೇ ಜನರು ಸಂಚರಿಸುತ್ತಿದ್ದಾರೆ.
ಶಿಥಿಲಗೊಂಡಿದೆ ಸೇತುವೆ
ಸುಮಾರು 40 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಕಾಲು ಸಂಕ ಪ್ರಸ್ತುತ ಶಿಥಿಲಗೊಂಡಿದೆ. ಕಾಲು ಸಂಕದ ಕಬ್ಬಿಣ ಸಾಮಗ್ರಿ ತುಕ್ಕುಹಿಡಿದು ತುಂಡಾಗಿ ಬಿದ್ದಿದೆ. ಕೆಲವು ಭಾಗದ ಸಿಮೆಂಟ್ ಎದ್ದಿದ್ದು, ಅಲ್ಲಿ ಕಬ್ಬಿಣದ ಸರಳುಗಳು ಕಾಣುತ್ತಿದೆ. ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಈ ಕಾಲುಸಂಕ ಅಪಾಯಕಾರಿಯಾಗಿದೆ. ಅಲ್ಲದೆ ಇದಕ್ಕೆ ನಿರ್ಮಿಸಿರುವ ತಡೆಗೋಡೆಯೂ ಕುಸಿದಿದ್ದು, ಕಾಲು ಸಂಕ ಕುಸಿದು ಬೀಳಬಹುದೆಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಭಾಗದ ಜನರು ತಮ್ಮ ನಿತ್ಯ ಚಟುವಟಿಕೆಗಳಿಗೆ ತೆರಳಲು ಇದೇ ಕಾಲುಸಂಕ ಪ್ರಮುಖವಾಗಿದೆ. ಈ ಸಂಕ ಕುಸಿದಲ್ಲಿ ಈ ಭಾಗದ ಜನರು ಸುತ್ತು ಬಳಸಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅದಕ್ಕೂ ಮೊದಲು ಆಡಳಿತ ಅಗತ್ಯ ಕ್ರಮ ವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಹೊಸ ಸೇತುವೆಗೆ ಆಗ್ರಹ
ಹಳೆಯದಾಗಿರುವ ಕಾಲು ಸಂಕ ಕುಸಿದು ಬೀಳುವ ಆತಂಕದಲ್ಲಿರುವುದಿಂದ ಇಲ್ಲಿ ಹೊಸ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸದ್ರಿ ಕಾಲು ಸಂಕವು ಸಣ್ಣದಾಗಿದ್ದು, ನಡೆದಾಡಲು, ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರವೇ ಸಾಧ್ಯವಾಗಲಿದೆ. ಮುಂದೆ ಇಲ್ಲಿ ನಾಲ್ಕುಚಕ್ರದ ವಾಹನ ಸಂಚರಿಸಬಲ್ಲ ಸರ್ವಋತು ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಇಲ್ಲಿನ ಜನರದ್ದು.
ಸರ್ವಋತು ಸೇತುವೆ ಅಗತ್ಯ
ಸದ್ರಿ ಕಾಲು ಸಂಕ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಆತಂಕದಲ್ಲಿದೆ. ಇಲ್ಲಿ ನಾಲ್ಕು ಚಕ್ರದ ವಾಹನ ಸಂಚರಿಸುವಷ್ಟು ಅಗಲದ ಸರ್ವಋತು ಸೇತುವೆ ಅಗತ್ಯವಿದ್ದು. ಸರಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ.
-ಭವ್ಯಾ ಆರ್. , ಗ್ರಾ.ಪಂ. ಸದಸ್ಯೆ ಬೆಳ್ಳಾರೆ.