ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ ನಿರ್ಮಾಣ ಭರದಿಂದ ನಡೆಯುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಸಮರ್ಪಣೆಯಾಗುವ ನಿರೀಕ್ಷೆಯಿದೆ. ಚಂಪಾಷಷ್ಠಿ ಸಂದರ್ಭ ಎಳೆಯುವ 400 ವರ್ಷಗಳ ಇತಿಹಾಸವಿರುವ ಬ್ರಹ್ಮರಥ ಶಿಥಿಲವಾಗಿದ್ದು, ನೂತನ ರಥ ನಿರ್ಮಿಸುವುದು ಸೂಕ್ತ ಎಂಬುದಾಗಿ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿತ್ತು. ಬಿಡದಿ ರಿಯಾಲಿಟಿ ವೆಂಚರ್ ಪ್ರೋರ್ ಗ್ರೂಪ್ ಸಂಸ್ಥೆಯ ಪಾಲುದಾರರಾದ ಉದ್ಯಮಿ ಮುತ್ತಪ್ಪ ರೈ ಹಾಗೂ ಅಜಿತ್ ರೈ ಅವರು 2 ಕೋಟಿ ರೂ.ವೆಚ್ಚದ ಬ್ರಹ್ಮರಥವನ್ನು ದಾನ ರೂಪದಲ್ಲಿ ನೀಡುತ್ತಿದ್ದಾರೆ.
ಈಗಿರುವ ಬ್ರಹ್ಮರಥವನ್ನು 400 ವರ್ಷಗಳ ಹಿಂದೆ (ಕ್ರಿ.ಶ. 1582-1629) ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿ ಕೊಟ್ಟಿದ್ದ ಎಂದು ದಾಖಲೆಯಿಂದ ತಿಳಿಯುತ್ತದೆ. 1923ರಲ್ಲಿ ಗಣಪತಿ ರಾವ್‌ಐಗಳ ದ.ಕ.ಜಿಲ್ಲೆಯ ಪ್ರಾಚೀನ ಇತಿಹಾಸ ದಾಖಲೆಯಲ್ಲಿ ಈ ಕುರಿತು ಉಲ್ಲೇಖವಿದೆ.
ಇದೇ ಅವಧಿಯಲ್ಲಿ ವೆಂಕಟಪ್ಪ ನಾಯಕ ಕೊಟೇಶ್ವರ ದೇಗುಲಕ್ಕೂ ರಥ ನೀಡಿರುವುದಾಗಿ ಗ್ರಂಥದಲ್ಲಿ ಉಲ್ಲೇಖವಿದೆ. ಆರು ಚಕ್ರ ಹೊಂದಿರುವ ಬ್ರಹ್ಮರಥವನ್ನು ಶಾಸ್ತ್ರೀಯವಾಗಿ ಸ್ಯಂದನ ರಥವೆನ್ನುವರು.ನೂತನ ಬ್ರಹ್ಮರಥ ನಿರ್ಮಾಣ ಪ್ರಕ್ರಿಯೆ 2003ರಲ್ಲೇ ಆರಂಭಗೊಂಡಿತ್ತು. ದರ ನಿಗದಿಯಲ್ಲಿ ತಾಂತ್ರಿಕ ತೊಂದರೆಗಳು ಎದುರಾದ ಕಾರಣ ವಿಳಂಬವಾಗಿತ್ತು.
ಕೋಟೇಶ್ವರದಲ್ಲಿ ನಿರ್ಮಾಣ: ರಾಷ್ಟ್ರೀಯ ಶಿಲ್ಪ ಗುರು ಪ್ರಶಸ್ತಿಗೆ ಪಾತ್ರರಾಗಿರುವ, ಈವರೆಗೆ 102 ರಥಗಳನ್ನು ನಿರ್ಮಿ ಸಿರುವ ಕುಂದಾಪುರ ತಾಲೂಕು ಕೋಟದ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ 2018ರ ಮಾ. 15 ರಂದು ರಥ ನಿರ್ಮಾಣಕ್ಕೆ ವೀಳ್ಯ ನೀಡಲಾ ಗಿತ್ತು. ಕೋಟೇಶ್ವರದ ಅವರ ಕಾರ್ಯಾ ಗಾರದಲ್ಲಿ ರಥ ನಿರ್ಮಾಣವಾಗುತ್ತಿದೆ.
50ರಿಂದ 60 ಮಂದಿ ಶಿಲ್ಪಿಗಳು ತೊಡಗಿಸಿಕೊಂಡಿದ್ದು, ಆಧುನಿಕ ಯಂತ್ರಗಳನ್ನು ಬಳಸಿ ಕೈಗೊಳ್ಳಲಾಗಿದೆ. ಈಗಾಗಲೇ ಶೇ.80ರಷ್ಟು ಕಾರ್ಯ ಪೂರ್ಣಗೊಂಡಿದೆ. ಕೆತ್ತನೆ ಕೆಲಸಗಳು ಆಕರ್ಷಕವಾಗಿ ಪೂರ್ಣಗೊಂಡಿವೆ. ದೇವರ ಚಿತ್ರಗಳಿಗೆ ಅಂತಿಮ ಸ್ಪರ್ಶ ಹಾಗೂ ಚಕ್ರದ ಕಾಮಗಾರಿಯಷ್ಟೇ ಬಾಕಿಯಿದೆ. ರಥವನ್ನು ದೂರದ ಕೋಟೇಶ್ವರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತರುವುದೇ ಸವಾಲಿನ ಕೆಲಸ. ಸಾಗಾಟದ ಹೊಣೆಯನ್ನು ಮಾಜಿ ಮುಜರಾಯಿ ಸಚಿವ ನಾಗರಾಜಶೆಟ್ಟಿ ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ.
ರಥ ನಿರ್ಮಾಣ ಅಂತಿಮ ಹಂತದಲ್ಲಿದ್ದು, ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಈ ರಥ ನಿರ್ಮಾಣ ಒಂದು ರೋಚಕ ಅನುಭವವಾಗಿದ್ದು, ನಿಗದಿತ ಅವಧಿಯೊಳಗೆ ಸಿದ್ಧಪಡಿಸಿ ಹಸ್ತಾಂತರಿಸಲಿದ್ದೇವೆ.
-ರಾಜಗೋಪಾಲ, ರಥ ಶಿಲ್ಪಿ
ಈ ಮಾಸಾಂತ್ಯದೊಳಗೆ ದೇಗುಲಕ್ಕೆ ನೂತನ ಬ್ರಹ್ಮರಥ ಹಸ್ತಾಂತರಿಸುವ ಕುರಿತು ಚಿಂತನೆಗಳು ನಡೆಯುತ್ತಿವೆ. ಮುಹೂರ್ತ ಗೊತ್ತುಪಡಿಸುವುದು ಮೊದಲಾದ ಕೆಲಸಗಳು ಶೀಘ್ರ ಆಗಲಿವೆ.
-ನಿತ್ಯಾನಂದ ಮುಂಡೋಡಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕುಕ್ಕೆ ದೇಗುಲ