Advertisement

BPL card: ಚಿಕಿತ್ಸೆಗಾಗಿ ಹೊಸ ಬಿಪಿಎಲ್‌ ಕಾರ್ಡ್‌

11:31 PM Aug 24, 2023 | Team Udayavani |

ದಾವಣಗೆರೆ: ರಾಜ್ಯ ಸರಕಾರವು ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಹೊಸದಾಗಿ ಆದ್ಯತಾ ಪಡಿತರ ಚೀಟಿ ನೀಡಲು ವಿಶೇಷ ಅನುಮೋದನೆ ನೀಡಿದೆ. ಸರಕಾರದ ಈ ಕ್ರಮದಿಂದಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಡವರಿಗೆ ಪಡಿತರ ಚೀಟಿ ಆಸರೆಯಾಗುವ ಭರವಸೆ ಮೂಡಿದೆ.

Advertisement

ತುರ್ತು ವೈದ್ಯಕೀಯ ಚಿಕಿತ್ಸೆಗೆ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ, ಸಲ್ಲಿಕೆಯಾಗುವ ಅರ್ಜಿಗಳಿಗೆ ಸಂಬಂಧಿಸಿ ಅನುಮೋದನೆ ನೀಡಲು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸರಕಾರದ ಅನುಮತಿ ಕೋರಿತ್ತು. ಸಕಾರಾತ್ಮಕವಾಗಿ ಸ್ಪಂದಿಸಿರುವ ಸರಕಾರ ಕೆಲವು ಸ್ಪಷ್ಟ ನಿರ್ದೇಶನಗಳೊಂದಿಗೆ ಒಪ್ಪಿಗೆ ಸೂಚಿಸಿದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?
ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹೊಸ ಆದ್ಯತಾ ಪಡಿತರ ಚೀಟಿ ಪಡೆಯಲಿಚ್ಛಿಸುವವರು ತಮ್ಮ ವ್ಯಾಪ್ತಿಯ ತಹಸೀಲ್ದಾರ್‌ಗೆ ಅಗತ್ಯ ವೈದ್ಯಕೀಯ ದಾಖಲೆ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಬಗ್ಗೆ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.

ಪ್ರತ್ಯೇಕ ಆದ್ಯತಾ ಪಡಿತರ ಚೀಟಿ ?
ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಿ ಆಂಧ್ರಪ್ರದೇಶ ಮಾದರಿಯಲ್ಲಿ ಪ್ರತ್ಯೇಕ ಬಿಪಿಎಲ್‌ ಪಡಿತರ ಚೀಟಿ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ಈಚೆಗಷ್ಟೇ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿಕೆ ನೀಡಿದ್ದರು. ಮುಂದಿನ ದಿನಗಳಲ್ಲಿ ವೈದ್ಯಕೀಯ ಉದ್ದೇಶಕ್ಕಾಗಿಯೇ ಪ್ರತ್ಯೇಕ ಆದ್ಯತಾ ಪಡಿತರ ಚೀಟಿ ನೀಡಬಹುದಾದ ಸಾಧ್ಯತೆಗೆ ಪುಷ್ಟಿ ದೊರಕಿದೆ.

ಇದು ಪ್ರತ್ಯೇಕ
ಕಾರ್ಡ್‌ ಅಲ್ಲ. ವೈದ್ಯಕೀಯ ಕ್ಕಾಗಿಯೇ ಪ್ರತ್ಯೇಕ ಕಾರ್ಡ್‌ ವಿತರಿಸುವ ವಿಚಾರ ಇನ್ನೂ ಚಿಂತನೆ ಹಂತದಲ್ಲಿದೆ. ಪ್ರಸ್ತುತ ವೈದ್ಯಕೀಯ ಉದ್ದೇಶಕ್ಕೆ ನೀಡುವ ಆದ್ಯತಾ ಪಡಿತರ ಚೀಟಿ ಮಾಮೂಲಿ ಪಡಿತರ ಚೀಟಿಯಾಗಿದೆ. ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ಮಾರ್ಗಸೂಚಿ ಪ್ರಕಾರ ಅರ್ಹರಿಗೆ ಶೀಘ್ರ ಹೊಸ ಪಡಿತರ ಚೀಟಿ ನೀಡಲಾಗುವುದು.
-ಸಿದ್ರಾಮ ಮಾರಿಹಾಳ, ಉಪನಿರ್ದೇಶಕರು, ಆಹಾರ ಇಲಾಖೆ, ದಾವಣಗೆರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next