ಬೆಂಗಳೂರು: ಚುನಾವಣೆ ನೀತಿಸಂಹಿತೆ ಜಾರಿಯಾದಂದಿನಿಂದ ಈವರೆಗೆ ಬಾಕಿ ಉಳಿದಿರುವ ಅರ್ಹ ಫಲಾನುಭವಿಗಳಿಗೆ ಇನ್ನೊಂದು ತಿಂಗಳಲ್ಲಿ ಹೊಸ ಬಿಪಿಎಲ್ ಪಡಿತರ ಚೀಟಿ ವಿತರಿಸುವುದಾಗಿ ಪ್ರಕಟಿಸಿದ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ, ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದವರ ಬಗ್ಗೆಯೂ ತನಿಖೆಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
“ಅನ್ನಭಾಗ್ಯ” ಯೋಜನೆ ಅಡಿ ಅಂತ್ಯೋದಯ ಮತ್ತು ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ ತಲಾ 170 ರೂ. ನೇರ ನಗದು ವರ್ಗಾವಣೆ ವ್ಯವಸ್ಥೆ ಒಂದು ತಿಂಗಳು ಯಶಸ್ವಿಯಾಗಿ ಪೂರೈಸಿದ್ದು, ಈ ಅವಧಿಯಲ್ಲಿ ಒಟ್ಟಾರೆ 1.28 ಕೋಟಿ ಪಡಿತರ ಚೀಟಿಗಳ ಪೈಕಿ ಒಂದು ಕೋಟಿ ಕುಟುಂಬಗಳಿಗೆ 566 ಕೋಟಿ ರೂ. ಅನ್ನು ವರ್ಗಾಯಿಸಲಾಗಿದೆ. ಇದರಿಂದ ಮೂರೂವರೆ ಕೋಟಿ ಫಲಾನುಭವಿಗಳಿಗೆ ಅನುಕೂಲ ಆಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆಗೆ ಚಾಲನೆ ದೊರೆತು 25 ದಿನಗಳಾಗಿದ್ದು, ಅಲ್ಪಾವಧಿಯಲ್ಲಿ ಅತಿ ಹೆಚ್ಚು ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಿರುವುದು ದಾಖಲೆಯಾಗಿದೆ. ಹೊಸ ಪಡಿತರ ಚೀಟಿಗಾಗಿ ಸಲ್ಲಿಸಿದ ಸುಮಾರು 2.96 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಸ್ಥಳ ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳಿಗೆ ತಿಂಗಳಲ್ಲಿ ಹೊಸ ಬಿಪಿಎಲ್ ಪಡಿತರಚೀಟಿ ವಿತರಿಸಲು ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಕಾರ್ಡುದಾರರೂ ಅನ್ನಭಾಗ್ಯ ಯೋಜನೆ ವ್ಯಾಪ್ತಿಗೆ ಸೇರಲಿದ್ದಾರೆ ಎಂದರು.
ಆಧಾರ್ ಮತ್ತು ಬ್ಯಾಂಕ್ ಖಾತೆ ಜೋಡಣೆ ಮಾಡದಿರುವುದರಿಂದ ಯೋಜನೆಯಿಂದ ಹೊರಗುಳಿದ 19.27 ಲಕ್ಷ ಪಡಿತರ ಚೀಟಿಗಳಿವೆ. ಅವರನ್ನೂ ಯೋಜನೆ ವ್ಯಾಪ್ತಿಗೆ ತರುವ ಪ್ರಯತ್ನ ನಡೆದಿದೆ. ಈ ಸಂಬಂಧ ಇಲಾಖೆಯು ಬ್ಯಾಂಕ್ ಖಾತೆ ಹೊಂದಿರದ ಕುಟುಂಬದ ಮುಖ್ಯಸ್ಥರ ವಿವರಗಳನ್ನು ಜಿಲ್ಲಾ, ತಾಲೂಕು ಮತ್ತು ನ್ಯಾಯಬೆಲೆ ಅಂಗಡಿವಾರು ವಿಂಗಡಿಸಿ, ಪಡಿತರದಾರರಿಗೆ ಹೊಸ ಬ್ಯಾಂಕ್ ಖಾತೆ ತೆರೆಯಲು ಮಾಹಿತಿ ನೀಡಲಾಗುತ್ತಿದೆ. ಜತೆಗೆ ಅಂಚೆ ಇಲಾಖೆ ಸಹಯೋಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ, 1.20 ಲಕ್ಷ ಹೊಸ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದರು.
ಅನರ್ಹರಿಗೆ ಕುತ್ತು
ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ಪಡೆದು, ಸವಲತ್ತುಗಳನ್ನು ಪಡೆಯುತ್ತಿರುವುದು ತಪ್ಪು. ಈ ಬಗ್ಗೆಯೂ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಆಹಾರ ಪೋಲು ಮಾಡುವುದಕ್ಕೆ ಕಡಿವಾಣ
ತಟ್ಟೆಯಲ್ಲಿ ಊಟ ವ್ಯರ್ಥ ಮಾಡದಂತೆ ಸಭೆ-ಸಮಾರಂಭಗಳಲ್ಲಿ ಮನವಿ ಫಲಕಗಳನ್ನು ಅಳವಡಿಸುವ ಮೂಲಕ ಆಹಾರದ ಉಳಿತಾಯಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುನಿಯಪ್ಪ ತಿಳಿಸಿದರು. ಈಗಾಗಲೇ ಕಲ್ಯಾಣ ಮಂಟಪ, ಹೊಟೇಲ್, ರೆಸ್ಟೋರೆಂಟ್ ಸಂಘಗಳೊಂದಿಗೆ ಮಾತುಕತೆ ನಡೆಸಲಾಗಿದೆ. ತಟ್ಟೆಗಳಲ್ಲಿ ಆಹಾರ ವ್ಯರ್ಥ ಮಾಡುವುದಕ್ಕೆ ಸಾಧ್ಯವಾದಷ್ಟು ಕಡಿವಾಣ ಹಾಕಲು ಮನವಿ ಮಾಡಲಾಗಿದೆ. ಈ ಕ್ರಮದಿಂದ ಕನಿಷ್ಠ ಶೇ. 20ರಿಂದ 25ರಷ್ಟು ಆಹಾರ ವ್ಯರ್ಥವಾಗದಂತೆ ತಡೆಯಬಹುದು ಎಂದರು.