Advertisement

New Born Babies Sales Network: ಹಸುಗೂಸು ಮಾರಾಟ ಕೇಸ್‌; ಮತ್ತಿಬ್ಬರ ಬಂಧನ

10:16 AM Nov 30, 2023 | Team Udayavani |

ಬೆಂಗಳೂರು: ಹಸುಗೂಸುಗಳ ಮಾರಾಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬುಧ ವಾರ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಈ ಮೂಲಕ ಬಂಧಿತರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ನ್ಯೂಬಿನ್ನಿಪೇಟೆ ನಿವಾಸಿ ಕರಣ್‌(32) ಮತ್ತು ಆರ್‌ .ಟಿ.ನಗರ ನಿವಾಸಿ ರಮ್ಯಾ (42) ಬಂಧಿತರು.

ಆರೋಪಗಳಿಬ್ಬರು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಾಧಾ, ಮಹಾಲಕ್ಷ್ಮೀ, ಕಣ್ಣನ್‌ ರಾಮಸ್ವಾಮಿ ಸೂಚನೆ ಮೇರೆಗೆ ನಗರದಲ್ಲಿ ಮಕ್ಕಳ ಮಾರಾಟ ದಂಧೆಯ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬುದು ಗೊತ್ತಾಗಿದೆ.

ಈಗಾಗಲೇ ಪ್ರಕರಣದಲ್ಲಿ ತಮಿಳುನಾಡಿನ ಏಳು ಮತ್ತು ಬೆಂಗಳೂರಿನ ಒಬ್ಬ ಮಹಿಳೆ ಸೇರಿ 8 ಮಂದಿಯನ್ನು ಬಂಧಿಸಲಾಗಿದೆ.

ನಕಲಿ ವೈದ್ಯ: ಆರೋಪಿಗಳ ಪೈಕಿ ಕರಣ್‌ ಈ ಹಿಂದೆ ಆಸ್ಪತ್ರೆಯೊಂದರಲ್ಲಿ ಕಾಂಪೌಂಡರ್‌ ಆಗಿದ್ದ. ಈ ವೇಳೆ ಕೆಲ ರೋಗಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ. ಹೀಗಾಗಿ ಎರಡು ವರ್ಷಗಳಿಂದ ರಾಜಾಜಿನಗರದಲ್ಲಿ ಪ್ರಶಾಂತ್‌ ಹೆಲ್ತ್‌ ಕೇರ್‌ ಸೆಂಟರ್‌ ಎಂಬ ಕ್ಲಿನಿಕ್‌ ತೆರೆದು, ತಾನೇ ವೈದ್ಯ ಎಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಅದಕ್ಕೆ ಪೂರಕವಾಗಿ ನಕಲಿ ವೈದ್ಯ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾನೆ. ಇದರೊಂದಿಗೆ ತನ್ನ ಆಸ್ಪತ್ರೆಗೆ ಬರುವ ಪರಿಚಯಸ್ಥ ರೋಗಿಗಳಿಗೆ ಮಕ್ಕಳ ಮಾರಾಟದ ಕುರಿತು ಮಾಹಿತಿ ನೀಡಿದ್ದ.

Advertisement

ಹೀಗೆ ತನಗೆ ಪರಿಚಯವಿರುವವರ ಮೂಲಕ ಹಣಕ್ಕಾಗಿ ಮಕ್ಕಳ ಮಾರುವವರನ್ನು ಪತ್ತೆ ಹಚ್ಚಿ ರಾಧಾ, ಮಹಾಲಕ್ಷ್ಮೀಗೆ ಮಾಹಿತಿ ನೀಡುತ್ತಿದ್ದ ಎಂಬುದು ಗೊತ್ತಾಗಿದೆ.

ಮಗು, ಮೊಮ್ಮಕ್ಕಳು ಮಾರಿದ್ದ ರಮ್ಯಾ: ಆರ್‌.ಟಿ.ನಗರ ನಿವಾಸಿ ರಮ್ಯಾ, ರಾಧಾ ಮತ್ತು ಮಹಾಲಕ್ಷ್ಮೀ ಜತೆ ಸೇರಿಕೊಂಡು ನಗರದಲ್ಲಿ ಕರಾಳ ದಂಧೆ ನಡೆಸುತ್ತಿದ್ದಳು. ಈ ಹಿಂದೆ ಹಣಕ್ಕಾಗಿ ತನ್ನ ಮಗುವನ್ನೇ ರಮ್ಯಾ ಮಾರಾಟ ಮಾಡಿದ್ದಾಳೆ. ಅಲ್ಲದೆ, ಕೆಲ ವರ್ಷಗಳ ಹಿಂದೆ ಮದುವೆಯಾದ ಮಗಳ ಮಗುವನ್ನು ದಂಧೆಕೋರರ ಜತೆ ಸೇರಿ ಸಿರಿವಂತರಿಗೆ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಇತ್ತೀಚೆಗೆ ಸಂಬಂಧಿ ಯುವತಿಯೊಬ್ಬಳು ಗರ್ಭಿಣಿಯಾಗಿದ್ದು, ಆಕೆ ಮಗುವನ್ನು ಗರ್ಭಪಾತ ಮಾಡಿಸಲು ಮುಂದಾಗಿದ್ದಳು. ಆದರೆ, ರಮ್ಯಾ ಆಕೆಗೆ ಮನವೊಲಿಸಿ 3 ಲಕ್ಷ ರೂ. ಕೊಡಿಸುವುದು ಹೇಳಿ, ತನ್ನ ಮನೆಯಲ್ಲೇ ಆಕೆಯನ್ನು ಆರೈಕೆ ಮಾಡಿ ದಂಧೆಕೋರರ ಜತೆ ಸೇರಿಕೊಂಡು ಮಗು ಮಾರಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next