Advertisement

ಸ್ಯಾರಿ ಕ್ಯಾರಿ ; ಹಳೇ ಸೀರೆಯಿಂದ ಹೊಸ ಚೀಲ

10:58 AM Oct 20, 2019 | mahesh |

ಸೀರೆಯೆಂದರೆ, ನೀರೆಗೆ ಪ್ರಾಣ. ಹಾಗೆ ಖರೀದಿಸುತ್ತಲೇ, ಮನೆಯ ಕಪಾಟು ತುಂಬಿ, ಅವು ಕೆಲವೇ ದಿನಗಳಲಿ “ಹಳೇ ಸೀರೆ’ ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತವೆ. ನಿಮ್ಮ ಮನೆಯ ಕಪಾಟಿನಲ್ಲೂ ಸೀರೆಗಳ ರಾಶಿ ಇದ್ದರೆ, ಅವುಗಳನ್ನು ಅದಮ್ಯ ಚೇತನ ಸಂಸ್ಥೆಗೆ ಕಳಿಸಿಕೊಡಿ. ಅದರಿಂದ ಅವರು ಚೆಂದದ ಚೀಲಗಳನ್ನು ತಯಾರಿಸುತ್ತಾರೆ…

Advertisement

ಹಬ್ಬಕ್ಕೆ ಹೊಸ ಸೀರೆ ಕೊಂಡಿದ್ದೇನೆ. ಕಪಾಟು ತೆಗೆದು ನೋಡಿದರೆ, ಹೊಸ ಸೀರೆ ಇಡಲೂ ಜಾಗವಿಲ್ಲದಂತೆ ಹಳೇ ಸೀರೆಗಳು ತುಂಬಿಕೊಂಡಿವೆ. ಉಡುವುದಕ್ಕೂ ಆಗಲ್ಲ, ಎಸೆಯಲೂ ಮನಸ್ಸಿಲ್ಲ. ಇಷ್ಟೊಂದು ಸೀರೇನ ಏನು ಮಾಡ್ಲಿ? ಇದು ಬಹುತೇಕ ಮಹಿಳೆಯರ ಪ್ರಶ್ನೆ. ನಿಮ್ಮ ಕಪಾಟಿನಲ್ಲೂ ಸೀರೆಗಳ ರಾಶಿ ಇದ್ದರೆ, ಅವುಗಳನ್ನು ಅದಮ್ಯ ಚೇತನ ಸಂಸ್ಥೆಗೆ ಕಳಿಸಿಕೊಡಿ. ಅದರಿಂದ ಅವರು ಚೆಂದದ ಚೀಲಗಳನ್ನು ತಯಾರಿಸುತ್ತಾರೆ.

ಆರ್‌.ಆರ್‌. ಬ್ಯಾಗ್ಸ್‌
ಎರಡು ತಿಂಗಳ ಹಿಂದೆ ಈ ಯೋಜನೆ ಆರಂಭವಾಗಿದೆ. ಜನರಿಂದ ಹಳೆಯ ಸೀರೆಗಳನ್ನು ಸಂಗ್ರಹಿಸಿ, ಅವುಗಳಿಂದ ಕೈಚೀಲಗಳನ್ನು ತಯಾರಿಸಲಾಗುತ್ತಿದೆ. ಒಂದು ಸೀರೆಯಿಂದ ಆರು ಚೀಲಗಳನ್ನು ತಯಾರಿಸಬಹುದಾಗಿದ್ದು, ಸೀರೆ ಕೊಟ್ಟವರಿಗೆ ಒಂದು ಚೀಲವನ್ನು ಉಡುಗೊರೆಯಾಗಿ ನೀಡುತ್ತಾರೆ. ಉಳಿದ ಐದು ಚೀಲಗಳನ್ನು, ಒಂದಕ್ಕೆ ಹತ್ತು ರೂ.ನಂತೆ ಮಾರಾಟ ಮಾಡುತ್ತಾರೆ.

ಸಂಸ್ಥೆಯ ಸ್ವಯಂ ಸೇವಕರು ಈಗಾಗಲೇ 300-400 ಚೀಲಗಳನ್ನು ಸಿದ್ಧಪಡಿಸಿದ್ದಾರೆ. ಈ ಚೀಲಗಳಿಗೆ ಆರ್‌.ಆರ್‌. ಬ್ಯಾಗ್ಸ್‌ (ರೀಯೂಸ್‌ ಆ್ಯಂಡ್‌ ರಿಸೈಕಲ್‌ ಬ್ಯಾಗ್‌) ಎಂದು ಹೆಸರಿಡಲಾಗಿದೆ. ಸೀರೆ ತೆಳುವಾಗಿದ್ದರೂ, ಚೀಲದ ಗುಣಮಟ್ಟ ಕುಸಿಯಬಾರದೆಂದು, ಎರಡು ಪದರ ಬಟ್ಟೆಯಿಟ್ಟು ಹೊಲಿಯಲಾಗುತ್ತದೆ. ಹಾಗಾಗಿ, ಈ ಚೀಲಗಳು 6-7 ಕೆ.ಜಿ. ಭಾರ ಎತ್ತಬಲ್ಲವು. ನೋಡಲು ಕೂಡಾ ಸುಂದರವಾಗಿ ಇರುವುದರಿಂದ ಆರಾಮಾಗಿ ಎಲ್ಲೆಡೆ ಕೊಂಡೊಯ್ಯಬಹುದು.

ತರಕಾರಿ- ದಿನಸಿ ತರಲು ಹೋಗುವಾಗ, ಮಾಲ್‌ಗ‌ಳಲ್ಲಿ ಶಾಪಿಂಗ್‌ಗೆ ಹೋಗುವಾಗ ಕೈಚೀಲ ಒಯ್ಯಿರಿ ಅಂತ ಎಷ್ಟೇ ಜಾಗೃತಿ ಮೂಡಿಸಿದರೂ, ಇನ್ನೂ ಅದು ಪರಿಪೂರ್ಣವಾಗಿ ಸಾಕಾರಗೊಳ್ಳಲಿಲ್ಲ. ಹತ್ತು- ಇಪ್ಪತ್ತು ರೂ. ಕೊಟ್ಟು ಬಳಸಿ ಬಿಸಾಡುವ ಪ್ಲಾಸ್ಟಿಕ್‌/ ಪೇಪರ್‌ ಬ್ಯಾಗ್‌ಗಳನ್ನು ಖರೀದಿಸುತ್ತಾರೆ. ಅದರ ಬದಲು ಬಟ್ಟೆ ಚೀಲಗಳನ್ನು ಬಳಸಿ ಅಂತ ಜಾಗೃತಿ ಮೂಡಿಸುವುದಕ್ಕಾಗಿ, ಅದಮ್ಯ ಚೇತನ ಸಂಸ್ಥೆಯು ಈ ಕೆಲಸಕ್ಕೆ ಕೈ ಹಾಕಿದೆ.

Advertisement

ಮೊದಲಿಗೆ ನಾವು ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡೆವು. ಜನರ ಪ್ರತಿಕ್ರಿಯೆ ಇಷ್ಟೊಂದು ಸಕಾರಾತ್ಮಕವಾಗಿರುತ್ತೆ ಅಂದುಕೊಂಡಿರಲಿಲ್ಲ. ಬಹಳಷ್ಟು ಜನ ಸೀರೆಗಳನ್ನು ಕಳಿಸಿದ್ದಾರೆ. ಪುಣೆಯಿಂದ ಕೂಡಾ ಸೀರೆಗಳು ಬಂದಿವೆ.
ಪನ್ನಗ, “ಅದಮ್ಯ ಚೇತನ’ ಬಳಗ

ಪ್ಲೇಟ್‌ ಬ್ಯಾಂಕ್‌
ಪ್ಲಾಸ್ಟಿಕ್‌ ವಿರುದ್ಧದ ಸಮರದಲ್ಲಿ ಇದು ಸಂಸ್ಥೆಯ ಮೊದಲ ಹೆಜ್ಜೆಯೇನಲ್ಲ. ಪ್ಲಾಸ್ಟಿಕ್‌ ಮುಕ್ತ ಬೆಂಗಳೂರಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಪ್ಲೇಟ್‌ ಬ್ಯಾಂಕ್‌ ಕೂಡಾ ಒಂದು. ಅದಮ್ಯ ಚೇತನದಲ್ಲಿ 10 ಸಾವಿರ ಸ್ಟೀಲ್‌ ತಟ್ಟೆಗಳುಳ್ಳ ಪ್ಲೇಟ್‌ ಬ್ಯಾಂಕ್‌ ಇದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವವರು, ಕ್ಯಾಟರಿಂಗ್‌ ಉದ್ದಿಮೆಯವರು, ಮದುವೆ ಮುಂತಾದ ಸಮಾರಂಭ ನಡೆಸುವವರು ಉಚಿತವಾಗಿ ಪಾತ್ರೆಗಳನ್ನು ಕೊಂಡೊಯ್ಯಬಹುದು. ಸ್ಟೀಲ್‌ ತಟ್ಟೆ-ಲೋಟ-ಚಮಚ- ಐಸ್‌ಕ್ರೀಂ ಬಟ್ಟಲು… ಎಲ್ಲವೂ ಇರುವುದರಿಂದ, ಯೂಸ್‌ ಅಂಡ್‌ ಥ್ರೋ ಪ್ಲಾಸ್ಟಿಕ್‌ ಬಳಸುವುದೇ ಬೇಡವಾಗುತ್ತದೆ. ಬಾಡಿಗೆ ಕೊಡುವ ಅಗತ್ಯವೂ ಇಲ್ಲ, ಸ್ವತ್ಛವಾಗಿ ತೊಳೆದುಕೊಟ್ಟರೆ ಸಾಕು. ಐದು ವರ್ಷಗಳಿಂದ ಈ ಬ್ಯಾಂಕ್‌ ಕಾರ್ಯ ನಿರ್ವಹಿಸುತ್ತಿದೆ.

ಪ್ರಿಯಾಂಕ

Advertisement

Udayavani is now on Telegram. Click here to join our channel and stay updated with the latest news.

Next