ಉಪನಿಷತ್ತು’ ಎಂದರೆ ಸರಳವಾಗಿ- ಹತ್ತಿರ ಕುಳಿತಿರುವುದು ಎಂದು. ಹತ್ತಿರ ಇರುವಿಕೆ. “ಇರುವಿಕೆ’ಯ ಹತ್ತಿರ. ಮೊಟ್ಟೆಯ ಮೇಲೆ ಹಕ್ಕಿ ಕಾವು ಕೂತಂತೆ. ಒಡಲೊಳಗಿನ ಮಗು ತಾಯಿಗೆ ಹತ್ತಿರ ಮತ್ತು ತಾಯಿ; ಮಗುವಿಗೆ ಹತ್ತಿರವಾಗಿರುವಂತೆ. ಉಪನಿಷತ್ತು ಆಧ್ಯಾತ್ಮಿಕ ವಾš¾ಯವಾಗಿರುವುದರಿಂದ, ಬದುಕಿನ ಆಳವಾದ “ಸತ್ಯ’ದ ಹತ್ತಿರ ಕೂರುವುದು- ಅದರ ಜೊತೆಗೇ ಇರುವುದು- ಎಂದು. “ಸತ್ಯ’ ಎಂದರೆ ಇರುವಿಕೆ ಎಂದೇ ಅರ್ಥ. “ಇರುವಿಕೆ’ಗೆ ಅದರ ಹತ್ತಿರ ಇರುವುದಲ್ಲದೆ ಬೇರಿನ್ನಾವ ಕಲಾಪಗಳೂ ಪ್ರಸ್ತುತವಲ್ಲ. ಕರ್ಮಕಾಂಡದಲ್ಲಿ ತಮ್ಮ ಆಸೆಗಳನ್ನು ನೆರೆವàರಿಸಿಕೊಳ್ಳುವುದಕ್ಕೆ ಅಗ್ನಿಯ ಮುಂದೆ ಕುಳಿತು ಹೋಮಿಸುವುದನ್ನು ನೆನಪಿಸುವಂತೆ ಅದಕ್ಕಿಂತ ಭಿನ್ನವಾದ ಇನ್ನೊಂದು ರೀತಿಯ ಕುಳಿತಿರುವಿಕೆ ಇದೆ ಎಂದು ಸೂಚಿಸಲು ಉಪನಿಷತ್-ಹತ್ತಿರ ಕುಳಿತಿರುವಿಕೆ- ಎಂದೇ ಹೇಳಿದರು. ಅಗ್ನಿಯ ಮುಂದೆ ಕುಳಿತಿರು. ಹೋಮಿಸು. ಈ ಕಲಾಪದಿಂದ ನಿನ್ನ ಆಸೆಗಳನ್ನು ಈಡೇರಿಸಿಕೊಳ್ಳಬಹುದೇನೋ. ಆದರೆ “ಸತ್ಯ’ದ ಬಳಿ ಕುಳಿತಿರು. ಅದು, ಸದ್ದಿಲ್ಲದೆ ನಿನ್ನ ಆಸೆಗಳನ್ನೇ ತಾನು ಆಹುತಿ ತೆಗೆದುಕೊಂಡು ನಿನ್ನನ್ನು ತನ್ನಂತೆ ಮಾಡಿಕೊಳ್ಳುವುದು. ಹಾಗಿರುವುದೇ “ಇರುವಿಕೆ’ಯ ಜೀವಂತಿಕೆ ! ಇರುವಿಕೆಯೇ ಜೀವಂತಿಕೆಯನ್ನು ಅನುಭವಿಸಲು ಅದರ ಹತ್ತಿರ ಕುಳಿತರೆ ಸಾಕು!
ಹತ್ತಿರ ಕುಳಿತಿರುವುದೆಂದರೆ ಹತ್ತಿರ ಎನ್ನುವ ಪದವನ್ನು ನಮಗೆ ಸಾಧ್ಯವಾದ ಮಟ್ಟಿಗೆ ಆಳವಾಗಿ ಪರಿಭಾವಿಸುವುದೂ ಹೌದು. ಹಾಗೆ ಪರಿಭಾವಿಸಿದಾಗ ಅದು ಬಹಳ ಆಳಕ್ಕೂ, ವಿಪರ್ಯಾಸವೆನ್ನಿಸುವಂತೆ ಬಹಳ ದೂರಕ್ಕೂ ನಮ್ಮನ್ನು ಒಯ್ಯಬಲ್ಲುದು. ಆಸೀನೋ ದೂರಂ ವ್ರಜತಿ ಎನ್ನುವುದು ಉಪನಿಷತ್ತಿನದೇ ಒಂದು ನುಡಿ. ಸರಿಯಾಗಿ ಆಸೀನನಾದವನು-ಕೂತವನು- ಅಂದರೆ ಒಂದು ನಿಲುವನ್ನು ತಳೆದವನು- ತಾನು ಕೂತಿರುವಂತೆಯೇ ತನ್ನ ನಿಲುವನ್ನು ಬಿಟ್ಟುಕೊಡದೇ ಬಹಳ ದೂರದ ಅನುಭವಗಳನ್ನು ಪಡೆಯಬಲ್ಲವನು ಎನ್ನುವುದು ಈ ಮಾತಿನ ಇಂಗಿತ. ಈ ಇಂಗಿತವನ್ನೊಪ್ಪಿದರೆ ಈಗ “ಹತ್ತಿರ’ ಎನ್ನುವ ಪದ “ದೂರ’ಕ್ಕೆ ವಿರುದ್ಧವಲ್ಲದ ಪದವಾಗಿಬಿಟ್ಟಿತು! ಲೋಕದಲ್ಲಿ ನಾವು “ಹತ್ತಿರ’-“ದೂರ’ ಎಂಬ ಪದಗಳು ಪರಸ್ಪರ ವಿರುದ್ಧ ಪದಗಳೆಂದು ವ್ಯವಹರಿಸುವೆವು. ಇದನ್ನು ತಪ್ಪೆನ್ನುವಂತಿಲ್ಲ. ಇದು ವ್ಯವಹಾರ. ಇದೂ ಒಂದು ಬಗೆಯ ತಿಳಿವಳಿಕೆಯೇ. ಆದರೆ, ಉಪನಿಷತ್ತಿನ ರೀತಿಯೇ ಬೇರೆ. ಜೀವಂತಿಕೆಯೇ ಬೇರೆ. ಅದು “ಹತ್ತಿರ’ ಎನ್ನುವ ಪದವನ್ನು ಉಚ್ಚರಿಸುವಾಗಲೇ ಅದು “ದೂರ’ಕ್ಕೂ ಹತ್ತಿರವಾಗಿಬಿಟ್ಟಿತು. ಅಂದರೆ- ಹತ್ತಿರಕ್ಕೆ ದೂರ ಎನ್ನುವುದು ಗೊತ್ತೇ ಇಲ್ಲ ಎಂದಾಗಿಬಿಟ್ಟಿತು. ಗೊತ್ತಿರುತ್ತಿದ್ದರೆ ಅದು ತನಗೆ ತಾನೇ ಹತ್ತಿರವಾಗುವುದಿಲ್ಲ ಎಂದಾಗಿಬಿಟ್ಟಿತು. ಈ ಅರ್ಥದಲ್ಲಿ “ಹತ್ತಿರ’ ಎನ್ನುವ ಪದವೇ ಮಂತ್ರಸದೃಶವಾಗಿಬಿಟ್ಟಿತು. ಮಂತ್ರವೆಂದರೆ ವ್ಯಾವಹಾರಿಕತೆಯನ್ನು ವ್ಯವಹಾರದ ಸಾಪೇಕ್ಷತೆಯನ್ನು- ಹತ್ತಿರ, ದೂರಗಳು ಪರಸ್ಪರ ವಿರುದ್ಧವೆನ್ನುವ ಸಾಪೇಕ್ಷತೆಯನ್ನು ಮೀರಿದ-ಸತ್ಯವನ್ನು ಸೂಚಿಸುವ ನುಡಿ! ತನ್ನನ್ನು ತಾನೇ ಇಡಿಯಾಗಿ ಅನುಭವಿಸುತ್ತಿರುವ ನುಡಿ!
ಹತ್ತಿರ ಎಂದಾಗ ಪ್ರೀತಿ. ಒಂದು ಆಪ್ತಭಾವ. ತಾನು ಪ್ರೀತಿಪಾತ್ರನಾಗುವ ಆಸೆ. ತಾನು ಪ್ರೀತಿಸುವವರ ಬಳಿ ತಾನಿರಬೇಕು ಎನ್ನುವುದು ಲೋಕದಲ್ಲೆಲ್ಲ ಕಾಣುವ ಆಸೆ. ಆದರೆ ತನ್ನ ಪ್ರೀತಿಗೆ ಪಾತ್ರರು ಎಂದು ಯೋಚಿಸುವಾಗಲೆಲ್ಲ ಅಲ್ಲಿ ತನ್ನ ಆಯ್ಕೆಗಳಿರುತ್ತವೆ. ತನ್ನ ಆಯ್ಕೆಯಲ್ಲೆಲ್ಲ ತನ್ನ ಮಿತಿಗಳಿರುತ್ತವೆ. ಈ ಮಿತಿಗಳೇ ಬದುಕಿನ “ಸತ್ಯ’ವನ್ನು ತಿಳಿಯುವಲ್ಲಿ “ದೂರ’ವನ್ನುಂಟುಮಾಡಿರುತ್ತವೆ. ಈ ಮಿತಿಗಳನ್ನು ಮೀರುವುದೇ ನಿಜವಾದ ಬದುಕಿನ ಗುರಿಯಾಗಿರುವುದರಿಂದ ತಾನು ಪ್ರೀತಿಸುವವರ ಬಳಿ ಇರಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ತಾನು ಪ್ರೀತಿಪಾತ್ರನಾಗಬೇಕು; ತಾನು ಪ್ರೀತಿಸಲ್ಪಡಬೇಕು; “ಸತ್ಯ’ವು ತನ್ನನ್ನು ಪ್ರೀತಿಸುವಂತಾಗಲಿ, ಅದು ತನ್ನನ್ನು ಆಯ್ಕೆ ಮಾಡಲಿ ಎಂಬ ಹಂಬಲ. ಅಂದಾಗ ಹತ್ತಿರವೆಂದರೆ ತಾನು ಆಯ್ದುಕೊಳ್ಳುವುದಲ್ಲ , ತಾನೇ ಆಯ್ಕೆಯ ವಸ್ತುವಾಗಲಿ ಎಂಬ ಮಿಡಿತ. ಇನ್ನಷ್ಟು ಹತ್ತಿರವಾದಂತೆ, ಆಯುವುದು-ಆಯದೆ ಇರುವುದು ಅದಕ್ಕೇ ಬಿಟ್ಟದ್ದು. ಅದರ ಬಳಿಯಲ್ಲಿರುವುದಷ್ಟೇ ತನಗೆ ಸಾಕೆಂಬ ಭಾವ. ಇದು unconditional ಆದ ಪ್ರೀತಿಯ ಮನೋಧರ್ಮ! ಅದು ಒಲಿಯುವುದು ಅದರ ಆಯ್ಕೆ. ಈ ಲೋಕದ ಯಾವ ಗುಣವಿಶೇಷಗಳಿಂದಲೂ ಪ್ರಭಾವಿತವಾಗಿ ಅದು ಆಯ್ಕೆ ಮಾಡೀತೆಂದು ನಿರೀಕ್ಷಿಸುವಂತಿಲ್ಲ ಎನ್ನುವುದು ಉಪನಿಷತ್ತಿನ ದೊಡ್ಡ ಪ್ರಮೇಯವೇ ಆಗಿದೆ. ನಿರಂತರ ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗಿ ಒಳಗಿಂದಲೇ ನರಳುತ್ತಿರುವ ಈ ಲೋಕದಲ್ಲಿ ಯಾವ ಪ್ರಭಾವಕ್ಕೂ ಒಳಗಾಗದ “ಸತ್ಯ’ದ ಈ ಗುಣವೇ ಹತ್ತಿರ ಇದ್ದವರಲ್ಲಿ ಈ unconditional ಆದ ಪ್ರೀತಿಯನ್ನು ಉಂಟುಮಾಡಿರುವುದಿರಬೇಕು. ಮರದ ಬಳಿಯಲ್ಲೇ ಮರದ ನೆರಳು ಬೀಳುವಂತೆ. ಇಲ್ಲಿನದು ಅಲ್ಲಿನ ಪ್ರತಿಚ್ಛಾಯೆ! ಇಂಥ ಪ್ರೀತಿಯನ್ನೇ ಪ್ರಪತ್ತಿ, ಶರಣಾಗತಿ ಇತ್ಯಾದಿ ಶಾಸ್ತ್ರೀಯ ಪರಿಭಾಷೆಗಳಲ್ಲಿ ಕರೆದಿರುವುದು. ಬದುಕಿನ ಸತ್ಯದ ಹತ್ತಿರವಿದ್ದಾಗ ಶಾಸ್ತ್ರ ಪರಿಭಾಷೆಗಳೆಲ್ಲ ತಾವಾಗಿ ಹತ್ತಿರ ಬರುವವು. ಬಂದು ತಮ್ಮ ಅಂತಃಕರಣವನ್ನು ತೋರುವವು. ಶಾಸ್ತ್ರವು ಎದೆಯ ದನಿಯಾಗಿ ಕೃತಾರ್ಥವಾಗುವುದು.
ಹತ್ತಿರವೆಂದಾಗ ಒಂದು ಗುಟ್ಟು. ಇಲ್ಲಿ ಏನೋ ಒಂದು ಗುಟ್ಟು; ಒಂದು ರಹಸ್ಯ ಅಡಗಿದೆ ಎಂಬ ಭಾವ. ಈ ಬದುಕು ನಾವು ಕಂಡಷ್ಟಲ್ಲ ; ಕಂಡಂತಲ್ಲ ; ಕಂಡಷ್ಟೇ ಅಲ್ಲ , ಇಲ್ಲಿ ಇನ್ನೇನೋ ಒಂದು ನಾವು ಕಾಣದ್ದು ಅಡಗಿರುವಂತಿದೆ ಎಂಬ ಹೊಳಹೇ ಬದುಕಿನ ಎಲ್ಲ ಚಟುವಟಿಕೆಗಳ ಕೊನೆಯಲ್ಲಿ ಇಣುಕುವ ನಿಜ. ಪ್ರಾಣಿಗಳಿಗೆ ಅಪಾಯದ ಮುನ್ಸೂಚನೆಯ ಕುರಿತು ಸದಾ ಒಂದು ಒಳ ಎಚ್ಚರವಿರುವಂತೆ, ಮನುಷ್ಯ ಜೀವಕ್ಕೆ ಇಲ್ಲೇನೋ ಒಂದು ರಹಸ್ಯ ಅಡಗಿದೆ ಎಂಬ ಎಚ್ಚರ. ನಿಜಕ್ಕಾದರೆ ಈ ಎಚ್ಚರವು ಪ್ರಾಣಿಗಳಿಗಿರುವ ಒಳ ಎಚ್ಚರದಷ್ಟು ಸಶಕ್ತವೂ ಜೀವಂತವೂ ಆಗಿಬಿಟ್ಟರೆ ಅಂಥ ಮನುಷ್ಯ ಜೀವ ಬದುಕಿನಲ್ಲಿ ಗೆದ್ದೇಬಿಟ್ಟಿತು ಎನ್ನಬಹುದು. ಇಲ್ಲಿ ಏನೋ ಒಂದು ಗುಟ್ಟಿದೆ ಎಂಬ ಭಾವದ “ಹತ್ತಿರ’ವಿದ್ದಾಗ ಈ ಗುಟ್ಟನ್ನು ಒಡೆದುಬಿಡಬೇಕೆನ್ನುವುದು ಮುಂದಿನ ಮಾತಾಗಿರುತ್ತದೆಯಲ್ಲವೆ? ಆದರೆ ಹತ್ತಿರದ ಮನೋಧರ್ಮವೆಂದರೆ ಈ ಗುಟ್ಟನ್ನು ನಾವು ಭೇದಿಸಲಾರೆವು. ನಾವು ಯಾವ ಗುಟ್ಟನ್ನೂ ಭೇದಿಸಬಲ್ಲೆವು ಎಂಬ ಭಾವನೆಯನ್ನು ಉಂಟುಮಾಡಿಯೇ ಅದು ಇದುವರೆಗೂ ಗುಟ್ಟಾಗಿಯೇ ಇರುವುದು! ಆದರೆ, ಅದೇ ತನ್ನ ಗುಟ್ಟನ್ನು ನಮ್ಮ ಕಿವಿಯಲ್ಲಿ ಪಿಸುನುಡಿದು ಬಿಚ್ಚಿಡುವಂತೆ ನಾವು ಅದಕ್ಕೆ ಹತ್ತಿರವಾಗಬಲ್ಲೆವು. ಗುಟ್ಟನ್ನು ಒಡೆಯುವೆವು ಎನ್ನುವುದು ಹತ್ತಿರವಿರುವವರ ಮಾತಲ್ಲ. ಅದು ದೂರದ ಮಾತು. ಗುಟ್ಟು ಎನ್ನುವ ಪದವನ್ನು ಕೇಳಿಸಿಕೊಳ್ಳುವ ಕಿವಿಯ ಸೂಕ್ಷ್ಮತೆಯೇ ಬೇರೆ ಇದೆ. ದೊಡ್ಡ ಗಂಟಲಿನ ದೊಡ್ಡ ದೊಡ್ಡ ಮಾತುಗಳನ್ನು ಕೇಳಿ ಜಡಗೊಂಡ ಕಿವಿಗಳಿಗೆ ಅದಕ್ಕಿಂತ ಬೇರೆಯಾದ ಸೂಕ್ಷ್ಮಾತಿಸೂಕ್ಷ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಯೋಗ್ಯತೆಯುಂಟಾಗಲಿ ಎಂದೇ ಅದು “ಗುಟ್ಟು’ ಎಂದು ಪಿಸುನುಡಿದಿರಬೇಕು. ಈ ಪಿಸುನುಡಿಯನ್ನು ಕೇಳಿದಾಗ ತತ್‌ಸಂವಾದಿಯಾದ ತರಂಗಗಳು ಕೇಳಿದವನಲ್ಲಿ ಹರಿದಾಡುವವು. ಆಗ ಕೇಳಿದವನು ತಾನೂ ಗಪ್ಪಾಗಿ ಬಿಡುವನು. ಗುಟ್ಟಾಗಿ ಬಿಡುವನು. ಅಡಗಿರುವ ಗುಟ್ಟನ್ನು ತನ್ನಲ್ಲಿ ಇಟ್ಟುಕೊಳ್ಳಬೇಕಾದರೆ ತಾನೂ ಆ ಗುಟ್ಟಿನಂತಾಗಬೇಕು. ಅಂದರೆ ಅಡಗಿರಬೇಕು. ಒಳಗೆ-ಹೊರಗೆ ಒಂದೇ ಆಗಿರಬೇಕಲ್ಲವೆ? ಅಂದರೆ ಗುಟ್ಟಿನ ಗುಣವೇ ಅದನ್ನು ಕೇಳಿದವನಲ್ಲಿ ಸಂಕ್ರಮಿಸಿ ಬಿಡುವುದು. ಇದೇ “ಹತ್ತಿರ’ ಎನ್ನುವುದರ ಅರ್ಥ. ಕಳ್ಳನನ್ನು ಹಿಡಿಯಬೇಕಾದರೆ ತಾನೂ ಕಳ್ಳನಂತೆಯೇ ಇರಬೇಕಾಗುತ್ತದೆ. ಮೃಗದ ನಿರೀಕ್ಷೆಯಲ್ಲಿ ಬೇಟೆಗೆ ಕೂತವನು ಹೇಗೆ ಸದ್ದಿಲ್ಲದೆ ಕೂತಿರಬೇಕು, ಉಸಿರಿನ ಸದ್ದೂ ಕೇಳದಂತೆ! ಅದರ ಬದಲು ಗುಟ್ಟನ್ನು ಒಡೆಯುವೆನೆಂದು ಆವೇಶದಿಂದ “ಧಿಗಣ’ ಹೊಡೆಯುತ್ತಿದ್ದರೆ ಒಂದು ರಂಜನೆಯಾಗಬಹುದು. ನೋಡಲು ಜನ ಸೇರಬಹುದು. ಆ ಜನರೊಡನೆ “ಗುಟ್ಟೂ’ ಕೂಡ ಸೇರಿಕೊಂಡು ಕುಣಿತಕ್ಕೆ ಭಲೇ ಎನ್ನಬಹುದು! ನನ್ನ ಗುಟ್ಟಿರಲಿ; ಸದ್ಯ ನಿನ್ನ ಗುಟ್ಟು ಗೊತ್ತಾಯಿತು ಎಂದು ಒಳಗೇ ನಗುತ್ತಿರಬಹುದು. ಕುರುಡರ ಹಿಂದೆ ಎಷ್ಟು ಜನ ಕುರುಡರು ಸೇರಿದ್ದಾರೆ; ಏನು ಗಲಾಟೆ, ಏನು ಗೌಜಿ; ಇದು ಕುರುಡರ ಸಂತೆ ಎಂದು ಸ್ಪಷ್ಟವಾಗಿ ಉದ್ಗರಿಸಿಯೇ ಉಪನಿಷತ್ತು ಆಶ್ಚರ್ಯಪಟ್ಟದ್ದಿದೆ ! ಹತ್ತಿರದ್ದನ್ನು ಕಾಣದವರು ಕುರುಡರೇ ನಿಜ.
ಆದುದರಿಂದ “ಹತ್ತಿರ’ವೆಂದಾಗ – ಗುಟ್ಟಿದೆ ನಿಜ. ಆ ಗುಟ್ಟನ್ನು ಬಿಚ್ಚುವುದರಲ್ಲೂ ಒಂದು ಗುಟ್ಟಿದೆ. ಗುಟ್ಟನ್ನು ಗುಟ್ಟಾಗಿಯೇ ಬಿಚ್ಚಬೇಕು. ಗುಟ್ಟಾಗಿ ಇರುವುದೇ, ಗುಟ್ಟಾಗಿ ಇದ್ದೇ ಇವೆೆಲ್ಲವನ್ನೂ ನೋಡುವುದೇ ಆಧ್ಯಾತ್ಮಿಕ ಸತ್ಯದ ಸ್ವಭಾವವೆಂದಾದರೆ ಅದು ತನ್ನ ಗುಟ್ಟನ್ನು ತಾನೇ ಹೇಳಬೇಕಷ್ಟೆ ಮತ್ತು ಹಾಗೆ ಹೇಳುವಾಗ ಅದು ಕೇಳುವ ಜೀವವನ್ನು ತನ್ನಂತೆ ಮಾಡಿಕೊಂಡೇ ಹೇಳುತ್ತದೆ. ತನ್ನಂತೆ ಮಾಡಿಕೊಂಡು ಎಂದರೆ ಗುಟ್ಟಾಗಿ ಇರುವ ಕಲೆಯನ್ನು ಕಲಿಸಿಯೇ ಹೇಳುತ್ತದೆ. ಒಬ್ಬ ಕಳ್ಳನಿಗೆ ಇನ್ನೊಬ್ಬ ಕಳ್ಳನ ಗುರುತು ಸಿಗುತ್ತದೆ. ಸಿಗುವಾಗ, ನಿನ್ನ ಗುರುತಾಯಿತು ಎಂದು ಕಣೊ°àಟದ ಒಂದು ಮಿಂಚಿನಲ್ಲಿ ತಿಳಿಸುತ್ತಾನೆ. ಅದು ಆ ಇನ್ನೊಬ್ಬನಿಗಷ್ಟೇ ಗೊತ್ತು. ಬೇರಾರಿಗೂ ಈ ಜಾಡು ತಿಳಿಯದು. ಒಬ್ಬ ಕಲಾವಿದನ ಪ್ರಸ್ತುತಿಯನ್ನು ಇನ್ನೊಬ್ಬ ಕಲಾವಿದ ನೋಡುವ ಕಣ್ಣೇ ಬೇರೆ. ಅದು ತಾಂತ್ರಿಕವಾದ ಕಣ್ಣು. ಅದರಲ್ಲಿ ದೊಡ್ಡ ಉದ್ಗಾರಗಳಿರುವುದಿಲ್ಲ. ಆದರೆ, ಎಲ್ಲವೂ ಸೂಕ್ಷ್ಮವಾಗಿ ತಿಳಿದಿರುತ್ತದೆ. ಅಂದರೆ- ಅದರಂತೆ ಆಗದೆ ಅದನ್ನು ತಿಳಿಯಲಾಗದು. ಅಲ್ಲದೆ, ಅದೇ ಅದರಂತೆ ನಮ್ಮನ್ನು ಮಾಡಬೇಕಷ್ಟೆ. ಬೇರಾರೂ ಮಾಡಲಾರರು. ಈಗ “ಹತ್ತಿರ’ ಎನ್ನುವುದಕ್ಕೆ ಬೇರೆಯೇ ಒಂದು ಅರ್ಥ ಬಂತು. ಅದೆಂದರೆ- ಅದರಂತೆ ಆಗುವಷ್ಟು ಹತ್ತಿರ!
ಹತ್ತಿರವೆಂದರೆ ಸಲಿಗೆ. ಸಲಿಗೆ ಎಂದರೆ ಸಲ್ಲುವಿಕೆ. ಪ್ರೀತಿ ಇಲ್ಲದಲ್ಲಿ ಹೇಗೆ ಇದ್ದರೂ ಸಲ್ಲುತ್ತದೆ ಎಂಬ ರೀತಿಯ ಮುಕ್ತತೆ. ಯಾವ ಮಾತು ಹೇಗೆ ಆಡಿದರೂ, ಮಾತೇ ಆಡದಿದ್ದರೂ- ಪರಸ್ಪರ ಸಲ್ಲುವುದಕ್ಕೆ ಯಾವ ಘಾಸಿಯೂ ಇಲ್ಲ. ಕಡಲಲ್ಲಿ ಇರುವ ಅಲೆ ಹೇಗಿದ್ದರೇನು? ಅದು ಇರುವುದು ಕಡಲಲ್ಲಿ , ಅದು ಕಡಲ ಅಲೆ- ಇಷ್ಟೇ ಅದಕ್ಕೆ ಗೊತ್ತಿರುವುದು. ಇಷ್ಟೇ ಗೊತ್ತಿರಬೇಕಾದುದು. ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ ಎಂದರು ಬಸವಣ್ಣ. ನಿನಗೆ ಕೇಡಿಲ್ಲ ಎಂದರೆ ಏನು? ಲೋಕಕ್ಕೆ ಪದಗಳ ಕೇಡಿದೆ. ಪದಗಳಿಂದ ಕೇಡಾಗುತ್ತಿದೆ. ಏಕೆಂದರೆ, ಲೋಕಕ್ಕೆ ಸ್ತುತಿ ಇಷ್ಟವಾಗಿ ಅದು ಪದಗಳಿಂದ ತನ್ನ ಸ್ತುತಿಯನ್ನು ಬಯಸುತ್ತಲೇ ಇರುತ್ತದೆ. ಲೋಕಕ್ಕೆ ಸ್ತುತಿ ಇಷ್ಟವೆಂದು ಜನರಿಗೂ ಸ್ವಾನುಭವದಿಂದಲೇ ತಿಳಿದು ಜನರೆಲ್ಲ ಸ್ತುತಿಪಾಠಕರಾಗಿಬಿಟ್ಟಿದ್ದಾರೆ. ಪದಗಳೆಲ್ಲ ಸ್ತುತಿಪಾಠ್ಯಗಳಾಗಿವೆ. ಇದು ಪದಗಳ ಕೇಡು. ಇದು ಲೋಕದ ಕೇಡು. ಈ ಕೇಡಿನಿಂದ ಪಾರಾಗಿರುವುದು ಸತ್ಯವೊಂದೇ. ಆದುದರಿಂದಲೇ ಸತ್ಯವನ್ನು ಸ್ತುತಿಸುವುದು ಕಷ್ಟ ಲೋಕಕ್ಕೆ. ಸ್ತುತಿಸುವುದು ಬಿಡಿ, ಸತ್ಯವನ್ನು ಹೇಳುವುದೇ ಕಷ್ಟ. ಹೇಳುವುದು ಬಿಡಿ. ಸತ್ಯ ಯಾವುದೆಂದು ತಿಳಿಯುವುದೇ ಕಷ್ಟ. ಆದರೆ, ಈ ಕಷ್ಟವನ್ನು ಅನುಭವಿಸದೆ ಮಾತು ತನ್ನ ಕೇಡಿನಿಂದ ಪಾರಾಗದು. ಆದುದರಿಂದ ಮಾತನ್ನು ಸತ್ಯಕ್ಕೆ ಮೀಸಲಿಡು. ಮಾತಿಗೆ ಮೀರಿದ್ದಕ್ಕೆ ಮಾತನ್ನು ಮೀಸಲಿಡು. ಆಗ ವಿಲಕ್ಷಣವೆನ್ನುವಂಥೆ ಮಾತಿನ ನಿಜವಾದ ಸಮೃದ್ಧಿಯನ್ನೂ ಅನುಭವಿಸುವೆ. ಆನು ಒಲಿದಂತೆ ಹಾಡುವೆ ಎಂಬಲ್ಲಿನ ಬಿಡುಗಡೆಯ ಭಾವವನ್ನು ಗಮನಿಸಿ. ಉಪನಿಷತ್ತು ಹೇಳಿತು: ಲೋಕದಲ್ಲಿನ ಶಬ್ದ ಸಮಸ್ತವೂ ಭಗವದ್‌ವಾಚಕಗಳೆಂದು. ಹಲ್ಲಿಯ ಲೊಚಗುಟ್ಟುವಿಕೆಯಿಂದ ಹಿಡಿದು, ಹಕ್ಕಿಗಳ ಹಾಡಿನಿಂದ ಹಿಡಿದು, ಗಾಳಿಯ ಬೀಸುವಿಕೆಯಿಂದ ಹಿಡಿದು, ಮುಂಗಾರಿನ ಗುಡುಗಿನ ದ-ದ-ದ ಎಂಬ ಗುಡುಗುಟ್ಟುವಿಕೆಯಿಂದ ಹಿಡಿದು ಕಡಲಿನ ಉನ್ಮತ್ತ ಘೋಷದವರೆಗೆ ನಾದ ಸಮಸ್ತವೂ ಸೂಚಿಸುವುದು- ಇಲ್ಲಿ ಇನ್ನೊಂದು ಸತ್ಯವಿದೆ ಎಂಬುದನ್ನು.
ಇದು ಸಮೃದ್ಧಿ ! ನಿನ್ನ ಮಾತನ್ನು ಸತ್ಯಕ್ಕೆ ಮೀಸಲಿಟ್ಟರೆ ಆಗ ಈ ಎಲ್ಲ ಸಮೃದ್ಧಿಯಲ್ಲಿ ನೀನೂ ಒಂದಾಗುವೆ. ಆಗ- ಯಾವುದನ್ನು ಯಾವುದಕ್ಕೆ ಸಲ್ಲಿಸಬೇಕೋ ಅದಕ್ಕೆ ಸಲ್ಲಿಸಿದಂತೆ. ಇದು ನಿಜವಾದ ಸಲುಗೆ! ಇದು ಹತ್ತಿರದ ಅರ್ಥ.
(ರೇಖಾಚಿತ್ರ : ಎಂ. ಎಸ್. ಮೂರ್ತಿ)
ಲಕ್ಷ್ಮೀಶ ತೋಳ್ಪಾಡಿ