ಹೊಸದಿಲ್ಲಿ: ಗಲಭೆ ಪೀಡಿತ ಮಣಿಪುರ ಸೇರಿದಂತೆ 5 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕಕ್ಕೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪಕ್ಕೆ ರಾಷ್ಟ್ರಪತಿಯವರು ಒಪ್ಪಿಗೆ ನೀಡಿದ್ದಾರೆ. ಇದರಲ್ಲಿ ಇಬ್ಬರು ಮೊದಲ ಬಾರಿ ರಾಜ್ಯಪಾಲರಾದರೆ, 3 ರಾಜ್ಯಗಳಿಗೆ ಬೇರೆ ರಾಜ್ಯದಿಂದ ವರ್ಗಾವಣೆ ಮಾಡಲಾಗಿದೆ.
1 ವರ್ಷಕ್ಕೂ ಹೆಚ್ಚು ಕಾಲದಿಂದ ಘರ್ಷಣೆಗೆ ತುತ್ತಾಗಿರುವ ಮಣಿಪುರ ರಾಜ್ಯಪಾಲರಾಗಿ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ನೇಮಕ ಮಾಡಲಾಗಿದೆ. ಅಜಯ್ ಕುಮಾರ್ ಭಲ್ಲಾ 1984ರ ಬ್ಯಾಚಿನ ಅಸ್ಸಾಂ-ಮೇಘಾಲಯ ಕೇಡರ್‌ನ ಅಧಿಕಾರಿ. ಆಗಸ್ಟ್‌ನಲ್ಲಿ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ್ದರು.
ಕೇಂದ್ರ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಸೇನಾ ಮುಖ್ಯಸ್ಥ ಡಾ. ವಿಜಯ ಕುಮಾರ್ ಸಿಂಗ್ (ವಿ.ಕೆ.ಸಿಂಗ್) ಮಿಜೋರಾಂ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಮಿಜೋರಾಂ ರಾಜ್ಯಪಾಲರಾಗಿದ್ದ ಹರಿಬಾಬು ಕಂಭಮ್‌ಪತಿ ಅವರನ್ನು ಒಡಿಶಾ ಗವರ್ನರ್ ಆಗಿ ನೇಮಿಸಲಾಗಿದೆ. ಒಡಿಶಾದ ರಾಜ್ಯಪಾಲ ರಘುಬಾರ್ ದಾಸ್ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಮುರ್ಮು ಅಂಗೀಕರಿಸಿದ್ದಾರೆ.
ಬಿಹಾರಕ್ಕೆ ಖಾನ್ ವರ್ಗ:
ಕೇರಳ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬಿಹಾರ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕೇರಳಕ್ಕೆ ವರ್ಗಾವಣೆ ಮಾಡಲಾಗಿದೆ.