ಕಲಬುರಗಿ: ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಹೊಸ ಆ್ಯಪ್ ಜಾರಿಗೆ ತರಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಇಂಡಸ್ ಇಂಡ್ ಬ್ಯಾಂಕ್ ಹಾಗೂ ಲರ್ನಿಂಗ್ ಲಿಂಕ್ಸ್ ವತಿಯಿಂದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಸಿಎಸ್ಆರ್ ನಿಧಿಯಡಿ ರೋಡ್ ಟು ಸ್ಕೂಲ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಹೊಸ ಆ್ಯಪ್ ಮೂಲಕ ಶಿಕ್ಷಣ ಆಸಕ್ತರು ತಮ್ಮ ಹೆಸರು ನೋಂದಾಯಿಸಿದರೆ ಅವರು ಬಯಸುವ ಶಾಲೆಯಲ್ಲಿ ಬೋಧನೆಗೆ ಅವಕಾಶ ನೀಡಲಾಗುವುದು. ಇದರಿಂದ ಸರ್ಕಾರಿ ಶಾಲಾ ಶೈಕ್ಷಣಿಕ ಮಟ್ಟ ಸುಧಾರಣೆಗೊಂಡು ಮಕ್ಕಳ ಗುಣಮಟ್ಟ ಸುಧಾರಿಸಲಿದೆ ಎಂದು ವಿವರಣೆ ನೀಡಿದರು.
ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಗೀಡಾದ ಶಾಲೆಗಳ ಮರು ನಿರ್ಮಾಣಕ್ಕೆ ಬೆಂಗಳೂರಿನ ಪಿಇಎಸ್ ಸಂಸ್ಥೆ ಕೈಜೋಡಿಸಿದ್ದು, 10 ಶಾಲೆಗಳನ್ನು ಕಟ್ಟಿಸಿಕೊಡಲಿದೆ. ಇಂತಹ ಕಾರ್ಯಕ್ಕೆ ಇನ್ನಷ್ಟು ಸಂಸ್ಥೆಗಳು ಮುಂದೆ ಬರಬೇಕು ಎಂದು ಸಚಿವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ರೆಡ್ಡಿ, ಅಬ್ದುಲ್ ರೆಹಮಾನ್, ಅಂಜಲಿ ಮಲ್ಯ ಹಾಗೂ ಇಂಡಸ್ ಇಂಡ್ ಬ್ಯಾಂಕ್ ನ ಭಾರತ ಫೈನಾನ್ಸ್ ಇನ್ ಕ್ಲುಷನ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.