Advertisement

ಹಳೇ ಮನೆ ಮೇಲೆ ಹೊಸ ಅಪಾರ್ಟ್‌ಮೆಂಟು

03:45 AM Feb 06, 2017 | Harsha Rao |

ಇಂದಿನ ದಿನಗಳಲ್ಲಿ ಸಣ್ಣ ಪುಟ್ಟ ನಗರಗಳಲ್ಲೂ ನೆಲದ ಬೆಲೆ ಗಗನಕ್ಕೇರಿದೆ. ಚದರ ಅಡಿಗೆ ಸಾವಿರಾರು ರೂಗಳನ್ನು ಕೊಟ್ಟು ಖರೀದಿಸಿ, ಬರಿ ಒಂದು ಮನೆ ಕಟ್ಟಿದರೆ, ಹಾಕಿದ ಲಕ್ಷಾಂತರ ರೂಗಳ ಬಂಡವಾಳ ತಿರುಗಿಬರಲು ಎಷ್ಟೋ ವರ್ಷಗಳಾಗಬೇಕಾಗುತ್ತದೆ. ಇನ್ನು ಸಂಸಾರ ಬೆಳೆದು ಮಕ್ಕಳು, ಮರಿಮಕ್ಕಳು ಆಗುತ್ತಿದ್ದಂತೆ ಎರಡು ಮೂರು ಮನೆಗಳು ಅಗತ್ಯವಂತೂ ಇದ್ದೇ ಇರುತ್ತದೆ. ತಂದೆ ತಾಯಂದಿರಿಗೆ ತಮ್ಮ ಮಕ್ಕಳು ಬೇರೆಬೇರೆ ಕಡೆ ಚದುರಿ ಹೋಗುವ ಬದಲು, ಚೆನ್ನಾಗಿ ಹೊಂದಿಕೊಂಡಿರುವ ಬಡಾವಣೆಯಲ್ಲೇ ಎಲ್ಲರೂ ಇರಲಿ ಎಂಬ ಕಾರಣಕ್ಕೂ ಅಪಾರ್ಟ್‌ಮೆಂಟ್‌ಗಳಿಗೆ ಮೊರೆಹೋಗುತ್ತಾರೆ. ಒಟ್ಟಿಗೆ ಇದ್ದುಕೊಂಡೂ ಸಾಕಷ್ಟು ಖಾಸಗಿ ಸ್ಥಳವನ್ನೂ ಒದಗಿಸುವ ಅಪಾರ್ಟ್‌ಮೆಂಟಗಳು ಎಲ್ಲೆಡೆ ಜನಪ್ರಿಯವಾಗುತ್ತಿವೆ.

Advertisement

ಹಳೆಮನೆ ಸ್ಥಳದಲ್ಲಿ ಅಪಾರ್ಟ್‌ಮೆಂಟ್‌
ಸಾಮಾನ್ಯವಾಗಿ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಮನೆ ಕಟ್ಟಿದ್ದರೆ ಅದು ಭಾರಹೊರುವ ಇಟ್ಟಿಗೆ ಗೋಡೆಗಳ ಕಟ್ಟಡವಾಗಿರುತ್ತದೆ. ಹಾಗಾಗಿ ಈ ರೀತಿಯ ಮನೆಗಳ ಮೇಲೆ ಒಂದು ಇಲ್ಲವೇ, ಎರಡು ಮಹಡಿಗಳನ್ನು ಮಾತ್ರ ಕಟ್ಟಲು ಸಾಧ್ಯ. ಮನೆ ಮುವತ್ತು ವರ್ಷ ಹಳೆಯದಾದರೆ ಸಾಮಾನ್ಯವಾಗಿ ಅದರ ಅರ್ಧ ಆಯಸ್ಸು ಮುಗಿಯಿತು ಎಂದೇ ಪರಿಗಣಿಸಲಾಗುತ್ತದೆ. ಹಳೆ ಮನೆ ಮೇಲೆ ಮಹಡಿ ಕಟ್ಟುವ ಮೊದಲ ನುರಿತ ಆರ್ಕಿಟೆಕ್ಟ್ ಗಳಿಂದ ಪರಿಶೀಲಿಸಿ, ನಂತರವೇ ಮುಂದುವರಿಯುವುದು ಒಳ್ಳೆಯದು. ಚೆನ್ನಾಗಿ ವಿನ್ಯಾಸ ಮಾಡಿ, ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಬಳಸಿ ಕಟ್ಟಿದ ಮನೆಗಳು ನೂರು ವರ್ಷ ಬಾಳುವುದಾದರೂ, ಸರಿಯಾಗಿ ನಿರ್ವಹಣೆ ಇಲ್ಲದಿದ್ದರೆ ಕಟ್ಟಡಗಳ ಆಯಸ್ಸು ಕಡಿಮೆಯಾಗುತ್ತದೆ. ಹಾಗಾಗಿ ಮನೆ ತೀರ ಹಳೆಯದಾಗಿದ್ದು, ಅಂತಹ ಗುಣಮಟ್ಟವಾಗಲಿ ನಿರ್ವಹಣೆಯಾಗಲೀ ಇಲ್ಲದಿದ್ದರೆ, ಒಡೆದು ಅಪಾರ್ಟ್‌ಮೆಂಟ್‌ ಕಟ್ಟುವುದು ಅನಿವಾರ್ಯವಾಗುತ್ತದೆ.

ಹಳೆ ಮನೆ ಮೇಲೆ ಹೊಸದಾಗಿ ಕಟ್ಟುವಾಗ ಕೆಲ ನಿರ್ಬಂಧಗಳಿರುತ್ತದೆ. ಭಾರಹೊರುವ ಗೋಡೆಗಳು ಕಡ್ಡಾಯವಾಗಿ ಕೆಳಗಿರುವಂತೆಯೇ ಇರಬೇಕಾಗುತ್ತದೆ. ಈ ಕಾರಣದಿಂದಾಗಿ ಹೊಸವಿನ್ಯಾಸ ಮಾಡಲು ತೊಡಕಾಗಬಹುದು. ಇಂದಿನ ದಿನಗಳಲ್ಲಿ ಮನೆಯ ಬೆಲೆಗೆ ಹೋಲಿಸಿದರೆ ಕಾರುಗಳ ಬೆಲೆ ಕಡಿಮೆ ಇದ್ದು, ಮನೆ ಖರೀದಿಸಲು ಇಲ್ಲ ಕಟ್ಟಲು ತಯಾರಿರುವವರ ಬಳಿ ಒಂದು ಕಾರಾದರೂ ಇದ್ದೇ ಇರುತ್ತದೆ. ಹಳೆ ಮನೆ ಮೇಲೆ ಹೊಸದಾಗಿ ಕಟ್ಟುವಾಗ ಮೂರು ನಾಲ್ಕು ಕಾರುಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ತೊಡಕಾಗುತ್ತದೆ.  ಅದೇ ಅಪಾರ್ಟ್‌ಮೆಂಟ್‌ಗಳಲ್ಲಿ, ನೆಲಮಟ್ಟದಲ್ಲಿ ಕಂಬಗಳನ್ನು ಅಳವಡಿಸಿ “ಸ್ಟಿಲ್ಟ್ ಪಾರ್ಕಿಂಗ್‌’ ವ್ಯವಸ್ತೆ ಮಾಡುವುದರಿಂದ, ನಾಲ್ಕಾರು ಕಾರುಗಳಿಗೆ ಧಾರಾಳವಾಗಿ ಜಾಗ ಮಾಡಿಕೊಡಬಹುದು.

ಅಪಾರ್ಟ್‌ಮೆಂಟ್‌ ಲೆಕ್ಕಾಚಾರ
ಸಾಮಾನ್ಯವಾಗಿ ನಿಮ್ಮ ನಿವೇಶನದ ಅಳತೆ, ಮುಂದೆ ಇರುವ ರಸ್ತೆಯ ಅಗಲ ಹಾಗೂ ಬಡಾವಣೆ ಆಧರಿಸಿ ಒಟ್ಟಾರೆಯಾಗಿ ಎಷ್ಟು ಕಟ್ಟಬಹುದು ಎಂದು ನಿರ್ಧರಿಸಲಾಗುತ್ತದೆ. ಇದಕ್ಕೆ ಎಫ್. ಎ.ಆರ್‌ -ಫ್ಲೋರ್‌ ಏರಿಯ ರೇಶಿಯೊ ಎನ್ನಲಾಗುತ್ತದೆ. ಉದಾಹರಣೆಗೆ, ನಿಮ್ಮ ನಿವೇಶನ 30 ಅಡಿಗೆ 40 ಅಡಿ ಇದ್ದರೆ, ಎಫ್. ಎ.ಆರ್‌ ಎರಡರ ಲೆಕ್ಕದಲ್ಲಿ 2,400 ಚದರ ಅಡಿ ಒಟ್ಟಾರೆಯಾಗಿ ಕಟ್ಟಬಹುದು. ನೆಲಮಹಡಿಯನ್ನು ಪಾರ್ಕಿಂಗ್‌ಗೆ ಉಪಯೋಗಿಸಿದರೆ, ಅದು ಎಫ್. ಏ.ಆರ್‌ ಲೆಕ್ಕದಲ್ಲಿ ಸೇರುವುದಿಲ್ಲ. ಹಾಗಾಗಿ ನೀವು ಸುಮಾರು ಎಂಟು – ಒಂಭತ್ತು ಚದರ ವಿಸ್ತೀರ್ಣಹೊಂದಿರುವ ಮೂರು ಅಪಾರ್ಟ್‌ಮೆಂಟ್‌ ಕಟ್ಟಬಹುದು. ನಿಮ್ಮ ನಿವೇಶನದ ಪ್ರದೇಶದಲ್ಲಿ ಎಫ್. ಎ.ಆರ್‌ ಹೆಚ್ಚಿದ್ದರೆ, ಮತ್ತೂಂದು ಮಹಡಿಯನ್ನೂ ಕಟ್ಟಬಹುದು!

ಮುಂದುವರೆಯುವುದು ಹೇಗೆ?
ಕೆಲವರು ಬಿಲ್ಡರ್‌ಗಳೊಂದಿಗೆ ಜಾಯಿಂಟ್‌ ಡೆವಲಪ್‌ಮೆಂಟ್‌ ಅಂದರೆ ಮನೆಯವರು ತಮ್ಮ ನಿವೇಶನವನ್ನು ಕೊಡುವಂತೆಯೂ, ಬಿಲ್ಡರ್‌ ಅಪಾರ್ಟ್‌ಮೆಂಟ್‌ ಕಟ್ಟಿಕೊಡುವಂತೆಯೂ ಒಪ್ಪಂದಮಾಡಿಕೊಳ್ಳುತ್ತಾರೆ. ಮನೆಯವರು ಮಾರುಕಟ್ಟೆಯ ಧರ ಆಧರಿಸಿ ಒಟ್ಟಾರೆ ಕಟ್ಟಿರುವ ಪ್ರದೇಶದ ಸುಮಾರು ಅರ್ಧದಷ್ಟನ್ನು ಪಡೆಯುತ್ತಾರೆ. ಮಿಕ್ಕಿದ್ದನ್ನು ಬಿಲ್ಡರ್‌ ತನ್ನ ಬಂಡವಾಳ ಹಾಗೂ ಲಾಭವಾಗಿ ಪಡೆಯುತ್ತಾರೆ. 

Advertisement

ಇನ್ನು ಸೈಟಿನ ಲೆಕ್ಕ – ಇಡಿಯಾಗಿದ್ದದ್ದು ಬಿಡಿಬಿಡಿಯಾಗಿ, ಆದರೆ ವಿಭಜಿಸದೇನೇ – ಅನ್‌ ಡಿವೈಡೆಡ್‌ ಶೇರ್‌  ರೂಪದಲ್ಲಿ ಮೂರು ಅಥವಾ ನಾಲ್ಕು ಭಾಗಗಳಾಗುತ್ತದೆ. ಅಪಾರ್ಟ್‌ ಮೆಂಟ್‌ಗಳು ಹೊಸದಾಗಿ ಬಂದಾಗ ಜನರಿಗೆ ನಿವೇಶನವನ್ನು ನಾಲ್ಕಾರು ಹೋಳುಗಳಾಗಿ ವಿಂಗಡಿಸದೇನೇ ಒಬ್ಬಬ್ಬೊರಿಗೆ ಒಂದೊಂದು ಪಾಲು ಹೇಗೋ ಏನೋ? ಎಂಬ ಆತಂಕವಿರುತ್ತಿತ್ತು. ಆದರೆ ಈಗ ಇದೆಲ್ಲವೂ ಸಾಮಾನ್ಯವಾಗಿದ್ದು, ನಿವೇಶನದ ಎಲ್ಲ ಹಕ್ಕುಗಳಿಗೂ ಮಾಲೀಕರಾಗಿದ್ದವರೂ ಕೂಡ ಒಂದು ಪಾಲು ಪಡೆದುಕೊಂಡು, ಬದಲಿಗೆ ಹೊಸ ಅಪಾರ್ಟ್‌ಮೆಂಟ್‌ಗಳನ್ನು ಪಡೆಯಲು ಉತ್ಸುಕರಾಗಿರುತ್ತಾರೆ.

ನೀವೂ ಅಪಾರ್ಟ್‌ಮೆಂಟ್‌ ಕಟ್ಟಬಹುದೆ?
ಅಪಾರ್ಟ್‌ಮೆಂಟ್‌ ಕಟ್ಟಲು ಬಿಲ್ಡರ್‌ಗಳು ಬೇಕೇಬೇಕು ಎಂದೇನೂ ಇಲ್ಲ! ಅನೇಕಬಾರಿ ಮನೆಮಂದಿಯೆಲ್ಲ ಸೇರಿ, ತಮಗೆ ಹೇಗಿದ್ದರೂ ಸೇರಿರುವ ನಿವೇಶನದಲ್ಲಿ ತಮಗೆ ಬೇಕಾದರೀತಿಯಲ್ಲಿ ಆರ್ಕಿಟೆಕ್ಟ್ಗಳಿಂದ ವಿನ್ಯಾಸ ಮಾಡಿಸಿ ಕಟ್ಟುವುದೂ ಉಂಟು. ಹೀಗೆ ನೀವೇ ಕಟ್ಟಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದೂ ಕೂಡ ಸುಲಭ. 
ಇಂದು ಮನೆ ಕಟ್ಟುವ ಖಚಿಗೆ ಹೋಲಿಸಿದರೂ ಕೂಡ ನಿವೇಶನದ ಬೆಲೆಯೇ ಹೆಚ್ಚಿರುತ್ತದೆ. ಹಾಗಾಗಿ ಕೋಟ್ಯಂತರ ರೂ. ಬೆಲೆಬಾಳುವ ದುಬಾರಿ ನಿವೇಶನಗಳನ್ನು ಬಿಲ್ಡರ್‌ಗಳಿಗೆ ಹಸ್ತಾಂತರಿಸಿ, ಅವರು ಕಟ್ಟಿಕೊಡುವವರೆಗೂ ಕೈಕಟ್ಟಿಕೊಂಡು ಕೂರುವ ಬದಲು, ತಾವೇ ಮುತುವರ್ಜಿವಸಿ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಕೊಳ್ಳುವುದೂ ಉಂಟು.

ಕೆಲವರು ಮೂರನೆಯವರಿಗೆ ತಮ್ಮ ನಿವೇಶನವನ್ನು ಸುಮ್ಮನೆ ಪರಬಾರೆ ಮಾಡಲು ಹಿಂದೇಟು ಹಾಕಿ, ಬೇರೆಯವರು ಕಟ್ಟಿಕೊಡುವ ಗುಣಮಟ್ಟ ಹಾಗೂ ವಿನ್ಯಾಸ ಹೇಗೋ ಏನೋ? ಎಂದು ಚಿಂತಿಸಿ, ತಾವೇ ಮುಂದೆ ನಿಂತು, ಆರ್ಕಿಟೆಕ್ಟ್ಗಳ ಸಹಾಯದಿಂದ  ಸ್ವಂತಕ್ಕೆ  ಮನೆ ಕಟ್ಟಿಕೊಳ್ಳುವಷ್ಟೇ ಮುತುವರ್ಜಿ ವಹಿಸಿ ಅಪಾರ್ಟ್‌ಮೆಂಟ್‌ ಕಟ್ಟುತ್ತಾರೆ.
ಅಪಾರ್ಟ್‌ಮೆಂಟ್‌ಗಳಿಗೂ ಮನೆಗೂ ಇರುವ ವ್ಯತ್ಯಾಸ ಒಟ್ಟೊಟ್ಟಿಗೆ ಅನೇಕ ಮನೆಗಳು ಒಂದೇ ನಿವೇಶನದಲ್ಲಿ ಇರುವುದರಿಂದ ಕೆಲವೊಂದು ಸೌಕರ್ಯಗಳು ಹಂಚಿಕೊಳ್ಳಬೇಕಾಗುತ್ತದೆ. ಅಪಾರ್ಟ್‌ಮೆಂಟ್‌ ಪ್ಲಾನ್‌ ಮಾಡುವಾಗ ಇಂಥ ಕಾಮನ್‌ ಸ್ಪೇಸ್‌ ಹಾಗೂ ಸವಲತ್ತುಗಳನ್ನು ಹುಷಾರಾಗಿ ವಿನ್ಯಾಸ ಮಾಡಬೇಕು. ಜೊತೆಗೆ ನಮ್ಮ ಮನೆಯ ಟಾಯ್ಲೆಟ್‌ ಸೋರಿದರೆ ಅದು ಕೆಳಗಿನ ಮನೆಗೆ ಹೆಚ್ಚು ತೊಂದರೆ ಕೊಡುತ್ತದೆ. ಕಾಮನ್‌ ಗೋಡೆಗಳಿದ್ದರೆ ಆ ಕಡೆಯಿಂದ ಆಲ್ಟರೇಷನ್‌ ಇತ್ಯಾದಿಗಳನ್ನು ಮಾಡುವಾಗ ಬಡಗಿಗಳು ಸುತ್ತಿಗೆಯಿಂದ ಹೊಡೆದರೆ, ಈ ಕಡೆ ಹೊಡದಂತೆಯೇ ಭಾಸವಾಗುತ್ತದೆ. ಹಾಗಾಗಿ ಒಮ್ಮೆ ಕಟ್ಟಿದ ಮೇಲೆ ಮತ್ತೆ ಒಡೆದು ಕಟ್ಟುವ ಕೆಲಸ ಹೆಚ್ಚು ಇರದಂತೆ ಮೊದಲೇ ಅಪಾರ್ಟ್‌ಮೆಂಟ್‌ಗಳ ಪ್ಲಾನ್‌ ಮಾಡುವುದು ಉತ್ತಮ.

ಹೆಚ್ಚಿನ ಮಾಹಿತಿಗೆ: 98441 32826

Advertisement

Udayavani is now on Telegram. Click here to join our channel and stay updated with the latest news.

Next