Advertisement

ರಾಜ್ಯದಲ್ಲಿ ಹೊಸ ಕೃಷಿ ನೀತಿ ಜಾರಿ:ಎಚ್‌ಡಿಕೆ

06:15 AM Aug 12, 2018 | Team Udayavani |

ಮಂಡ್ಯ/ಪಾಂಡವಪುರ: ರೈತರ ಆತ್ಮಹತ್ಯೆ ತಡೆ ಹಾಗೂ ಅವರ ಬದುಕಿನ ರಕ್ಷಣೆಗಾಗಿ ರಾಜ್ಯದಲ್ಲಿ ಹೊಸ ಕೃಷಿ ನೀತಿ ಜಾರಿಗೊಳಿಸಲು ಚಿಂತನೆ ನಡೆಸಿದ್ದೇನೆಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

Advertisement

ತಾಲೂಕಿನ ಸೀತಾಪುರ ಗ್ರಾಮದ ಮಹದೇವಮ್ಮನವರ ಜಮೀನಿನಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ರೈತರ ಮನೆಬಾಗಿಲಿಗೆ ಯಾವುದೇ ಸಾಲಗಾರರು ಬರಬಾರದು. ಆ ರೀತಿ ಕೃಷಿ ನೀತಿ ರೂಪಿಸುತ್ತೇನೆ. ವಿಪಕ್ಷಗಳನ್ನು ಮೆಚ್ಚಿಸಲು ನಾನು ಈ ಕೆಲಸ ಮಾಡುತ್ತಿಲ್ಲ. ರೈತರ ಶ್ರೇಯೋಭಿವೃದ್ಧಿಗಾಗಿ ರೈತರ ಕಷ್ಟಗಳನ್ನು ಅರಿತಿರುವ ನಾನು ಅವರಿಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದು, ಕೃಷಿ ನೀತಿಯಲ್ಲಿ ಸಮಗ್ರ ಮಾರ್ಪಾಡು ಮಾಡುತ್ತೇನೆ. ರೈತರು ಆರ್ಥಿಕವಾಗಿ ಬಲಾಡ್ಯರಾಗಿ, ದಾನ ನೀಡುವ ಮಟ್ಟಿಗೆ ಬೆಳೆಯಬೇಕೆಂಬುದು ನನ್ನ ಕನಸಾಗಿದೆ ಎಂದರು.

ಮಂಡ್ಯ, ಮೈಸೂರಿಗೆ ಮೀಸಲಲ್ಲ:
ನಾನು ಮಂಡ್ಯ ಜಿಲ್ಲೆ, ಮೈಸೂರು ಭಾಗದ ರೈತರಿಗೆ ಮೀಸಲಲ್ಲ. ರಾಜ್ಯದ ಎಲ್ಲ ಭಾಗದ ರೈತರ ಹಿತ ಕಾಪಾಡಲು ಬದ್ಧನಾಗಿದ್ದೇನೆ. ಕಡ್ಲೆ ಕಾಯಿ, ಮೆಕ್ಕೆಜೋಳ, ದ್ರಾಕ್ಷಿ, ತೆಂಗು, ಅಡಿಕೆ, ಬೆಳೆಗಾರರಿಗೆ ಬೆಂಬಲ ಬೆಲೆ ನೀಡಿ, ರೈತರ ಹಿತಕಾಯಲು ಕಟಿಬದ್ಧ ಕಾರ್ಯಕ್ರಮ ರೂಪಿಸುತ್ತೇನೆ. ಕೃಷಿಯಲ್ಲಿ ಸಾಕಷ್ಟು ಬದಲಾವಣೆ ತರಬೇಕಾಗಿದ್ದು, ರೈತರ ಸಲಹೆ, ಸಹಕಾರ ಪಡೆದು ಮುಂದಿನ ದಿನಗಳಲ್ಲಿ ಕಾಯೊìà ನ್ಮುಖರಾಗುವುದಾಗಿ ಎಂದು ಭರವಸೆ ವ್ಯಕ್ತಪಡಿಸಿದರು.

ಆತ್ಮಹತ್ಯೆಗೆ ಮುಂದಾಗಬೇಡಿ:
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಮುಂದಾಗ ಬೇಡಿ. ನಿಮ್ಮ ಹಾಗೂ ಕುಟುಂಬದ ಸಮಸ್ಯೆಗಳಿಗೆ ವಿಧಾನ ಸೌಧದ ಬಾಗಿಲು ಸದಾ ತೆರೆದಿರುತ್ತದೆ.ಯಾವುದೇ ಕಾರಣಕ್ಕೂ ಆತ್ಮಹತ್ಯೆ ದಾರಿ ತುಳಿಯ ಬೇಡಿ ಎಂದು ಮನವಿ ಮಾಡಿದರು.

ಸಮನಾದ ಅಭಿವೃದ್ಧಿ:
ಕುಮಾರಸ್ವಾಮಿ ಅವರು ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಒತ್ತು ನೀಡುತ್ತಾರೆಂದು ನಗರದ ಪ್ರದೇಶದ ಜನತೆ ದೂರುತ್ತಿದ್ದಾರೆ. ಹಳ್ಳಿಗಳು, ರೈತರು ಉಳಿದರೆ ಮಾತ್ರ, ನಾಡು- ದೇಶ ಉಳಿಯಲು ಸಾಧ್ಯ. ಹೀಗಾಗಿ ರೈತರ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದೇನೆ. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಅಭಿವೃದ್ಧಿಯಲ್ಲಿ ಸಮನಾಗಿ ಕೊಂಡೊಯ್ಯತ್ತೇನೆ ಎಂದು ಹೇಳಿದರು.

Advertisement

ಮಂಡ್ಯ ಜಿಲ್ಲೆಯ ಜನತೆ 7 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯ ರ್ಥಿಗಳನ್ನು ಗೆಲ್ಲಿಸಿ, 37 ಸ್ಥಾನಗಳಿಸಿರುವ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ಏರಲು ಸಹಕಾರ ನೀಡಿದ್ದೀರಿ. ನಮ್ಮ ಪೂರ್ವಜರ ಪುಣ್ಯದಿಂದ ಮುಖ್ಯಮಂತ್ರಿ ಸ್ಥಾನ ದೊರೆತಿದೆ. ನನ್ನ ಮೇಲೆ ಹೊರಿಸಿರುವ ಋಣವನ್ನು ಜನ್ಮ ಇರುವವರೆಗೂ ತೀರಿಸಲು ಸಾಧ್ಯವಿಲ್ಲ ಎಂದು ಭಾವುಕರಾದರು.

ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಷುಗರ್‌ ಹಾಗೂ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗಳ ಶಾಶ್ವತ ಅಭಿವೃದ್ಧಿ ಮಾಡಲಾಗುವುದು. ಈ ಬಗ್ಗೆ ಯಾವುದೇ ಅನುಮಾನ ಬೇಡವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಸಚಿವ ಸಾ.ರಾ. ಮಹೇಶ್‌, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕರಾದ ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್‌, ರವೀಂದ್ರ ಶ್ರೀಕಂಠಯ್ಯ, ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಸೇರಿ ಹಲವರು ಭಾಗವಹಿಸಿದ್ದರು.

ಭತ್ತದ ಸಸಿಗೆ ಕುಮಾರಸ್ವಾಮಿ ಪೂಜೆ
ಪಾಂಡವಪುರ:
ಭತ್ತ ನಾಟಿ ಕಾರ್ಯಕ್ಕೆ ಪಂಚೆ, ಶರ್ಟು ಧರಿಸಿ ಬಂದಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮೊದಲಿಗೆ ಭತ್ತದ ಸಸಿಗೆ ಹೂ ಮುಡಿಸಿ ಪೂಜೆ ಸಲ್ಲಿಸಿದರು. ತಲೆಗೆ ಟವಲ್‌ ಸುತ್ತಿ ಪಂಚೆ, ಶರ್ಟ್‌ ಧರಿಸಿ ಬಂದಿದ್ದ ಸಿ.ಎಸ್‌.ಪುಟ್ಟರಾಜು ಹೇರು ಕಟ್ಟಿ ಉಳುಮೆ ಮಾಡುವ ಮೂಲಕ ಗಮನಸೆಳೆದರು. ಮಧ್ಯಾಹ್ನ 1.40ರ ಸಮಯಕ್ಕೆ ಈಶಾನ್ಯ ದಿಕ್ಕಿನಿಂದ ಕುಮಾರಸ್ವಾಮಿ ನಾಟಿ ಕಾರ್ಯ ನಡೆಸಿದರು.

ಇವರ ಜತೆ ಟೀ ಶರ್ಟ್‌, ಬರ್ಮುಡಾ ಚಡ್ಡಿ ಧರಿಸಿದ ªಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಹಾಗೂ ಮಹಿಳಾ ಕೂಲಿ ಕಾರ್ಮಿಕರು ಸಾಥ್‌ ನೀಡಿದರು. ಸಚಿವ ಸಾ.ರಾ.ಮಹೇಶ್‌ ಹಾಗೂ ಕೆ.ಸಿ. ನಾರಾಯಣಗೌಡ ಪ್ಯಾಂಟ್‌ ಧರಿಸಿ ಬಂದಿದ್ದರೆ, ಉಳಿದ ಶಾಸಕರು ಪಂಚೆಯಲ್ಲೇ ಆಗಮಿಸಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿ ನಾಟಿ ಮಾಡುವ ವೇಳೆ ರೈತ ಗೀತೆ ಮೊಳಗಿಸಲಾಯಿತು. ನೆರೆದಿದ್ದ ರೈತರು ಜಯಘೋಷಗಳನ್ನು ಮೊಳಗಿಸಿದರು.

ಹಾಡಿನ ವೈಭವ: ಮುಖ್ಯಮಂತ್ರಿ ನಾಟಿ ಕಾರ್ಯದ ಸಂಭ್ರಮಕ್ಕೆ ಶಾಸಕ ಡಾ.ಕೆ.ಅನ್ನದಾನಿ ಹಾಡು ಹಾಡುವ ಮೂಲಕ ವಿಶೇಷ ಮೆರುಗು ತಂದರು. ನಾಟಿ ಮಾಡುವ ಸ್ಥಳದಲ್ಲಿ ಮಹದೇಶ್ವರ ಹಾಗೂ ಎದೆ ತುಂಬಿ ಹಾಡುವೆನು ಹಾಡು ಹಾಡುವುದರೊಂದಿಗೆ ಎಲ್ಲರಲ್ಲೂ ಉತ್ಸಾಹ ತುಂಬಿದರು.

ರೈತರೊಂದಿಗೆ ಸಿಎಂ ಸಹ ಭೋಜನ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭತ್ತ ನಾಟಿ ಮಾಡಿದ ಬಳಿಕ ರೈತರೊಟ್ಟಿಗೆ ಸಹಭೋಜನ ಸ್ವೀಕರಿಸಿದರು. ಮುಖ್ಯಮಂತ್ರಿ ಭೋಜನಕ್ಕಾಗಿ ಮುದ್ದೆ, ಚಪಾತಿ, ಹುರಳಿಕಟ್ಟು ಸಾಂಬಾರ್‌, ಹುರಳಿಕಾಳು ಸೊಪ್ಪಿನ ಪಲ್ಯ, ಮೊಸೊಪ್ಪು, ಮಡ್ರಾಸ್‌ ರಸಂ, ಅನ್ನ, ಹಿರಳೀಕಾಯಿ ಚಿತ್ರಾನ್ನ ಹಿರಳೀಕಾಯಿ ಉಪ್ಪಿನಕಾಯಿ, ಹೆಸರುಬೇಳೆ ಪಾಯಸ, ಹುರಳಿ ಅಪ್ಪಳ, ಹಸಿ ಅವರೆಕಾಳು ಕೂಟು ಸಿದ್ಧಪಡಿಸಲಾಗಿತ್ತು. ಊಟದ ಬಳಿಕ ನಂಜನಗೂಡು ರಸಬಾಳೆಯನ್ನು ನೀಡಲಾಯಿತು.

ಮುಖ್ಯಮಂತ್ರಿ, ಸಚಿವರು, ಶಾಸಕರೂ ಸೇರಿದಂತೆ 100 ರಿಂದ 150 ರೈತರಿಗೆ ಜಮೀನಿನ ರೈತ ದೇವರಾಜು ಮನೆಯಲ್ಲಿ ಊಟ ಸಿದ್ಧಪಡಿಸಲಾಗಿತ್ತು. ನಾಟಿ ಕಾರ್ಯ ಮುಗಿದ ಬಳಿಕ ಜಮೀನಿನ ಬಳಿಯೇ ರೈತರೊಟ್ಟಿಗೆ ಕುಳಿತು ಸಹಭೋಜನ ಸ್ವೀಕರಿಸಿದರು. ಸಾಮಾನ್ಯ ರೈತರ ಜೊತೆ ನಾಡಿನ ದೊರೆ ಊಟ ಮಾಡ್ತಿರೋದಕ್ಕೆ ರೈತ ದೇವರಾಜು ಸಂತಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳೆರಡೂ ಸೌಹಾರ್ದಯುತವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸುವ ಕುರಿತು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. ಮತ್ತೂಮ್ಮೆ ಪಕ್ಷದ ನಾಯಕರ ಜತೆಗೆ ಚರ್ಚಿಸಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.
– ಎಚ್‌.ಡಿ.ಕುಮಾರಸ್ವಾಮಿ,
ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next