ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳು ಮತ್ತಷ್ಟು ಏರಿಕೆಯಾಗಿದೆ. ಶುಕ್ರವಾರ ರಾಜ್ಯದಲ್ಲಿ ಮತ್ತೆ515 ಹೊಸ ಕೋವಿಡ್ ಸೋಂಕು ಪ್ರಕರಣಗಳು ದೃಢವಾಗಿದೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕು ಪ್ರಕರಣಗಳು 4835 ಕ್ಕೆ ಏರಿಕೆಯಾಗಿದೆ.
ಇಂದಿನ ಸೋಂಕು ಪ್ರಕರಣಗಳ ಪೈಕಿ ಉಡುಪಿ ಜಿಲ್ಲೆ ಮುಂದಿದ್ದು ಅಲ್ಲಿ 204 ಸೋಂಕಿತರು ಕಂಡುಬಂದಿದ್ದಾರೆ. ಉಳಿದಂತೆ ಯಾದಗಿರಿ ಜಿಲ್ಲೆಯಲ್ಲಿ 74 ಸೋಂಕು ಪ್ರಕರಣಗಳು ದೃಢವಾಗಿದೆ.
ಹೆಚ್ಚು ಸೋಂಕು ಪ್ರಕರಣಗಳು ಕಂಡು ಬರುತ್ತಿರುವ ಕಲಬುರಗಿ ಜಿಲ್ಲೆಯಲ್ಲಿ ಇಂದು 42 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದ್ದು ಇಂದು 53 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಉಳಿದಂತೆ ಬೆಳಗಾವಿ 36, ಬೀದರ್ 39 ಪ್ರಕರಣಗಳು ಪತ್ತೆಯಾಗಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ 10 ಹೊಸ ಪ್ರಕರಣಗಳು, ಮಂಡ್ಯದಲ್ಲಿ 13 ಪ್ರಕರಣಗಳು, ಹಾಸನ, ಚಿಕ್ಕಬಳ್ಳಾಪುರದಲ್ಲಿ ತಲಾ ಮೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು, ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು ಪ್ರಕರಣಗಳು ಕಂಡು ಬಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 12 ಹೊಸ ಕೋವಿಡ್ 19 ಸೋಂಕು ಪ್ರಕರಣ ದೃಢವಾಗಿದೆ.
ರಾಮನಗರ, ಹಾವೇರಿಯಲ್ಲಿ ತಲಾ ಎರಡು ಪ್ರಕರಣ, ಧಾರವಾಡದಲ್ಲಿ ಮೂರು, ಕೋಲಾರ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆಯಲ್ಲಿ ತಲಾ ಒಂದು ಕೋವಿಡ್-19 ಸೋಂಕು ಪ್ರಕರಣ ಕಂಡು ಬಂದಿದೆ.
ಇಂದು ಮತ್ತೆ515 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆ ಕಂಡಿದೆ. ಇದುವರೆಗೆ ಒಟ್ಟು 1688 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 57 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.