ಹೊಸದಿಲ್ಲಿ: ತಾನೆಂದೂ ಜಿಹಾದ್‌ಗೆ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ವಿವಾದಿತ ಇಸ್ಲಾಂ ಪ್ರಚಾರಕ ಝಾಕೀರ್ ನಾಯ್ಕ್ ನಾನು ಮುಸ್ಲಿಂ ಎಂಬ ಏಕೈಕಕಾರಣಕ್ಕಾಗಿ ನನ್ನನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿದ್ದಾನೆ.
ಉಪನ್ಯಾಸಗಳ ಮೂಲಕ ಭಯೋತ್ಪಾ ದನೆಗೆ ದುಷ್ಪ್ರೇರಣೆ ನೀಡಿದ ಆರೋಪಕ್ಕೊಳಗಾಗಿರುವ ವಿವಾದಿತ ಇಸ್ಲಾಂ ಪ್ರಚಾರಕ ಝಾಕೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಎನ್‌ಐಎ ಇಂಟರ್‌ಪೋಲ್‌ಗೆ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಝಾಕೀರ್ ತನ್ನ ವಿರುದ್ಧದ ಆರೋಪಗಳೆಲ್ಲವನ್ನೂ ನಿರಾಕರಿಸಿ ಇಂಟರ್‌ಪೋಲ್‌ಗೆ ಪತ್ರವೊಂದನ್ನು ಬರೆದಿದ್ದಾನೆ.
2016ರ ಜುಲೈನಲ್ಲಿ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಝಾಕೀರ್‌ನ ಕಾರ್ಯಚಟು ವಟಿಕೆಗಳ ಮೇಲೆ ತನಿಖಾ ಸಂಸ್ಥೆಗಳು ನಿಗಾ ಇರಿಸಿದ್ದವು. ಝಾಕೀರ್ ಧರ್ಮ ಪ್ರಚಾರಾರ್ಥವಾಗಿ ನಡೆಸುತ್ತಿರುವ ಉಪನ್ಯಾಸಗಳು ಭಯೋತ್ಪಾದನೆಯತ್ತ ಯುವ ಕರು ಆಕರ್ಷಿತರಾಗಲು ಪ್ರೇರಣೆ ನೀಡುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದವು. ಢಾಕಾ ದಾಳಿಯ ಸಂಬಂಧ ಬಂಧಿತ ನಾಗಿದ್ದ ಆರೋಪಿಯೋರ್ವ ಝಾಕೀರ್ ನ ಉಪ ನ್ಯಾಸಗಳಿಂದ ಪ್ರೇರಿತನಾಗಿ ತಾನು ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ ಬಳಿಕ ಎನ್‌ಐಎ ಸಹಿತ ವಿವಿಧ ತನಿಖಾ ಸಂಸ್ಥೆಗಳು ಝಾಕೀರ್ ವಿರುದ್ಧ ತನಿಖೆಯನ್ನು ಕೈಗೆತ್ತಿಕೊಂಡಿದ್ದವು.
ಅಲ್ಲದೆ ಝಾಕೀರ್ ವಿರುದ್ಧ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲ ಯವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿ ಕೊಂಡಿತ್ತು. ಅದರಂತೆ ಎನ್‌ಐಎ ಈ ವರ್ಷದ ಮೇನಲ್ಲಿ ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್‌ಪೋಲ್‌ಗೆ ಮನವಿ ಮಾಡಿಕೊಂಡಿತ್ತು.
ಕಳೆದ 25 ವರ್ಷಗಳಿಂದ ವಿಶ್ವದ ಹಲವಾರು ದೇಶಗಳಲ್ಲಿ ಇಸ್ಲಾಂ ಪ್ರಚಾರದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದು ಈ ಎಲ್ಲ ದೇಶಗಳೂ ನನ್ನನ್ನು ಸ್ವಾಗತಿಸಿ ವೆಯಲ್ಲದೆ ಗೌರವಿಸುತ್ತಾ ಬಂದಿವೆ. ಆದರೆ ಭಾರತದಲ್ಲಿ ತನಿಖಾ ಸಂಸ್ಥೆಗಳು ತನ್ನ ನೇತೃತ್ವದ ಎನ್‌ಜಿಒ ಆಗಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ್ನು ನಿಷೇಧಿಸುವ ಮೂಲಕ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಝಾಕೀರ್ ತನ್ನ ಪತ್ರದಲ್ಲಿ ಆರೋಪಿಸಿದ್ದಾನೆ.
ನನ್ನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ ದಲ್ಲಿ ಯಾವುದೇ ದೇಶದ ಕಾನೂನು ಜಾರಿ ಸಂಸ್ಥೆಗಳು ನನ್ನನ್ನು ಬಂಧಿಸಿ ಭಾರತಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದೂ ತನ್ನ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾನೆ. ಸದ್ಯ ಈತ ಮಲೇಶ್ಯಾದಲ್ಲಿದ್ದಾನೆ ಎನ್ನಲಾಗಿದೆ.