Advertisement

ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಿ

04:15 PM Jan 18, 2018 | |

ಕೋಲಾರ: ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಸಲಹೆ ನೀಡಿದರು.

Advertisement

ನಗರದ ಬಾಲಕರ ಕಾಲೇಜಿನ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಚುನಾವಣಾ ಆಯೋಗದ ಜಿಲ್ಲಾ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಸಮಿತಿ ಪ್ರೌಢಶಾಲಾ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ, ಪೋಸ್ಟರ್‌ ತಯಾರಿಕೆ, ಕೊಲಾಜ್‌ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಯುವಜನತೆಗೆ ಕಿವಿಮಾತು: ಸಮಿತಿ ಅಧ್ಯಕ್ಷರೂ ಆಗಿರುವ ಸಿಇಒ ಅವರು, 18 ವರ್ಷ ತುಂಬಿದ ನವ ಮತದಾರರು ಕೂಡಲೇ ಹೆಸರು ನೋಂದಾಯಿಸಲು ಅರಿವು ಮೂಡಿಸಿ, ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಆಡಳಿತ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕೆಂದು ವಿದ್ಯಾರ್ಥಿ, ಯುವಜನತೆಗೆ ಕಿವಿಮಾತು ಹೇಳಿದರು.

ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಿ: ಈ ಆಡಳಿತ ಯಂತ್ರವನ್ನು ಬಳಸಿಕೊಂಡು ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಅಳೆಯುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು ಎಂದರು.

ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮಾತನಾಡಿ, ಬ್ರಿಟಿಷರ ಕಾಲ ದಲ್ಲಿ ಹೆಚ್ಚು ತೆರಿಗೆ ಪಾವತಿಸುವವರಿಗೆ
ಮಾತ್ರ ಮತದಾನದ ಹಕ್ಕಿತ್ತು. ಇಂದು ನಮ್ಮ ಪ್ರಜಾಪ್ರಭುತ್ವ ಕೋಟ್ಯಧೀಶ್ವರರಾಗಿರಲಿ, ಬಡ ಕೂಲಿಕಾರ್ಮಿಕನಾಗಿರಲಿ ಒಂದೇ ಮತ ಒಂದೇ ಮೌಲ್ಯ ನೀಡಿದೆ ಎಂದರು.

Advertisement

ಮತ ಚಲಾಯಿಸದೇ ಅಪಮೌಲ್ಯ ಮಾಡಬಾರದು. ದೇಶದ ಆಡಳಿತ ಚುಕ್ಕಾಣಿ ಯಾರು ಹಿಡಿಯಬೇಕೆಂದು ನಿರ್ಧರಿಸುವ ನಿಮ್ಮ ಅಮೂಲ್ಯ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಸ್ವಾಮಿ ಮಾತನಾಡಿ, ಚುನಾವಣಾ ಆಯೋಗ ವಿದ್ಯಾರ್ಥಿ, ಯುವ ಜನತೆಗೆ ವಿವಿಧ ಸ್ಪರ್ಧೆ ಆಯೋಜಿಸುವ ಮೂಲಕ ಮತದಾನದ ಮಹತ್ವ ತಿಳಿಸಲಾಗುತ್ತಿದೆ ಎಂದರು. 

ಮತದಾನದ ಜಾಗೃತಿ ಮೂಡಿಸುವ ಪ್ರಬಂಧ ಸ್ಪರ್ಧೆಯಲ್ಲಿ 750 ಪದಗಳಿರುವಂತೆ ಬರೆಯಿರಿ, 45 ನಿಮಿಷಗಳಲ್ಲಿ ಮುಗಿಸಿ ಬಹುಮಾನ ಪಡೆದುಕೊಳ್ಳಿ ಎಂದರು. ಅದೇ ರೀತಿ, ಪೋಸ್ಟರ್‌ ಮೇಕಿಂಗ್‌, ಕೋಲ್ಯಾಜ್‌ ಸ್ಪರ್ಧೆಗಳಿಗೂ 45 ನಿಮಿಷ ಅವಕಾಶ ನೀಡಲಾಗಿದ್ದು, ಈಗಾಗಲೇ ಶಾಲಾ, ತಾಲೂಕು ಹಂತದಲ್ಲಿ ಪ್ರಥಮ ಬಹುಮಾನಗಳಿಸಿ ಜಿಲ್ಲಾ ಹಂತಕ್ಕೆ ಬಂದಿರುವ ಚಿಣ್ಣರು, ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡಬೇಕೆಂದರು.

ತೀರ್ಪುಗಾರರಾಗಿ ಉಪನ್ಯಾಸಕರಾದ ವೆಂಕಟೇಶ್‌, ಕೃಷ್ಣಪ್ಪ, ಅನುರಾಧಾ, ರಾಜಕುಮಾರಿ, ಶಿಕ್ಷಕರಾದ ಕಾಳಿದಾಸ, ಗುಲ್ಜಾರ್‌ ಕಾರ್ಯನಿರ್ವಹಿಸಿದರು. ಜಿಲ್ಲಾ ಕ್ರೀಡಾ ಯುವ ಸಬಲೀರಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಗೀತಾ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಜಿಪಂನ ಲಕ್ಷ್ಮೀಶ್‌ ಕಾಮತ್‌, ಚನ್ನಪ್ಪ ವಿಷಯ ಪರಿವೀಕ್ಷಕ ಬಾಬು ಜನಾರ್ದನ ನಾಯ್ಡು, ಮಲ್ಲಿಕಾರ್ಜುನಾಚಾರಿ ಉಪಸ್ಥಿತರಿದ್ದರು. 

ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಿಕೊಳ್ಳದೇ ಗೌಪ್ಯತೆ ಕಾಪಾಡಿ ಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಬೇಕು. ಯುವ ಜನತೆಗೆ ಇಂತಹ ಸ್ಪರ್ಧೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಅನಕ್ಷರಸ್ಥರು ಪೆದ್ದರಲ್ಲ. ಅವರಿಗೂ ನಿರ್ಧಾರ ಕೈಗೊಳ್ಳುವ ಶಕ್ತಿ ಇದೆ. ಗೊತ್ತಿ ಲ್ಲದವರಿಗೆ ವಿದ್ಯಾರ್ಥಿಗಳು ಮತದಾನದ ಮಹತ್ವವನ್ನು ತಿಳಿಸಿಕೊಡಬೇಕು. ಬಹುಮಾನ ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಚುನಾವಣೆ ಬಂದಾಗ ಈ ಸ್ಪರ್ಧೆಗಳು ನಿಮ್ಮ ನೆನಪಿನಲ್ಲಿ ಉಳಿಯುತ್ತವೆ. 
ಕಿ ಬಿ.ಬಿ.ಕಾವೇರಿ, ಜಿಪಂ ಸಿಇಒ 

Advertisement

Udayavani is now on Telegram. Click here to join our channel and stay updated with the latest news.

Next