Advertisement

ನವ ಕರ್ನಾಟಕಕ್ಕಾಗಿ ಇನ್ನೊಮ್ಮೆ ಹರಸಿ

12:53 PM Oct 24, 2017 | |

ಧಾರವಾಡ: ಕಾಂಗ್ರೆಸ್‌ ಸರ್ಕಾರ ಕಳೆದ ನಾಲ್ಕೂವರೆ ವರ್ಷದಲ್ಲಿ ನುಡಿದಂತೆ ನಡೆದು ನವ ಕರ್ನಾಟಕ ನಿರ್ಮಾಣ ಮಾಡುವ ಪಣ ತೊಟ್ಟಿದ್ದು, ಇನ್ನೂ ಒಂದು ಬಾರಿ ಜನರು ಇದೇ ಸರ್ಕಾರ ಅಧಿಕಾರಕ್ಕೆ ಬರಲು ಆಶೀರ್ವಾದ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡರು. 

Advertisement

ಇಲ್ಲಿನ ಕೃಷಿ ವಿವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ “ಭರವಸೆಗಳ ಸಾಕಾರದ ಸಂಭ್ರಮ’ ಕಾರ್ಯಕ್ರಮದಲ್ಲಿ ಏಳು ಜಿಲ್ಲೆಗಳ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು. 

ನಾಲ್ಕೂವರೆ ವರ್ಷದಲ್ಲಿ ಚುನಾವಣೆಗೂ ಮುಂಚೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ಸರ್ಕಾರದ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ವಿವಿಧ ಭಾಗ್ಯಗಳನ್ನು 4 ಕೋಟಿ ಜನರು ಪಡೆದುಕೊಂಡಿದ್ದಾರೆ. ಪ್ರಣಾಳಿಕೆ ಮಾತ್ರವಲ್ಲ, ಅದನ್ನು ಹೊರತುಪಡಿಸಿ ಮಾತೃಪೂರ್ಣ, ಆರೋಗ್ಯಭಾಗ್ಯ.

ಸಾಲ ಮನ್ನಾ, ಇಂದಿರಾ ಕ್ಯಾಂಟೀನ್‌ನಂತಹ ಅನೇಕ ಜನಪರ ಯೋಜನೆಗಳನ್ನು ಸರ್ಕಾರ  ಮಾಡಿದೆ ಎಂದರು. ಕಾಂಗ್ರೆಸ್‌ ತಾನು ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಜನರ ವಿಶ್ವಾಸಕ್ಕೆ ದ್ರೋಹ ಮಾಡಿಲ್ಲ. ಹೀಗಾಗಿ ನವ ಕರ್ನಾಟಕ ನಿರ್ಮಾಣ ಮಾಡಲು ಹೊರಟಿರುವ ಕಾಂಗ್ರೆಸ್‌ಗೆ ರಾಜ್ಯದ ಜನರು ಇನ್ನೊಂದು ಬಾರಿ ಅಧಿಕಾರ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಂಡರು. 

ಬಿಜೆಪಿ ಸಾಧನೆಯೇ ಶೂನ್ಯ: ಭರವಸೆಗಳ ಸಾಕಾರದ ಸಂಭ್ರಮ ಸಮಾವೇಶ ಶೂನ್ಯ ಸಾಧನೆ ಎಂದು ಬಿಜೆಪಿಯವರು ಜರಿಯುತ್ತಿದ್ದಾರೆ. ಆದರೆ ಬಿಜೆಪಿಯ ಐದು ವರ್ಷ ಅವಧಿಗೆ ಹೋಲಿಸಿದರೆ ಕಾಂಗ್ರೆಸ್‌ನ ಅವಧಿಯಲ್ಲಿ ಅದರ ನಾಲ್ಕು ಪಟ್ಟು ಕೆಲಸಗಳಾಗಿವೆ.

Advertisement

ಅವರು ನೀರಾವರಿಗೆ 22 ಸಾವಿರ ಕೋಟಿ ಖರ್ಚು ಮಾಡಿದರೆ ನಾವು 60 ಸಾವಿರ ಕೋಟಿ ಅನುದಾನ ನೀಡಿದ್ದೇವೆ. ಎಸ್‌ಸಿ, ಎಸ್‌ಟಿ ಜನರಿಗೆ ಅವರು 21 ಸಾವಿರ ಕೋಟಿ ನೀಡಿದರೆ, ನಾವು ಕಾಂಗ್ರೆಸ್‌ 87 ಸಾವಿರ ಕೋಟಿ ಅನುದಾನ ಪೂರೈಸಿದ್ದೇವೆ. ಆದರೆ ಸರ್ಕಾರದ ವಿರುದ್ಧ ಸುಳ್ಳುಗಳನ್ನೇ ಮತ್ತೆ ಮತ್ತೆ ಹೇಳಿ ಅದನ್ನು ಜನರು ನಂಬುವಂತೆ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದರು. 

300 ಇಂದಿರಾ ಕ್ಯಾಂಟೀನ್‌: ಬಡವರ ಪರವಾಗಿ ಕೆಲಸ ಮಾಡುವ ಕಾಂಗ್ರೆಸ್‌ ಸರ್ಕಾರ ಬಡವರಿಗೆ  ಅನ್ನಭಾಗ್ಯ, ಕ್ಷೀರ ಭಾಗ್ಯ ಕೃಷಿ ಭಾಗ್ಯದಂತಹ ಸೌಲಭ್ಯಗಳನ್ನು ಕೊಟ್ಟಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇದೀಗ ಇಂದಿರಾ ಕ್ಯಾಂಟೀನ್‌ ಆರಂಭಿಸಿದೆ. ಬೆಂಗಳೂರಿನಲ್ಲಿಯೇ 200 ಇಂದಿರಾ ಕ್ಯಾಂಟೀನ್‌ ಬರಲಿದ್ದು, ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ 300 ಇಂದಿರಾ ಕ್ಯಾಂಟೀನ್‌  ಆರಂಭಿಸುತ್ತೇವೆ ಎಂದರು.

ಏಳು ಜಿಲ್ಲೆಗಳಿಗೆ ಸೌಲಭ್ಯ: ಕಾರ್ಯಕ್ರಮದಲ್ಲಿ ಧಾರವಾಡ, ಹಾವೇರಿ, ಗದಗ, ಕಾರವಾರ, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತರಿಸಿದರು. ವಾರ್ತಾ ಇಲಾಖೆ ನಿರ್ದೇಶಕ ಡಾ| ಹರ್ಷಾ ಪಿ.ಎಸ್‌. ಸ್ವಾಗತಿಸಿದರು. ಶಂಕರ ಪ್ರಕಾಶ ನಿರೂಪಿಸಿದರು. ಧಾರವಾಡ ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ವಂದನಾರ್ಪಣೆ  ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next