ಕರ್ಮಫಲಗಳ ಬಗ್ಗೆ ನೀವೆಲ್ಲ ಪುರಾಣ-ಪುಣ್ಯಕಥೆಗಳಲ್ಲಿ ಕೇಳಿರುತ್ತೀರಿ. ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಯೂ ಅದರ ಕರ್ಮಫಲವನ್ನು ಅನುಭವಿಸಲೇ ಬೇಕು ಎಂಬುದು ಕರ್ಮಫಲ ಸಿದ್ಧಾಂತ. ಈಗ ಇದೇ ಕರ್ಮಫಲ ವಿಷಯವನ್ನು ಸಿನಿಮಾ ರೂಪದಲ್ಲಿ ತೆರೆಮೇಲೆ ಹೇಳಲು ಹೊರಟಿದೆ “ಅಘೋರ’ ಚಿತ್ರತಂಡ.
ಸಾಮಾನ್ಯವಾರ “ಅಘೋರ’ ಅಂದ್ರೆ, ಬಹುತೇಕರಿಗೆ ಅದರ ಘೋರ ಕಲ್ಪನೆಗಳು ಕಣ್ಮುಂದೆ ಬರುತ್ತದೆ. ಅಂತೆಯೇ ಈ ಸಿನಿಮಾದಲ್ಲೂ ಕೂಡ ಚಿತ್ರತಂಡ, ಪ್ರೇಕ್ಷಕರಿಗೆ ತೆರೆಮೇಲೆ ಸಾವಿನ ಕೊನೆಯಲ್ಲಿ ಎದುರಾಗುವ ಅಂಥದ್ದೇ ಒಂದು ಘೋರ ದರ್ಶನವನ್ನು ಮಾಡಿಸಲಿದೆಯಂತೆ.
ಇಂಥದ್ದೊಂದು ವಿಭಿನ್ನ ಪ್ರಯತ್ನದ ಬಗ್ಗೆ ಮಾತನಾಡುವ ನಾಯಕ ಕಂ ನಿರ್ಮಾಪಕ ಪುನೀತ್, “ಪ್ರತಿಯೊಬ್ಬರ ಬದುಕಿನಲ್ಲೂ ನಡೆಯುವ ಬಹುತೇಕ ಘಟನೆಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಇಂಥ ಎಲ್ಲ ಅನಿರೀಕ್ಷಿತ, ಅಚ್ಚರಿ, ಆಘಾತದ ಘಟನೆಗಳೆಲ್ಲದಕ್ಕೂ ಹಿಂದಿನ ಜನ್ಮದ ಕರ್ಮಫಲ ಕಾರಣ. ನಾವು ಹಿಂದೆ ಏನು ಮಾಡಿರುತ್ತೇವೋ, ಅದನ್ನ ಈ ಜನ್ಮದಲ್ಲಿ ಅನುಭವಿಸಲೇ ಬೇಕು. ಇದೇ ಲೈನ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಇಡೀ ಸಿನಿಮಾ ಆಡಿಯನ್ಸ್‌ಗೆ ಸಸ್ಪೆನ್ಸ್-ಥ್ರಿಲ್ಲರ್-ಹಾರರ್ ಜೊತೆಗೆ ಬೇರೊಂದು ಅನುಭವ ಕೊಡುತ್ತದೆ’ ಎನ್ನುತ್ತಾರೆ.
“ಕರ್ಮಫಲ ಯಾರನ್ನೂ ಬಿಡುವುದಿಲ್ಲ. ರಾಮಾಯಣದಲ್ಲಿ ಶ್ರೀರಾಮ ತನಗೇನೂ ತೊಂದರೆ ಮಾಡದಿದ್ದರೂ, ವಾಲಿಯನ್ನು ಬಾಣದಿಂದ ಕೊಲ್ಲುತ್ತಾನೆ. ಅದೇ ವಾಲಿ, ದ್ವಾಪರ ಯುಗದಲ್ಲಿ ಬೇಡನಾಗಿ ಬಂದು ಶ್ರೀರಾಮನ ಮತ್ತೂಂದು ಅವತಾರವಾಗಿರುವ ಶ್ರೀಕೃಷ್ಣನ ಹೆಬ್ಬೆರಳಿಗೆ ಬಾಣದಿಂದ ಹೊಡೆದು ಕೊಲ್ಲುತ್ತಾನೆ. ಅವತಾರ ಪುರುಷರಾಗಿರುವ ದೇವರನ್ನೇ ಕರ್ಮಫಲಗಳು ಬಿಡದಿರುವಾಗ, ಇನ್ನು ಮನುಷ್ಯರನ್ನು ಬಿಡಲು ಸಾಧ್ಯವೇ?’ ಎಂಬುದು ಚಿತ್ರತಂಡದ ಪ್ರಶ್ನೆ. “ಇಂಥದ್ದೇ ಪ್ರಶ್ನೆ ಮತ್ತು ಅದಕ್ಕೆ ಉತ್ತರ ಹುಡುಕುವ ಪ್ರಯತ್ನ “ಅಘೋರ’ ಸಿನಿಮಾದಲ್ಲಾಗಿದೆ’ ಎಂಬುದು ಚಿತ್ರತಂಡದ ಮಾತು.
“ಅಘೋರ’ ಚಿತ್ರದಲ್ಲಿ ಅವಿನಾಶ್, ಪುನೀತ್, ಅಶೋಕ್, ದ್ರವ್ಯಾ ಶೆಟ್ಟಿ, ರಚನಾ ದಶರಥ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಮೋಕ್ಷ ಸಿನಿಮಾಸ್’ ಬ್ಯಾನರ್‌ನಲ್ಲಿ ಪುನೀತ್ ಗೌಡ ನಿರ್ಮಿಸಿರುವ “ಅಘೋರ’ ಚಿತ್ರಕ್ಕೆ ಎನ್. ಎಸ್ ಪ್ರಮೋದ್ ರಾಜ್ ನಿರ್ದೇಶನವಿದೆ. ಒಟ್ಟಾರೆ ರಿಲೀಸ್‌ಗೂ ಮೊದಲೇ ಒಂದಷ್ಟು ಕುತೂಹಲ ಮೂಡಿಸಿರುವ “ಅಘೋರ’ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಇದೇ ಮಾರ್ಚ್ 4ಕ್ಕೆ ಗೊತ್ತಾಗಲಿದೆ.