Advertisement
ಮದುವೆಯಾದ ಹೊಸತರಲ್ಲಿ ಎಲ್ಲ ನವದಂಪತಿಯ ಬಾಳಿನಲ್ಲೂ ಮಧುಚಂದ್ರ ಹಾಜರಿ ಹಾಕುವನು. ಆ ಚಂದ್ರನನ್ನು ಹಿಡಿದುಕೊಳ್ಳಲು ಹೊರಡುವುದೇ ಅತ್ಯಂತ ರಸಮಯ ಯಾನ. ಅದಕ್ಕಾಗಿ, ನೆಲೆನಿಂತ ಜಾಗವನ್ನು ಯಾರೂ ಮಧುಚಂದ್ರಕ್ಕೆ ಆರಿಸಿಕೊಳ್ಳುವುದಿಲ್ಲ. ದೂರದ ತಾಣಕ್ಕೋ, ವಿದೇಶಕ್ಕೋ ಸುಂಯ್ಯನೆ ಹಾರಿ, ಅಲ್ಲಿ ಹೂವಾಗಿ, ದುಂಬಿಯಾಗಿ ಸಿಹಿಕ್ಷಣಕ್ಕೆ ಸಾಕ್ಷಿ ಆಗುವುದು ಹನಿಮೂನ್ ಫಿಲಾಸಫಿ. ಲೋಕ ಮರೆತು ಮೂರ್‍ನಾಲ್ಕು ದಿನವೋ, ವಾರವೋ, ಹದಿನೈದು ದಿನವೋ ನೆಮ್ಮದಿಯಿಂದ ಕಳೆದು ಮರಳಿ ಗೂಡು ಸೇರುವಾಗ ದಂಪತಿಯ ಮನಸ್ಸು ಇನ್ನೂ ಆ ಜಾಗದಿಂದ ಈಚೆ ಬಂದಿರೋದಿಲ್ಲ. ಶೃಂಗಾರಭರಿತ ಈ ಚುಟುಕು ಅವಧಿಯ ಸಂತೋಷವೇ ಇಡೀ ಬದುಕಿಗೆ ಒಂದು ಕಿಕ್‌ಸ್ಟಾರ್ಟ್.
Related Articles
Advertisement
ಮೈಸೂರಿನ ಹುಡುಗನ ಕೈಹಿಡಿದ, ದೆಹಲಿ ಮೂಲದ ರುಚಿಕಾ ಏಕೆ ಇಂಥ ನಿರ್ಧಾರ ಕೈಗೊಂಡರು? ಅವರ ಮಾತಲ್ಲೇ ಕೇಳಿಬಿಡಿ…ಇಬ್ಬರಿಗೂ ಪ್ರವಾಸದ ಹುಚ್ಚು… ಆಗತಾನೆ ಅವಿನಾಶ, ನೇಪಾಳದಿಂದ ವಾಪಸಾಗಿದ್ದರು. ಅವರು ಕೆಲಸದ ನಿಮಿತ್ತ ನಾನಾ ದೇಶಗಳಿಗೆ ತಿರುಗುತ್ತಿದ್ದರು. ನಾನು ಆಗ ಮಲೇಷ್ಯಾ ಪ್ರವಾಸಕ್ಕೆ ಸಜ್ಜಾಗಿದ್ದೆ. ಏರ್‌ಪೋರ್ಟ್‌ನಲ್ಲಿ ಭೇಟಿಯಾದೆವು. ಇಬ್ಬರ ಅಭಿರುಚಿ ಒಂದೇ ಎನ್ನುವುದು ಮೊದಲ ಮಾತುಕತೆಯಲ್ಲೇ ಖಾತ್ರಿ ಆಯಿತು. ಇಬ್ಬರ ನಡುವೆ ಪ್ರೀತಿಯಾಗಿ, ಮದುವೆಗೂ ಮುನ್ನವೇ ಒಂದು ಯೋಜನೆ ರೂಪಿಸಿದೆವು. ಆದಷ್ಟು ಹಣವನ್ನು ಉಳಿಸಿ, ಜಗತ್ತು ಸುತ್ತೋಣ ಅಂತ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿದ್ದ ಅವಿನಾಶ, ತುಂಬಾ ಸರಳವಾಗಿ ಬದುಕಲು ನಿರ್ಧರಿಸಿದ್ದರು. ಪಾತ್ರೆ, ಟೇಬಲ್ಲು, ಫ್ರಿಡ್ಜ್, ಸ್ಟೌ, ಮತ್ತೂಂದು ಚಾಪೆ ಇಟ್ಟುಕೊಂಡು ದಿನಕಳೆದರು. ನಾನೂ ದುಡಿದಿದ್ದರಲ್ಲಿ ಅಲ್ಪಸ್ವಲ್ಪ ಹಣವನ್ನು ಉಳಿಸುತ್ತಾ ಹೋದೆ. ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳದೇ, ಕೆಲವೇ ಕೆಲವು ಗೆಳೆಯರಿಗಷ್ಟೇ ಹೇಳಿ, ರಿಜಿಸ್ಟಾರ್ ಆಫೀಸಿನಲ್ಲಿ ಹಾರ ಬದಲಿಸಿಕೊಂಡೆವು. ಎರಡೇ ಎರಡು ಬ್ಯಾಗು..!
ಮನೆಯ ಅಷ್ಟೂ ಸರಕುಗಳನ್ನು ಮಾರಿದ ಮೇಲೆ, ಎರಡೇ ಎರಡು ಬ್ಯಾಗ್‌ನಲ್ಲಿ ಅತ್ಯಗತ್ಯ ವಸ್ತುಗಳನ್ನು ತುಂಬಿದೆವು. ಮನುಷ್ಯನ ಅಗತ್ಯಗಳನ್ನು ಹೀಗೆ ಸೀಮಿತಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಹೆಣ್ಣಿಗೆ ಆಸೆ ಹೆಚ್ಚು ಅಂತಾರೆ. ನೋಡಿದ್ದೆಲ್ಲ ಬೇಕೆನ್ನುವ ಹಪಾಹಪಿ ಆಕೆಗೆ. ಬಟ್ಟೆ ಮೇಲೆ ಅವಳಿಗೆ ಮೋಹ ಜಾಸ್ತಿ ಇರುತ್ತೆ. ಆದರೆ, ನಾನು ಆ ರೀತಿ ಯೋಚಿಸಲು ಹೋಗಲಿಲ್ಲ. ನಮ್ಮಿಬ್ಬರ ನಡುವೆ ಒಂದು ಅಲಿಖಿತ ಒಪ್ಪಂದವೂ ಏರ್ಪಟ್ಟಿತು. ಇಬ್ಬರಲ್ಲಿ ಯಾರೂ, ಯಾವ ವಸ್ತುವನ್ನೂ ಖರೀದಿಸುವಂತಿಲ್ಲ. ಹಾಗೇನಾದರೂ ಖರೀದಿಸಿದರೆ, ಬ್ಯಾಗ್‌ನಲ್ಲಿರುವ ಒಂದು ವಸ್ತುವನ್ನು ನಿರ್ದಾಕ್ಷಿಣ್ಯವಾಗಿ ಆಚೆ ಎಸೆಯಬೇಕು ಅಂತ. ಬಹುಶಃ ಈ ಎರಡು ವರ್ಷದ ನಮ್ಮ ಯಾನದಲ್ಲಿ ನಾಲ್ಕೋ, ಐದೋ ವಸ್ತುಗಳನ್ನಷ್ಟೇ ನಾವು ಖರೀದಿಸಿದ್ದೆವು. ಹೋದಲ್ಲೇ ಊಟ…
ನಾನು ತುಂಬಾ ಫುಡ್ಡೀ. ನಾನ್ ವೆಜ್‌ಪ್ರಿಯೆ. ಆದರೆ, ನನ್ನ ಗಂಡ ಸಸ್ಯಾಹಾರಿ. ಮೊಟ್ಟೆಯನ್ನಷ್ಟೇ ತಿಂತಾರೆ. ಅವರಿಗೆ ಬೇಕೆನಿಸಿದ ಆಹಾರ ಎಲ್ಲ ಕಡೆ ಸಿಗುವುದಿಲ್ಲ. ಯಾವ ತಾಣಕ್ಕೆ ಹೋಗುತ್ತೇವೋ, ಅಲ್ಲಿನ ಸ್ಥಳೀಯ ಆಹಾರಗಳನ್ನೇ ಸೇವಿಸುತ್ತೇವೆ. ಇಲ್ಲಿಯ ತನಕ ನಮಗೆ ಅಂಥ ಆಹಾರದ ಸಮಸ್ಯೆಯೇನೂ ಆಗಲಿಲ್ಲ. ನಾವು ಈವರೆಗೆ ಸುತ್ತಿದ್ದು, ಥೈವಾನ್, ಫಿಲಿಪ್ಪೀನ್ಸ್, ಸಿಂಗಾಪುರ, ವಿಯೆಟ್ನಾಂ, ಥಾಯ್ಲೆಂಡ್, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾದಂಥ ದಕ್ಷಿಣ ಏಷ್ಯಾದ ದೇಶಗಳನ್ನಷ್ಟೇ. ಇಲ್ಲೆಲ್ಲ ಹೆಚ್ಚು ಹಬ್ಬಿರುವುದು ಬೌದ್ಧ ಸಂಸ್ಕೃತಿ. ಸಸ್ಯಾಹಾರಕ್ಕೆ ಕೊರತೆ ಬಿದ್ದಿರಲಿಲ್ಲ. ಮುಂದಿನ ದಿನಗಳಲ್ಲಿ ಬೇರೆ ದೇಶಗಳಿಗೆ ಹೋದಾಗ, ಮೊಟ್ಟೆ, ಬ್ರೆಡ್ ಅಂತೂ ಸಿಕ್ಕೇ ಸಿಗುತ್ತೆ ಎನ್ನುವ ವಿಶ್ವಾಸ ನನ್ನ ಗಂಡನಿಗಿದೆ. ವಿಯೆಟ್ನಾಂನಲ್ಲಿ ಮೂನ್ ಫೆಸ್ಟಿವಲ್ ಅಂತ ಆಗುತ್ತೆ. ಹುಣ್ಣಿಮೆ ದಿನ ನಡೆಯೋದು. ಅವತ್ತು ತಯಾರಿಸುವ ಮೂನ್ ಕೇಕ್ ಅಲ್ಲಿ ಹೆಚ್ಚು ಜನಪ್ರಿಯ. ನಾವೂ ತಿಂದೆವು. ಆದರೆ, ಇಷ್ಟ ಆಗಲಿಲ್ಲ.
ನನಗೆ ಹೆಚ್ಚು ಖುಷಿ ಕೊಟ್ಟ, ಸ್ಫೂರ್ತಿ ತುಂಬಿದ ದೇಶ ವಿಯೆಟ್ನಾಂ. ಅಲ್ಲಿ ಮೂರು ತಿಂಗಳು ಒಬ್ಬರ ಮನೆಯಲ್ಲೇ ಉಳಿದಿದ್ದೆವು. ಆ ದೇಶ ಬಹಳ ವಿಶಿಷ್ಟ. ಅಲ್ಲಿ ಎಲ್ಲ ವ್ಯವಹಾರಗಳನ್ನೂ ನೋಡಿಕೊಳ್ಳೋದು ಹೆಂಗಸರೇ. ಹಾಗಾದರೆ, ಗಂಡಸರು ಏನ್ಮಾಡ್ತಾರೆ ಅಂತ ನೀವು ಕೇಳಬಹುದು. ಅವರು ಶುದ್ಧ ಸೋಮಾರಿಗಳು. ದಿನಾಪೂರಾ ಬಿಯರ್ ಕುಡಿಯುತ್ತಾ, ಹರಟೆ ಹೊಡೀತಾರೆ. ಅಲ್ಲಿ ಸಂಸಾರದ ನಿರ್ಧಾರಗಳನ್ನು ತೆಗೆದುಕೊಳ್ಳೋದೂ ಹೆಂಗಸರೇ. ಒಂದು ಕಡೆ ಬೋಟಿಂಗ್‌ಗೆ ಹೋಗಿದ್ದೆವು. ಒಬ್ಬ ಗಂಡಸು ನಮ್ಮನ್ನು ದೋಣಿ ಬಳಿ ಕರಕೊಂಡು ಹೋದ. ಬಹುಶಃ ಅವನೇ ದೋಣಿ ನಡೆಸ್ತಾನೆ ಅಂತ ಅಂದ್ಕೊಡಿದ್ದೆವು. ಆದರೆ, ಅವನು ಬಿಯರ್ ಹೀರುತ್ತಾ, ದೋಣಿಯಲ್ಲಿ ಕುಳಿತ. ಅಲ್ಲಿದ್ದ ಹೆಂಗಸರು ಹುಟ್ಟನ್ನು ಹಾಕಿದರು! ನಾವೂ ಜಗಳ ಆಡ್ತೀವಿ, ಆದರೆ…
ದಾಂಪತ್ಯ ಅಂದಮೇಲೆ ಸಣ್ಣಪುಟ್ಟ ಮುನಿಸು, ಮನಃಸ್ತಾಪಗಳು ಇದ್ದಿದ್ದೇ. ನಾನೂ ಕೆಲವೊಮ್ಮೆ ಸಿಟ್ಟಾಗ್ತಿನಿ. ಆದರೇನು ಪ್ರಯೋಜನ? ಮನೆಯಲ್ಲಾದರೆ, ಮುಖ ಊದಿಸಿಕೊಂಡು ರೂಮ್‌ನಲ್ಲಿ ಕೂತ್ಕೊಬಹುದು. ಬೇಸರ ಆದಾಗ ತವರಿಗೆ ಹೋಗಬಹುದಿತ್ತು. ಇಲ್ಲಿ ಅಂಥ ಅವಕಾಶ ಇರೋದಿಲ್ಲ! ನಮಗೆ ನಾವೇ ಆಸರೆ. ಹೆಚ್ಚೆಂದರೆ, ನಾನು ಲಗ್ಗೇಜನ್ನು ಹೊರದೇ, ಮುನಿಸಿಕೊಂಡು, ಮುಂದೆ ಹೋಗಬಹುದು. ಪಾಪ, ಗಂಡ ಎರಡೂ ಬ್ಯಾಗ್ ಅನ್ನು ಹೊತ್ಕೊಂಡು, ನನ್ನ ಹಿಂದೆಯೇ ಬರುತ್ತಾನೆ. ಇದೆಲ್ಲವೂ ಮಾಮೂಲಿ.
ರಾತ್ರಿ 8 ಗಂಟೆ ಆಯ್ತಾ? ಎಲ್ಲ ಹೆಣ್ಮಕ್ಕಳೂ ಟಿವಿ ಮುಂದೆ ಕುಳಿತು ಧಾರಾವಾಹಿ ನೋಡ್ತಾರೆ. ಇದು ನಾವು ನೋಡಿದ ಎಲ್ಲ ದೇಶಗಳ ಕತೆ. ಅದರಲ್ಲೂ ವಿಯೆಟ್ನಾಂನಲ್ಲಿ “ಬಾಲಿಕಾ ವಧು’ ಧಾರಾವಾಹಿಗಾಗಿ ಕಾದು ಕುಳಿತಿರುತ್ತಿದ್ದರು. ಬಾಲಿಕಾವಧುವನ್ನು ವಿಯೆಟ್ನಾಮೀಸ್ ಭಾಷೆಗೆ ಡಬ್ ಮಾಡಲಾಗಿತ್ತು. ಅಲ್ಲಿ ಕೆಲವರು ನನಗೇ “ಬಾಲಿಕಾವಧು’ ಎಂದು ಅಡ್ಡಹೆಸರು ಹಿಡಿದು ಕರೆಯುತ್ತಿದ್ದರು.
ವಾಪಸು ಬಂದೆವು….
ನಮ್ಮ ಪ್ರವಾಸ ಈಗ ಇದ್ದಿದ್ದು ಮಲೇಷ್ಯಾದಲ್ಲಿ. ಅಲ್ಲಿ ನಮ್ಮಿಬ್ಬರ ಪರ್ಸ್ ಕಳೆದುಹೋಯ್ತು. ಅದರಲ್ಲಿ ಬ್ಯಾಂಕ್ ಕಾರ್ಡ್ಸ್ಗಳೆಲ್ಲ ಇದ್ದವು. ಅಲ್ಲಿನ ಕೆಫೆಯ ಮಾಲೀಕ ನಮಗೆ ನೆರವಾದ. ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟು, ಸಿಸಿಟಿವಿ ಫೂಟೇಜ್ ನೋಡಿ, ಸಾಕಷ್ಟು ತನಿಖೆ ಮಾಡಿದರೂ, ಕದ್ದ ವ್ಯಕ್ತಿಯ ಸುಳಿವು ಸಿಗಲಿಲ್ಲ. ಕೊನೆಗೆ ಅವಿನಾಶ್, ಅಮೆರಿಕದಲ್ಲಿದ್ದ ಗೆಳೆಯನಿಗೆ ಸ್ವಲ್ಪ ಹಣ ಕಳಿಸಲು ಹೇಳಿ, ಈಗ ಭಾರತಕ್ಕೆ ವಾಪಸು ಬಂದು, ಮೈಸೂರಿನಲ್ಲಿದ್ದೇವೆ. ಮತ್ತೆ ಎಲ್ಲ ಕಾರ್ಡ್‌ಗಳನ್ನು ಮಾಡಿಸಿಕೊಂಡು ಮಧುಚಂದ್ರ ಪ್ರವಾಸ ಮುಂದುವರಿಸುತ್ತೇವೆ. ಇವರ ಬದುಕು ನಡೆಯೋದು ಹೇಗೆ?
– ರುಚಿಕಾ ಟೂರಿಸಂ, ಫುಡ್ ಬ್ಲಾಗ್‌ಗಳಿಗೆ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡ್ತಾರೆ. ಭೇಟಿ ನೀಡಿದ ತಾಣಗಳ ಬಗ್ಗೆ ವಿಡಿಯೋ, ಲೇಖನಗಳನ್ನು ಕಳಿಸಿ, ದುಡಿಯುತ್ತಾರೆ.
– ಪತಿ ಅವಿನಾಶ ಶಾಸ್ತ್ರಿ, ಸಾಫ್ಟ್ವೇರ್ ಪ್ರೋಗ್ರಾಮರ್. ಆನ್‌ಲೈನ್ ಸಂಪರ್ಕವಿದ್ದರೆ, ಎಲ್ಲೇ ಇದ್ದರೂ ದುಡಿಯಬಲ್ಲರು. ಮಧುಚಂದ್ರದ ಹಾದಿ…
ತೈವಾನ್, ಫಿಲಿಪ್ಪೀನ್ಸ್, ಸಿಂಗಾಪುರ, ವಿಯೆಟ್ನಾಂ, ಥಾಯ್ಲೆಂಡ್, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾ… 2016ರಲ್ಲಿ ಹನಿಮೂನ್‌ಗೆ ಹೊರಟೆವು. ನಮ್ಮ ಮಧುಚಂದ್ರ ಪ್ರವಾಸ ಯಾವಾಗ ಮುಗಿಯುತ್ತೆ? ಎಲ್ಲಿ ನಮ್ಮ ಸಂಸಾರ ನೆಲೆ ನಿಲ್ಲುತ್ತೆ? ಈ ಪ್ರಶ್ನೆಗೆ ನಮ್ಮ ಬಳಿಯೇ ಉತ್ತರವಿಲ್ಲ. ನಾವು ಹೀಗೆ ಜೋಡಿಹಕ್ಕಿಯಂತೆ ಸಾಗುತ್ತಲೇ ಇರುತ್ತೇವೆ.
– ರುಚಿಕಾ ಅವಿನಾಶ್ ಕೀರ್ತಿ ಕೊಲ್ಗಾರ್