ಸಂಬರಗಿ: ಗಡಿ ಭಾಗದಲ್ಲಿ ತೀವ್ರ ಬರಗಾಲ ಎದುರಾಗಿರುವದರಿಂದ ಅನಂತಪುರ ಗ್ರಾಮದಲ್ಲಿ ಜನರು ನಿತ್ಯ ನೀರಿಗಾಗಿ ಶುದ್ಧ ಘಟಕಗಳ ಮುಂದೆ ನಾ ಮುಂದೆ ತಾ ಮೂಂದೆ ಸಾಲು ಸಾಲು ಕೊಡಗಳನ್ನಿಟ್ಟು ನೀರು ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ನೀರಿನ ಸಮಸ್ಯೆ ಹೋಗಲಾಡಿಸಲು 7 ಕೊಳವೆಬಾವಿ ಹೊಸದಾಗಿ ಕೊರೆಸಲಾಗಿದ್ದರೂ ನಿತ್ಯ ಜನರು ಬಿಸಿಲಲ್ಲೇ ಸಾಲುಗಟ್ಟಲೇ ನಿಂತು ನೀರು ಪಡೆಯುತ್ತಿದ್ದಾರೆ. ತೋಟದ ವಸತಿಗಳಲ್ಲಿ ಕೊಳವೆಬಾವಿಗಳು ಬಿಸಿಲಿನ ಹೊಡೆತಕ್ಕೆ ಸಂಪೂರ್ಣ ಬತ್ತಿ ಹೋಗಿದ್ದು, ಜನ-ಜಾನುವಾರುಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋಟದ ವಸತಿಗಳಿಗೆ ತಾಲೂಕಾ ಆಡಳಿತ ವತಿಯಿಂದ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿದ್ದು, ಇದು ಸಂಪೂರ್ಣವಾಗಿ ನೀರು ಪೂರೈಕೆಯಾಗುತ್ತಿಲ್ಲ. ಶೀಘ್ರವೇ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಹೊಸದಾಗಿ 7 ಕೊಳವೆಬಾವಿ ಕೊರೆಸಲಾಗಿದ್ದು, ಆ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಜೋಡಿಸಲಾಗಿದೆ. ಒಂದು ವೇಳೆ ವಿದ್ಯುತ್ ಸಮಸ್ಯೆ ಎದುರಾದರೆ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಹಿಸಲಾಗುವುದು.
•ಗುಂಡು ಮಿರಜಕರ ಪಿಡಿಒ
Advertisement
ಇಲ್ಲಿರುವ ಸಮಸ್ಯೆ ಹೋಗಲಾಡಿಸಲು ತಾಲೂಕು ಆಡಳಿತ ಗ್ರಾಮದಲ್ಲಿ 7 ಕೊಳವೆಬಾವಿ ಕೊರೆಯಿಸಿ ಗ್ರಾಮದ ನೀರಿನ ಸಮಸ್ಯೆ ಹೋಗಲಾಡಿಸಲು ಮುಂದಾಗಿದೆ. ಆದರೆ ವಿದ್ಯುತ್ ಸಮಸ್ಯೆಯಿಂದ ಸಮರ್ಪಕ ನೀರು ಸಿಗದೇ ಪರದಾಡುವಂತಾಗಿದೆ. ಅನಂತಪುರ ಗ್ರಾಪಂ ವ್ಯಾಪ್ತಿಯಲ್ಲಿ ಚಂದ್ರಪ್ಪವಾಡಿ ಹಾಗೂ ಅನಂತಪುರ ಗ್ರಾಮಗಳು ಬರುತ್ತಿದ್ದು, ಅನಂತಪುರ ಗ್ರಾಮ 10 ಸಾವಿರ ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ 3 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಕುಡಿಯುವ ನೀರಿಗಾಗಿ ನಿತ್ಯ ಸರ್ಕಸ್ ಮಾಡುವ ಸ್ಥಿತಿ ಎದುರಾಗಿದೆ.
•ಗುಂಡು ಮಿರಜಕರ ಪಿಡಿಒ