Advertisement
ಮನೆಯ ಕೀಲಿಕೈಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಸ್ತಾಂತರ ಮಾಡುತ್ತಿದ್ದಂತೆ, ಶಾಸಕ ರಾಮ್‌ವೃಕ್ಷ್ ಭಾವುಕರಾಗಿದ್ದು, “ನಾನಿದನ್ನು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ’ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲೌಲಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ರಾಮ್‌ವೃಕ್ಷ್ ಅವರು ಈವರೆಗೆ ತಮ್ಮ ಗ್ರಾಮವಾದ ರೌನ್‌ನಲ್ಲಿ 2004ರಲ್ಲಿ ಇಂದಿರಾ ಆವಾಸ ಯೋಜನೆಯಡಿ ನಿರ್ಮಿಸಲಾಗಿದ್ದ 2 ಕೊಠಡಿಯಿರುವ ಪುಟ್ಟ ಮನೆಯಲ್ಲಿ ವಾಸವಿದ್ದರು. ವಿಶೇಷವೆಂದರೆ, ಅವರದ್ದು ಅವಿಭಕ್ತ ಕುಟುಂಬವಾಗಿದ್ದ ಕಾರಣ, ಇಷ್ಟು ಚಿಕ್ಕ ಮನೆಯಲ್ಲಿ 12 ಮಂದಿ ನೆಲೆಸಿದ್ದರು. ಪರಿಶಿಷ್ಟ ಜಾತಿಗೆ ಸೇರಿರುವ ರಾಮ್‌ವೃಕ್ಷ್ ಅವರಿಗೆ ಈಗ ಸರ್ಕಾರವು ಪಾಟ್ನಾದ ಬೀರ್ ಚಾಂದ್ ಪಟೇಲ್ ಪಥದಲ್ಲಿ ಮೂರು ಮಹಡಿಯ ದೊಡ್ಡ ಮನೆಯನ್ನು ಹಂಚಿಕೆ ಮಾಡಿದೆ. ಒಟ್ಟು 8 ಶಾಸಕರಿಗೆ ಈ ರೀತಿ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಆ ಪೈಕಿ ರಾಮ್‌ವೃಕ್ಷ್ ಕೂಡ ಒಬ್ಬರು. “ಲಾಲು ಪ್ರಸಾದ್ ಯಾದವ್ ಅವರು ನನ್ನನ್ನು ನಾಯಕನ್ನಾಗಿ ಮತ್ತು ಶಾಸಕನನ್ನಾಗಿ ಮಾಡಿದರು. ನಾನು ಬಿಹಾರದ ಬಡ ಶಾಸಕ. ಬಡವನಿಗೆ ಏನು ಸಿಕ್ಕಿದರೂ ಅವನಿಗೆ ಅದುವೇ ದೀಪಾವಳಿ. ಇವತ್ತು ಸಿಎಂ ನಿತೀಶ್ ಕುಮಾರ್ ಅವರು ಮನೆಯ ಬೀಗದ ಕೀಯನ್ನು ನನಗೆ ಕೊಟ್ಟಿದ್ದಾರೆ. ಇಂಥ ಮನೆಯಲ್ಲಿ ವಾಸವಿರುತ್ತೇನೆ ಎಂದು ನಾನೆಂದೂ ಭಾವಿಸಿರಲಿಲ್ಲ’ ಎಂದಿದ್ದಾರೆ ರಾಮ್‌ವೃಕ್ಷ್.