Advertisement

‘ನಾನು ಮಾಡಿದ ತಪ್ಪುಗಳನ್ನು ಎಂದೂ ಮಾಡಬೇಡಿ’

11:00 AM May 02, 2018 | |

ಉಪ್ಪಿನಂಗಡಿ: ಶೋಕಿಗಾಗಿ ಬೈಕ್‌ ಕದ್ದೆ; ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಪಾಲಾದೆ. ಅಲ್ಲಿ ಕೊಲೆ ಆರೋಪಿ ಉಮೇಶನ ಪರಿಚಯವಾಯಿತು. ಕಳ್ಳತನದ ಹೊಸ ಆವಿಷ್ಕಾರಗಳನ್ನು ಹಂಚಿಕೊಂಡೆವು. ಪರಿಣಾಮ ತನಗೆ 24 ವರ್ಷ ತುಂಬುವುದರೊಳಗೆ 28 ಕಳ್ಳತನ ನಡೆಸಿದೆ! 

Advertisement

ಇದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ತುಮಕೂರು ಬಿ. ಗೊಲ್ಲಹಳ್ಳಿ ನಿವಾಸಿ ನವೀನ್‌ ಕುಮಾರ್‌ ಜಿ. ಎಸ್‌. ಮಾತು. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಶಿಶಿಲದ ದೇವಾಲಯ ಹಾಗೂ ನೆಲ್ಯಾಡಿಯ ಚರ್ಚ್‌ಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ನವೀನ್‌ನನ್ನು ಮಾಧ್ಯಮದವರು ಮಾತನಾಡಿಸಿದಾಗ ತಿಳಿದು ಬಂದು ವಿಷಯವಿದು.

ತಂದೆ, ತಾಯಿ, ಓರ್ವ ತಂಗಿಯಿರುವ ಚಿಕ್ಕ ಕುಟುಂಬದ ಏಕೈಕ ಮಗ ತಾನು. ದ್ವಿತೀಯ ಪಿಯುಸಿ ಮುಗಿಸಿ 7 ವರ್ಷ ಕಿಶನ್‌ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿದ್ದೆ. ಆಗ ಬೈಕ್‌ ಸವಾರಿ ಮಾಡುತ್ತಾ ಶೋಕಿ ಜೀವನ ನಡೆಸುವ ಆಸೆ ಮೂಡಿತು. ಬೈಕ್‌ ಕದಿಯಲು ಮುಂದಾದೆ. ಕದ್ದ ಬೈಕ್‌ಗಳ ಸಂಖ್ಯೆ 8ಕ್ಕೇರುತ್ತಲೇ ಬಂಧನಕ್ಕೊಳಗಾದೆ. ಜೈಲಿನಲ್ಲಿ ಕೊಲೆ ಆರೋಪಿ ಉಮೇಶ್‌ನ ಪರಿಚಯವಾಗಿ ಕಳವಿನ ಹೊಸ ವಿಷಯಗಳನ್ನು ತಿಳಿದುಕೊಂಡೆ.

ಗೂಗಲ್‌ನಲ್ಲಿ ಹಲವು ದೇವಾಲಯ, ಚರ್ಚ್‌ಗಳ ಮಾಹಿತಿ ಪಡೆದುಕೊಂಡೆ. ಭಕ್ತರ ಸೋಗಿನಲ್ಲಿ ದೇವಾಲಯಕ್ಕೆ ಭೇಟಿ ನೀಡಿ, ಅರ್ಚಕರೊಂದಿಗೆ ಮಾತನಾಡುತ್ತಾ ದೇಗುಲದ ಮಾಹಿತಿ ಪಡೆದುಕೊಂಡು ಅದೇ ರಾತ್ರಿ ದೇವಾಲಯಕ್ಕೆ ನುಗ್ಗಿ ಸಿಕ್ಕಿದ್ದನ್ನು ದೋಚುತ್ತಿದೆವು.

ಖುಷಿಯಾಗುತ್ತಿತ್ತು
ಕದ್ದ ವಸ್ತುಗಳನ್ನು ಮಾರಲು ಹೋದರೆ ಮೂಲ ಬೆಲೆಯ ಕಾಲಂಶವನ್ನು ಮಾತ್ರ ನೀಡುತ್ತಿದ್ದರು. ನಾವು ಪೊಲೀಸರಿಗೆ ಸಿಕ್ಕಿ ಬಿದ್ದ ಬಳಿಕ ಅವರು ಸೊತ್ತು ಸ್ವಾಧೀನ ಮಾಡಲು ಅಂತಹ ಅಂಗಡಿಗೆ ಹೋಗಿ ಸೊತ್ತು ಮರು ಸ್ವಾಧೀನ ಮಾಡಿದಾಗ ನಮಗೆ ಖುಷಿಯಾಗುತ್ತಿತ್ತು.

Advertisement

ಈಗ ಪಶ್ಚಾತ್ತಾಪವಾಗುತ್ತಿದೆ
ದುಡಿದು ಸಾಧನೆ ಮಾಡೋ ವಯಸ್ಸು ನನ್ನದು. ಆದರೆ ದುಡಿಮೆ ಬಿಟ್ಟು ಕದಿಯೋಕೆ ಮುಂದಾದೆ. ಕದಿಯುವಾಗ ತಪ್ಪೆಂದು ಅನಿಸುತ್ತಿರಲಿಲ್ಲ. ಈಗ ನನ್ನಿಂದ 28 ಕಳವು ನಡೆದಿದ್ದು, ಪಶ್ಚಾತ್ತಾಪವಾಗುತ್ತಿದೆ. ನನ್ನ ಮೇಲೆ ಭರವಸೆ ಇರಿಸಿದ್ದ ಹೆತ್ತವರ ನೋವಿಗೆ ಕಾರಣನಾದೆ ಎಂಬ ನೋವು ಕಾಡುತ್ತಿದೆ. ಪ್ರಾಯಶಃ ಅಂದು ಜೈಲಿಗೆ ಹೋಗದೆ ಹಾಗೂ ಉಮೇಶನ ಸಂಪರ್ಕವಾಗದಿರುತ್ತಿದ್ದರೆ ನಾನಿಂದು ಈ ಮಟ್ಟಕ್ಕೇರುತ್ತಿರಲಿಲ್ಲ ಎನಿಸುತ್ತಿದೆ. ನನ್ನ ಬದುಕು ಯಾರಿಗಾದರೂ ಪಾಠವಾಗುವುದಾದರೆ ಪತ್ರಿಕೆಯಲ್ಲಿ ಪ್ರಕಟಿಸಿ. ನನ್ನಂತೆ ಇನ್ಯಾರೂ ಹೀಗೆ ಬದುಕು ಕುಲಗೆಡಿಸಬಾರದು ಎನ್ನುತ್ತಾನೆ.

ಜೈಲಿನ ಬದುಕು ವ್ಯಕ್ತಿಯ ಬದುಕನ್ನು ಪರಿವರ್ತನೆಗೆ ಒಳಪಡಿಸುವ ಬದಲು ಅಪರಾಧ ಕೃತ್ಯವನ್ನು ಮತ್ತಷ್ಟು ಹೆಚ್ಚಿಸುವ ಪ್ರೋತ್ಸಾಹಿಸುತ್ತದೆ. ಇಂಥ ಸ್ಥಿತಿ ಬದಲಾಗಬೇಕು. ಜೈಲಿನಲ್ಲಿ ಅಪರಾಧಿಗಳನ್ನು ತಿದ್ದುವ ಕೆಲಸ ಆಗಬೇಕು. ಅಲ್ಲಿ ಮನಪರಿವರ್ತನೆಗೆ ಹೆಚ್ಚಿನ ಅವಕಾಶ ಲಭಿಸಬೇಕು ಎಂದು 24ರ ಹರೆಯದ ನವೀನ್‌ ಕುಮಾರ್‌ ಹೇಳುತ್ತಿದ್ದಾನೆ. ದುಡಿದು ಒಂದು ಸುಂದರ ಬದುಕು ಕಟ್ಟಬೇಕು ಎಂದು ಭಾವಿಸಿದ್ದ ನವೀನ್‌ ನನ್ನು ಶೋಕಿ ಜೀವನದ ಹುಚ್ಚು ಮತ್ತು ಜೈಲುವಾಸ ಯಾವ ದಾರಿಗೆ ಕೊಂಡೊಯ್ದಿದೆ ಎಂಬುದಕ್ಕೆ ಈ ಪ್ರಕರಣ ಉತ್ತಮ ಸಾಕ್ಷಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next