ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದ ನಾಡ ಕಚೇರಿಯಲ್ಲಿ ಒಂದು ತಿಂಗಳಿನಿಂದ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಜನರು ಕೆಲಸ, ಕಾರ್ಯಗಳಿಗಾಗಿ ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ.
ಸುತ್ತಲಿನ ಹಲವು ಗ್ರಾಮಗಳ ಗ್ರಾಮಸ್ಥರು ಸರ್ಕಾರದ ವಿವಿಧ ಸೌಲಭ್ಯ ಪಡೆಯಲು, ಅರ್ಜಿಗೆ ದಾಖಲಾತಿಗಳನ್ನು ಪಡೆಯಲು ಗಬ್ಬೂರು ನಾಡಕಚೇರಿಯನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿ ಪದೇಪದೆ ನೆಟ್ವರ್ಕ್ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸಕಾಲದಲ್ಲಿ ಆಗುತ್ತಿಲ್ಲ. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಪಹಣಿ, ಜಾತಿ, ಆದಾಯ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿ ಇತರೆ ಕೆಲಸಗಳು ಬಂದಾಗಿವೆ. ಹೀಗಾಗಿ ಸುತ್ತಲಿನ ಸುಮಾರು 41 ಹಳ್ಳಿಗಳ ಜನ ದೇವದುರ್ಗಕ್ಕೆ ತೆರಳುವಂತಾಗಿದೆ. ಇಲ್ಲಿನ ಸಮಸ್ಯೆ ಕುರಿತು ತಾಲೂಕು ಆಡಳಿತ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಹೇಳುತ್ತಾರೆ, ಆದರೆ ಸಮಸ್ಯೆಗೆ ಮುಕ್ತಿ ಇಲ್ಲದಾಗಿದೆ.
ಹಳೆ ಕಟ್ಟಡದಲ್ಲಿ ಕೆಲಸ: ಗಬ್ಬೂರು ನಾಡಕಚೇರಿ ಕಟ್ಟಡ ಹಳೆಯದಾಗಿದ್ದು, ಸಿಮೆಂಟ್ ಉದುರಿ ಬೀಳುತ್ತಿದೆ. ಈ ಹಿಂದೆ ಕಚೇರಿ ಸಿಬ್ಬಂದಿ ಮೇಲೆ ಛತ್ತು ಬಿದ್ದು ಗಾಯಗೊಂಡ ಘಟನೆ ನಡೆದಿವೆ. ಕಟ್ಟಡ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ಕಟ್ಟಡ ಸಂಪೂರ್ಣ ಸೋರುತ್ತದೆ. ಈ ವೇಳೆ ಸಿಬ್ಬಂದಿ ದಾಖಲೆಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಆದರೂ ತಾಲೂಕು ಆಡಳಿತ ಕಟ್ಟಡ ದುರಸ್ತಿಗೆ ಇಲ್ಲವೇ ಕಚೇರಿ ಸ್ಥಳಾಂತರಕ್ಕೆ ಮುಂದಾಗಿಲ್ಲ. ಸಿಬ್ಬಂದಿ ಭಯದಲ್ಲೇ ಕರ್ತವ್ಯ ನಿರ್ವಹಿಸುವಂತಾಗಿದೆ.
ಬಿಲ್ ವಿಳಂಬ: ನಾಡಕಚೇರಿ ಬಿಎಸ್ಸೆನ್ನೆಲ್ ಬಿಲ್ ಪಾವತಿಸದಿರುವುದರಿಂದ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿದ್ದು, ಇದರಿಂದಾಗಿ ನೆಟ್ವರ್ಕ್ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ವಿವಿಧ ದಾಖಲಾತಿಗಳು ಪಡೆಯಲು ಅರ್ಜಿದಾರರು ನೀಡಿದ ಹಣ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಕಾಡುತ್ತಿದೆ. ಕೂಡಲೇ ತಾಲೂಕು ಆಡಳಿತ ನೆಟ್ವರ್ಕ್ ಸಮಸ್ಯೆ ಪರಿಹರಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ದಲಿತ ಮುಖಂಡ ಶಾಂತಕುಮಾರ ಹೊನ್ನಟಗಿ ಆಗ್ರಹಿಸಿದ್ದಾರೆ.
ಗಬ್ಬೂರು ನಾಡಕಚೇರಿಯಲ್ಲಿ ನೆಟ್ವರ್ಕ ಸಮಸ್ಯೆ ಎದುರಾಗಿದ್ದು ಗಮನಕ್ಕೆ ಬಂದಿದೆ. ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ ಜನಸಾಮಾನ್ಯರಿಗೆ ತೊಂದರೆ ಆಗಿದೆ. ಸರಿಪಡಿಸುವ ಕೆಲಸ ಮಾಡಲಾಗುತ್ತದೆ.
••ಮಲ್ಲಿಕಾರ್ಜನ ಅರಕೇರಿ,
ತಹಶೀಲ್ದಾರ್