ವರದಿ: ಭೈರೋಬಾ ಕಾಂಬಳೆ
ಬೆಳಗಾವಿ: ಕೊರೊನಾ ಮಹಾಮಾರಿಯಿಂದಾಗಿ ಈ ವರ್ಷವೂ ಶಿಕ್ಷಣ ವ್ಯವಸ್ಥೆ ಬುಡಮೇಲು ಆಗುವ ಸ್ಥಿತಿಯಲ್ಲಿದ್ದು, ಆನ್‌ಲೈನ್ ಶಿಕ್ಷಣಕ್ಕೆ ಜೋತು ಬಿದ್ದ ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಎಲ್‌ಕೆಜಿ, ಯುಕೆಜಿಗೂ ಆನ್ ಲೈನ್ ಶಿಕ್ಷಣವೇ ಎಂಬ ಮಾತು ಪ್ರಚಲಿತದಲ್ಲಿ ಇರುವಾಗಲೇ ವಿದ್ಯಾರ್ಥಿಗಳು ಆಫ್‌ಲೈನ್ ಶಿಕ್ಷಣ ಮರೆತು ಆನ್‌ಲೈನ್‌ನತ್ತ ಮನಸ್ಸು ಮಾಡುತ್ತಿದ್ದು, ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ಸಂಪರ್ಕ ಸಾಧ್ಯವಾಗದೇ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಇನ್ನೇನೂ ಕೆಲವು ದಿನಗಳಲ್ಲಿ ಆನ್‌ಲೈನ್ ಶಿಕ್ಷಣ ಆರಂಭಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈಗಾಗಲೇ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಆನ್ ಲೈನ್ ಮೂಲಕವೇ ಪಾಠ ಕಲಿಯುತ್ತಿದ್ದರೂ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳ ಬಳಿ ಸ್ಮಾರ್ಟ್´ಫೋನ್ ಇದ್ದರೂ ಡಾಟಾ ಸಮಸ್ಯೆ ಕಾಡುತ್ತಿದೆ. ಕೆಲವೊಂದು ಕಡೆಗಳಲ್ಲಿ ಸರಿಯಾದ ನೆಟ್‌ವರ್ಕ್ ಬರುವುದಿಲ್ಲ. ಇನ್ನೂ ಕೆಲವು ಕಡೆಗೆ ಸರ್ವರ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಇದು ಸಾಕಪ್ಪ ಸಾಕು ಎನ್ನುವ ಸ್ಥಿತಿಯೂ ಇದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಕಡೆಗೆ ಬಹುತೇಕ ಸ್ಮಾರ್ಟ್ ´ಫೋನ್ ಗಳೇ ಇವೆ. ಆದರೆ ಅಂದುಕೊಂಡಷ್ಟು ವಿದ್ಯಾರ್ಥಿಗಳು ಆನ್‌ಲೈನ್ ಪಾಠ ಕೇಳುತ್ತಿಲ್ಲ. ಶೇ. 40ರಷ್ಟು ಹಾಜರಾದರೆ ಅಧಿಕವಾಯ್ತು ಎನ್ನುವಷ್ಟರ ಮಟ್ಟಿಗೆ ಹಾಜರಿ ಪ್ರಮಾಣ ತಲುಪಿದೆ. ಪದವಿ ವಿದ್ಯಾರ್ಥಿಗಳು ಇಂಟರ್‌ನೆಟ್ ಮೂಲಕ ಪಠ್ಯಗಳನ್ನು ಸಂಗ್ರಹಿಸಿ ಕಲಿಯುತ್ತಿದ್ದಾರೆ.
ಇನ್ನೂ ಕೆಲವು ವಿದ್ಯಾರ್ಥಿಗಳು ಅಧ್ಯಾಪಕರಿಗೆ ನೇರವಾಗಿ ಕರೆ ಮಾಡಿ ಪಠ್ಯ ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ವ್ಯವಸ್ಥೆ ಇತ್ತು. ಶಿಕ್ಷಕರು ವಿದ್ಯಾರ್ಥಿಗಳ ಸಂಪರ್ಕಕ್ಕೆ ಬರುತ್ತಿದ್ದಾರೆ ಎಂಬ ಕಾರಣದಿಂದ ಕೊರೊನಾ ನಿಯಂತ್ರಣಕ್ಕಾಗಿ ವಿದ್ಯಾಗಮ ಸ್ಥಗಿತಗೊಳಿಸಲಾಯಿತು. ಈಗ ಆನ್ ಲೆ„ನ್ ಮೂಲಕ ಪಾಠ ಆರಂಭಿಸಲು ಸಿದ್ಧತೆ ನಡೆದಿದೆ. ಅಷ್ಟೊಂದು ನೇರವಾಗಿ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ತಲುಪುವುದು ಕಷ್ಟಕರವಾಗಿದೆ.