Advertisement

ಪಟ್ಟಣದ ಪಕ್ಕದಲ್ಲಿದ್ದರೂ ಹಲೋ ಎನ್ನಲು ನೆಟ್‌ವರ್ಕ್‌ ಸಮಸ್ಯೆ

07:13 PM Aug 07, 2021 | Team Udayavani |

ಅದು ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಊರು. ಅಲ್ಲಿಂದ ಪುತ್ತೂರು ಪಟ್ಟಣಕ್ಕೆ ಇರುವ ದೂರ ಕೇವಲ 6 ಕಿ.ಮೀ. ಆದರೂ ಇಲ್ಲಿ ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನಾವು ಇಂದು “ಒಂದು ಊರು, ಹಲವು ದೂರು’ ಸರಣಿಯಲ್ಲಿ ಹೇಳ ಹೊರಟಿರುವುದು ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿನ ನೆಟ್‌ವರ್ಕ್‌ ಸಮಸ್ಯೆಯ ಬಗ್ಗೆ..

Advertisement

ಪುತ್ತೂರು:  ಜಿಲ್ಲಾ ಕೇಂದ್ರವಾಗುವ ಪುತ್ತೂರು ಪಟ್ಟಣದಿಂದ ಆರು ಕಿ.ಮೀ. ದೂರದಲ್ಲಿರುವ, ಭವಿಷ್ಯದಲ್ಲಿ ನಗರವಾಗಿ ಬೆಳೆಯಲು ಸಾಕಷ್ಟು ಅವಕಾಶ ಹೊಂದಿರುವ ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ದಿನಾಲು ನೆಟ್‌ವರ್ಕ್‌ ಕೈ ಕೊಡುತ್ತಿರುವುದೇ ದೊಡ್ಡ ಸವಾಲು.

ಮುಗಿಲೆತ್ತರದ ಎರಡು ಟವರ್‌ಗಳಿದ್ದರೂ ಅವು ಸಿಗ್ನಲ್‌ ನೀಡುವಲ್ಲಿ ವಿಫಲವಾಗುತ್ತಿದ್ದು ಹಲೋ ಎನ್ನಲಾಗದ ಸ್ಥಿತಿ ಇಲ್ಲಿನದು. ವಿದ್ಯಾರ್ಥಿಗಳಿಂದ ತೊಡಗಿ ಆನ್‌ಲೈನ್‌ ಆಧಾರಿತ ಕೆಲಸ ಕಾರ್ಯಗಳಿಗೆ ಇಲ್ಲಿ ನಿತ್ಯವು ಪರದಾಟ ತಪ್ಪುತ್ತಿಲ್ಲ. ಹೀಗಾಗಿ ಪೇಟೆ ಪಕ್ಕದಲ್ಲಿದ್ದರೂ ಈ ಊರಿನ ನಿವಾಸಿಗಳಿಗೆ ರಿಮೋಟ್‌ ಏರಿಯಾದಲ್ಲಿ ಇರುವ ಅನುಭವ.

ರಾಜ್ಯ ಹೆದ್ದಾರಿ ಸನಿಹದ ಗ್ರಾಮ:

ಕೆಲ ತಿಂಗಳ ಹಿಂದೆಯಷ್ಟೇ ರಾಜ್ಯ ಹೆದ್ದಾರಿಗೆ ಸೇರಿರುವ ಉಪ್ಪಿನಂಗಡಿ-ಪುತ್ತೂರು ರಸ್ತೆಯ ಇಕ್ಕೆಲೆಗಳಲ್ಲಿ ಹರಡಿಕೊಂಡಿರುವ ಕೋಡಿಂಬಾಡಿ ಪ್ರದೇಶವು ಉಪ್ಪಿನಂಗಡಿ-ಪುತ್ತೂರು ಪಟ್ಟಣಗಳ ಮಧ್ಯಭಾಗದಲ್ಲಿದೆ. ಪುತ್ತೂರಿನಿಂದ-ಕೋಡಿಂಬಾಡಿ ಹಾಗೂ ಉಪ್ಪಿನಂಗಡಿ-ಕೋಡಿಂಬಾಡಿ ನಡುವಿನ ಅಂತರ 6.ಕಿ.ಮೀ. ಕೋಡಿಂಬಾಡಿ ಗ್ರಾ.ಪಂ.ಎರಡು ಗ್ರಾಮಗಳನ್ನು ಹೊಂದಿದ್ದು ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಸಿಕ್ಕಾಪಟ್ಟೆ ಹೆಚ್ಚಿದೆ. ದೂರವಾಣಿ, ಆನ್‌ಲೈನ್‌ ಬಳಕೆದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದರೂ ಅದಕ್ಕೆ ಅಗತ್ಯವಿರುವಷ್ಟು ನೆಟ್‌ವರ್ಕ್‌ ಒದಗಿಸಲು ಟವರ್‌ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಗ್ರಾಹಕರು.

Advertisement

ಎರಡು ಟವರ್‌: ಹೆಸರಿಗೆ ಮಾತ್ರ:

ಸೇಡಿಯಾಪಿನಲ್ಲಿ ಏರ್‌ಟೆಲ್‌ ಮತ್ತು ಕೋಡಿಂಬಾಡಿ ಗ್ರಾ.ಪಂ. ಕಟ್ಟಡ ಇರುವ ವಿನಾಯಕನಗರದಲ್ಲಿ ಬಿಎಸ್‌ಎನ್‌ಎಲ್‌ ಟವರ್‌ ಇದೆ. ಇವೆರೆಡು ಸಿಗ್ನಲ್‌ ಹರಿಸುವಲ್ಲಿ ವಿಫಲವಾಗಿವೆ. ಇಲ್ಲಿ ಒಟ್ಟು 863ಕ್ಕೂ ಮಿಕ್ಕಿ ಮನೆಗಳಿವೆ. ಗ್ರಾ.ಪಂ., ಪಡಿತರ ಅಂಗಡಿ, ಸರಕಾರಿ ಶಾಲೆಯು ಈ ಗ್ರಾಮಗಳಲ್ಲಿದೆ. ಟವರ್‌ನಿಂದ ಅಣತಿ ದೂರದಲ್ಲಿ ಗ್ರಾ.ಪಂ. ಕಚೇರಿ ಇದ್ದು ಅಲ್ಲಿಯೇ ನೆಟ್‌ವರ್ಕ್‌ ಕೈ ಕೊಡುತ್ತಿದೆ. ಅಲ್ಲದೆ ದೂರವಾಣಿ ಆಗಾಗ್ಗೆ ಇಲ್ಲಿ ಕೈ ಕೊಡುತ್ತಿರುವುದರಿಂದ ನಿತ್ಯದ ಕೆಲಸ ಕಾರ್ಯಗಳಿಗೆ ತೊಡಕು ಉಂಟಾಗಿದೆ. ಕೋಡಿಂಬಾಡಿ ಗ್ರಾ.ಪಂ.ನ ಎರಡು ಗ್ರಾಮಗಳಲ್ಲಿನ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಕೋಡಿಂಬಾಡಿ ಮೊಬೈಲ್‌ ಬಳಕೆದಾರರ ನೆಟ್‌ವರ್ಕ್‌ ಸಮಸ್ಯೆಯ ಹೋರಾಟ ಸಮಿತಿ ರಚನೆಯಾಗಿದ್ದು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅದಾದ ಬಳಿಕ ಬಿಎಸ್‌ಎನ್‌ಎಲ್‌ ಟವರ್‌ ಕೊಂಚ ಸುಧಾರಣೆ ಕಂಡರೆ ಏರ್‌ಟೆಲ್‌ ಟವರ್‌ನಲ್ಲಿ ಮೊದಲಿಗಿಂತಲು ಸಾಮರ್ಥ್ಯ ಕ್ಷೀಣವಾಗಿದೆ. ಸೇಡಿಯಾಪುವಿನಲ್ಲಿ ಕಾರ್ಯಾಚರಿಸುತ್ತಿರುವ ಏರ್‌ಟೆಲ್‌ ಸ್ಥಾವರದಿಂದ ಈ ಹಿಂದೆ ಕೋಡಿಂಬಾಡಿಯ ಎಲ್ಲ ಭಾಗದಲ್ಲಿ ಉತ್ತಮ ನೆಟ್‌ವರ್ಕ್‌ ದೊರೆಯುತ್ತಿತ್ತು. ಈಗ ಕೆಲವು ಸಮಯಗಳಿಂದ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಈ ಸ್ಥಾವರದ ವ್ಯಾಪ್ತಿಯ ಸೇಡಿಯಾಪು, ಬೆಳ್ಳಿಪ್ಪಾಡಿ, ಶಾಂತಿನಗರ, ದಾರಂದಕುಕ್ಕು, ಚಿಕ್ಕಮುಟ್ನೂರು, ಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು, ಸರಕಾರಿ ಮತ್ತು ಖಾಸಗಿ ಕಚೇರಿಗಳು ಹಾಗೂ ಜನಸಾಮಾನ್ಯರು ನಿರಂತರ ತೊಂದರೆಗೊಳಗಾಗಿದ್ದಾರೆ. ಹಾಗಾಗಿ ಹೊಸ ಟವರ್‌ ಅಥವಾ ಹಾಲಿ ಸ್ಥಾವರ ಮೇಲ್ದರ್ಜೆಗೆ ಏರಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಆಗ್ರಹಕ್ಕೆ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ.

ಇತರ ಸಮಸ್ಯೆಗಳೇನು?:

  • ಘನತ್ಯಾಜ್ಯ ವಿವೇವಾರಿ ಘಟಕ ಇಲ್ಲದಿರುವುದು
  • ನಿವೇಶನ ಜಾಗ ಅಂತಿಮಗೊಳ್ಳದಿರುವುದು
  • ವಸತಿ ಯೋಜನೆಯಲ್ಲಿ ಮನೆ ಮಂಜೂರಾಗದಿರುವುದು

 

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next