Advertisement

ಶಿರಿಯಾರ: ಪೇಟೆಯ ಪಕ್ಕದಲ್ಲಿದ್ದರೂ ನೆಟ್‌ವರ್ಕ್‌ಗಾಗಿ ಪರದಾಟ

09:56 PM Aug 17, 2021 | Team Udayavani |

ಕೋಟ: ರಾಜ್ಯ ಹೆದ್ದಾರಿಗೆ ಹೊಂದಿ ಕೊಂಡಿರುವ ಶಿರಿಯಾರದಲ್ಲಿ  ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಸಾಕಷ್ಟು  ಕಾಡುತ್ತಿದೆ. ಪ್ರಮುಖ ಮೊಬೈಲ್‌ ಕಂಪೆನಿಗಳಾದ  ಏರ್‌ಟೆಲ್‌, ಜಿಯೋ,  ವಿ.ಐ.

Advertisement

ಸಿಮ್‌ನ  ರೇಂಜ್‌ ಈ ಭಾಗದಲ್ಲಿ  ಸಿಗುತ್ತಿಲ್ಲ. ಹೀಗಾಗಿ ಕರೆ ಬಂದಾಗ ಮನೆಯಿಂದ ಹೊರಗಡೆ ಓಡಿ ನೆಟ್‌ವರ್ಕ್‌ ಸಿಗುವ ಜಾಗವನ್ನು ಅರಸಬೇಕಾಗಿದೆ ಹಾಗೂ ಮಾತಿನ ಮಧ್ಯದಲ್ಲಿ ಕರೆ ಕಡಿತಗೊಳ್ಳುವುದು,  ಮತ್ತೆ  ಕರೆ ಮಾಡಲು ಸಂಪರ್ಕ ಸಾಧ್ಯವಾಗದಿರುವುದು ಕೂಡ ಇದೆ.

ಈ ಬಗ್ಗೆ ಹಲವು ಬಾರಿ ದೂರು ಸಲ್ಲಿಸಿದರೂ ಸಂಬಂಧಪಟ್ಟ  ಕಂಪೆನಿಗಳಿಂದ ಸಮರ್ಪಕ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಕರೆಂಟ್‌ ಹೋದ್ರೆ ಬಿಎಸ್ಸೆನ್ನೆಲ್‌ ಸ್ತಬ್ಧ :

ಶಿರಿಯಾರ ಗ್ರಾ.ಪಂ. ಕಚೇರಿ ಬಳಿ ಬಿಎಸ್ಸೆನ್ನೆಲ್‌ ಟವರ್‌ ಇದೆ. ಆದರೆ ಈ ಘಟಕಕ್ಕೆ  ಜನರೇಟರ್‌ ವ್ಯವಸ್ಥೆ ಇಲ್ಲದಿರುವುದು, ವಿದ್ಯುತ್‌ ಅನ್ನೇ ಅವಲಂಬಿಸಿ ರುವುದರಿಂದ  ವಿದ್ಯುತ್‌ ವ್ಯತ್ಯ ಯವಾದ ರೆ ನೆಟ್‌ವರ್ಕ್‌ ಇಲ್ಲದೆ ಕಾಲ ಕಳೆಯಬೇಕಾಗುತ್ತದೆ. ಹೆಚ್ಚಾಗಿ ಪ್ರತೀ ಮಂಗಳವಾರ ವಿದ್ಯುತ್‌ ವ್ಯತ್ಯ ಯಗೊಳ್ಳುವ ಕಾರಣ ಅಂದು ಪೂರ್ತಿ ದಿನ ಮೊಬೈಲ್‌ ಸ್ತಬ್ಧವಾಗಿರುತ್ತದೆ.

Advertisement

ಬ್ಯಾಂಕ್‌, ಸಹಕಾರಿ ಸಂಘ, ಗ್ರಾ.ಪಂ.ಗೂ ಸಮಸ್ಯೆ  :

ನೆಟ್‌ವರ್ಕ್‌ ಸಮಸ್ಯೆ ಇಲ್ಲಿನ ಸಹಕಾರಿ ಸಂಘದ ಶಾಖೆ, ಹಾಲು ಉತ್ಪಾದಕರ ಸಂಘ, ಗ್ರಾ.ಪಂ.ನ  ಕಾರ್ಯನಿರ್ವಹಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಒಮ್ಮೊಮ್ಮೆ ನೆಟ್‌ವರ್ಕ್‌ ಸಮಸ್ಯೆಯಿಂದ  ಕೆಲಸಗಳಿಗೆ  ಜನರು ದಿನವಿಡೀ ಕಾಯಬೇಕಾದ ಸ್ಥಿತಿ  ಇದೆ. ನೆಟ್‌ವರ್ಕ್‌ ಬೂಸ್ಟರ್‌ ಅಳವಡಿಸಿಕೊಂಡರೂ  ಒಮ್ಮೊಮ್ಮೆ ಸಮಸ್ಯೆ ಮರುಕಳಿಸುತ್ತಿದೆ.

ನೆಟ್‌ವರ್ಕ್‌ ತರಂಗಾಂತರ ಕ್ಷೀಣ?  :

ಶಿರಿಯಾರದಿಂದ ಒಂದೆರಡು ಕಿ.ಮೀ. ದೂರದ ಕಲ್ಮರ್ಗಿ ಯಲ್ಲಿ ಏರ್‌ಟೆಲ್‌, ವಿ.ಐ. ಟವರ್‌ ಇದೆ. ಕೊಳ್ಕೆಬೈಲಿನಲ್ಲಿ ಜಿಯೋ ಟವರ್‌ ಇದೆ. ಆದರೆ ಅಕ್ಕ-ಪಕ್ಕದ ಒಂದೆರಡು  ಕಿ.ಮೀ. ವ್ಯಾಪ್ತಿಗೆ ಈ ಟವರ್‌ನ ನೆಟ್‌ವರ್ಕ್‌ ಸಿಗುತ್ತಿಲ್ಲ. ಕ್ಷೀಣ ತರಂಗಾಂತರ ಈ ಸಮಸ್ಯೆಗೆ ಕಾರಣ ವಾಗಿರಬಹುದೆಂಬ ಅಭಿಪ್ರಾಯ ಸ್ಥಳೀಯರಲ್ಲಿದೆ.

ವಿದ್ಯಾರ್ಥಿಗಳು, ಉದ್ಯೋ ಗಿಗಳಿಗೆ ಸಮಸ್ಯೆ :

ಕೊರೊನಾ ಸಮಸ್ಯೆಯಿಂದ ಸಾಕಷ್ಟು ಮಂದಿ ಊರಿನಲ್ಲಿ  ವರ್ಕ್‌ಫ್ರಂ ಹೋಂನಲ್ಲಿ ತೊಡಗಿದ್ದಾರೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣ ಆನ್‌ಲೈನ್‌ ಮೂಲಕ ನಡೆಯುತ್ತಿದೆ.  ಇವರೆಲ್ಲರೂ  ನೆಟ್‌ವರ್ಕ್‌ ಸಮಸ್ಯೆಯಿಂದ ಸಾಕಷ್ಟು  ಬಸವಳಿದಿದ್ದಾರೆ. ಮನೆಯಿಂದ ಹೊರಗಡೆ ಹೋಗಿ ಅಥವಾ ಅಕ್ಕ-ಪಕ್ಕದ ಗ್ರಾಮದ  ಪರಿಚಯಸ್ಥರ ಮನೆಗಳಿಗೆ ಹೋಗಿ ಕೆಲಸ ನಿರ್ವಹಿಸಬೇಕಾದ, ಓದಿನಲ್ಲಿ ತೊಡಗಿಕೊಳ್ಳಬೇಕಾದ ಸ್ಥಿತಿ ಇದೆ.

ಶಿರಿಯಾರ ಸುತ್ತಮುತ್ತ ಏರ್‌ಟೆಲ್‌, ಜಿಯೋ,  ಬಿಎಸ್ಸೆನ್ನೆಲ್‌ ಸೇರಿದಂತೆ ಇನ್ನಿತರ ಮೊಬೈಲ್‌ ಕಂಪೆನಿಗಳ ನೆಟ್‌ವರ್ಕ್‌ ಸಮಸ್ಯೆ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಕಂಪೆನಿಗೆ ದೂರು ನೀಡಿದರು ಕ್ರಮಕೈಗೊಂಡಿಲ್ಲ. ಆನ್‌ಲೈನ್‌ ಕ್ಲಾಸ್‌ಗೆ, ವರ್ಕ್‌ ಫ್ರಂ ಹೋಂಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು. ರಾಕೇಶ್‌ ನಾಯಕ್‌, ಎತ್ತಿನಟ್ಟಿ, ಸ್ಥಳೀಯರು

ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಸಾಕಷ್ಟು ಮಂದಿ ಮೌಖಿಕವಾಗಿ ತಿಳಿಸಿದ್ದಾರೆ. ಲಿಖೀತವಾಗಿ ದೂರು ನೀಡಿದರೆ ಸಂಬಂಧಪಟ್ಟ ಕಂಪೆನಿಗಳಿಗೆ ಪಂಚಾಯತ್‌ ನಿರ್ಣಯದೊಂದಿಗೆ ಮನವಿ ಮಾಡಲಾಗುವುದು.ಸತೀಶ್‌,  ಪಿಡಿಒ, ಶಿರಿಯಾರ ಗ್ರಾ.ಪಂ.

 

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next