Advertisement

ಮಡಾಮಕ್ಕಿ : ನೆಟ್‌ವರ್ಕ್‌ಗಾಗಿ ಎತ್ತರದ ಗುಡ್ಡದಲ್ಲಿ ಟೆಂಟ್‌

11:33 AM Jun 19, 2021 | Team Udayavani |

ಕುಂದಾಪುರ : ಇಡೀ ಊರಿಗೆ ನೆಟ್‌ವರ್ಕ್‌ ಇಲ್ಲ. ಎಡಿಬಿಡದೇ ಸುರಿಯುತ್ತಿರುವ ಮಳೆ. ಆನ್‌ಲೈನ್‌ ತರಗತಿ, ವರ್ಕ್‌ಫ್ರಂ ಹೋಂ ಕಿರಿಕಿರಿ. ಇದಕ್ಕಾಗಿ ಈ ಊರಿನ ಜನ ಕಂಡುಕೊಂಡ ಪರಿಹಾರ ಎತ್ತರದ ಗುಡ್ಡದಲ್ಲಿ ಟೆಂಟ್‌ ನಿರ್ಮಾಣ.

Advertisement

ಇಲ್ಲಿನ ಮಡಾಮಕ್ಕಿ ಗ್ರಾಮದ ಹಂಜ, ಕಾರಿಮಲೆ, ಎಡ್ಮಲೆ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದೆ. ಆದರೆ ಎತ್ತರದ ಗುಡ್ಡವೊಂದಿರುವ ಹಂಜದಲ್ಲಿ ಎಲ್ಲ ಕಂಪೆನಿಗಳ 4ಜಿ ನೆಟ್‌ವರ್ಕ್‌ ಸಿಗುತ್ತಿದೆ. ಇದಕ್ಕಾಗಿ ಮಕ್ಕಳ ಮತ್ತು ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಊರಿನಿಂದ 5-6 ಕಿ.ಮೀ. ದೂರದ ಎತ್ತರದಲ್ಲಿರುವ ಗುಡ್ಡದಲ್ಲಿ ಟೆಂಟ್‌ ನಿರ್ಮಿಸಲಾಗಿದೆ.

54 ಮನೆಗಳು
ಹಂಜದ 25 ಮನೆ, ಎಡ್ಮಲೆಯ 21 ಮನೆ ಹಾಗೂ ಕಾರಿಮಲೆಯ 8 ಸೇರಿದಂತೆ ಈ ಭಾಗದಲ್ಲಿ 54 ಮನೆಗಳಿದ್ದು, 400ರಿಂದ 500 ಮಂದಿ ನೆಲೆಸಿದ್ದಾರೆ. ಇಲ್ಲಿ ಯಾರಿಗೂ ನೆಟ್‌ವರ್ಕ್‌ ಸೌಲಭ್ಯವಿಲ್ಲ. ಈ ಊರಲ್ಲಿ ಸ್ನಾತಕೋತ್ತರ ಪದವಿ, ಪದವಿ, ಪಿಯುಸಿ, ಐಟಿಐ, ಪ್ರೌಢಶಾಲೆ, ಪ್ರಾಥಮಿಕ ಸೇರಿದಂತೆ ಒಟ್ಟು 33 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಆನ್‌ಲೈನ್‌ ತರಗತಿ ನಡೆಯುತ್ತಿದ್ದು, ಅದಕ್ಕಾಗಿ ದಿನವೂ ಈ ಗುಡ್ಡವೇರಿ, ಟೆಂಟ್‌ನಲ್ಲಿ ಕುಳಿತು ಆನ್‌ಲೈನ್‌ ಪಾಠ ಕೇಳುವಂತಾಗಿದೆ.

ಮಳೆಯಿಂದ ಸಂಕಷ್ಟ
ಬೇಸಗೆಯಲ್ಲಾದರೆ ಟೆಂಟ್‌ನ ಆವಶ್ಯಕತೆ ಅಷ್ಟೊಂದು ಇರಲಿಲ್ಲ. ಆದರೆ ಈಗ ಭಾರೀ ಗಾಳಿ-ಮಳೆಗೆ ಟೆಂಟ್‌ನೊಳಗೆ ಕುಳಿತು ಪಾಠ ಕೇಳುವುದು ಅಥವಾ ಕೆಲಸ ಮಾಡುವುದು ಭಾರೀ ಕಷ್ಟಕರವಾಗಿದೆ. ಮಳೆಗೆ ಗುಡ್ಡವೇರಿ ಹೋಗುವುದು ಸಹ ಸವಾಲಿನ ಕೆಲಸವಾಗಿದೆ.

ನೆಟ್‌ವರ್ಕ್‌ ಕಲ್ಪಿಸಲು ಆಗ್ರಹ
ನಕ್ಸಲ್‌ ಪೀಡಿತ ಮಡಾಮಕ್ಕಿ ಗ್ರಾಮದ ಈ ಹಂಜ, ಎಡ್ಮಲೆ, ಕಾರಿಮಲೆ ಊರಿನ ಜನರು ಕಳೆದ ಹಲವು ವರ್ಷಗಳಿಂದ ನೆಟ್‌ವರ್ಕ್‌ ಸಮಸ್ಯೆ ಪರಿಹಾರಕ್ಕಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮೊರೆಯಿಡುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ನೆಟ್‌ವರ್ಕ್‌ ವ್ಯವಸ್ಥೆ ಕಲ್ಪಿಸಲಿ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

Advertisement

ನೆಟ್‌ವರ್ಕ್‌ಗೆ ವ್ಯವಸ್ಥೆ ಮಾಡುವಂತೆ ಪಂಚಾಯತ್‌ನಿಂದ ಸಂಬಂಧಪಟ್ಟವರಿಗೆ ಅಹವಾಲು ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗಂತೂ ಆನ್‌ಲೈನ್‌ ತರಗತಿ, ವರ್ಕ್‌ ಫ್ರಂ ಹೋಮ್‌ ಪದ್ದತಿ ಹೆಚ್ಚಾಗಿರುವುದರಿಂದ ನೆಟ್‌ವರ್ಕ್‌ ಆವಶ್ಯಕತೆ ಬಹಳಷ್ಟಿದೆ. ಇನ್ನಾದರೂ ಪ್ರಯತ್ನಿಸಲಿ.
– ದಯಾನಂದ ಪೂಜಾರಿ, ಉಪಾಧ್ಯಕ್ಷರು, ಮಡಾಮಕ್ಕಿ ಗ್ರಾ.ಪಂ.

ಮನೆಯಲ್ಲಿ ನೆಟ್‌ವರ್ಕ್‌ ಇಲ್ಲ. ಹಾಗಾಗಿ ಗುಡ್ಡಕ್ಕೆ ಹೋಗಿ ಆನ್‌ಲೈನ್‌ ಪಾಠ ಕೇಳುವಂತಾಗಿದೆ. ಈಗಂತೂ ಜೋರಾಗಿ ಮಳೆ ಬರುತ್ತಿದ್ದು, ಪಾಠ ಕೇಳುವುದೇ ಕಷ್ಟವಾಗಿದೆ. ನಮ್ಮ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ನೆಟÌರ್ಕ್‌ ವ್ಯವಸ್ಥೆ ಕಲ್ಪಿಸಿಕೊಡಲಿ.
– ಸುಮಂತ್‌ ಶೆಟ್ಟಿ ಹಂಜ, ಎಂಕಾಂ ವಿದ್ಯಾರ್ಥಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next