ನವದೆಹಲಿ: ಭಾರತೀಯ ಸೇನೆಯ ಸಿಬ್ಬಂದಿಗಳು ಸೇರಿ ಎನ್‌ಜಿಒ ಒಂದರ ಜೊತೆ ಸೇರಿಕೊಂಡು 35 ವರ್ಷದ ಆನೆಯ ಆರೈಕೆ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ʻಆಪರೇಷನ್ ಮೋತಿʼ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಆರೈಕೆ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಬೆಂಗಾಲ್ ಇಂಜಿನಿಯರ್ ವಿಭಾಗ ಕೈಜೋಡಿಸಿದೆ.
ಅಸ್ವಸ್ಥತೆಯಿಂದ ಕುಸಿದುಬಿದ್ದು ಗಂಭೀರ ಗಾಯಗೊಂಡಿದ್ದ ಆನೆಯೊಂದನ್ನು ರಕ್ಷಿಸಲು ವೈಲ್ಡ್‌ಲೈಫ್ ಎಸ್‌ಒಎಸ್ ಎಂಬ ಎನ್‌ಜಿಒ ಭಾರತೀಯ ಸೇನೆಯ ಮಾಜಿ ಜನರಲ್ ವಿ.ಕೆ.ಸಿಂಗ್ ಅವರಲ್ಲಿ ಕೇಳಿಕೊಂಡಿತ್ತು. ಅದಕ್ಕೆ ತಕ್ಷಣ ಸ್ಪಂದಿಸಿದ ಭಾರತೀಯ ಸೇನೆ ಆನೆಯನ್ನು ವಿಶೇಷ ಆರೈಕೆ ಕೇಂದ್ರಕ್ಕೆ ರವಾನಿಸಿದೆ. ಭಾರತೀಯ ಸೇನೆಯ ಬೆಂಗಾಲ್ ಇಂಜಿನಿಯರ್ ವಿಭಾಗ ಆನೆ ಗುಣಮುಖವಾಗುವಲ್ಲಿ ನೆರವಾಗಿದೆ.
ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಆನೆಯ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ಹಂಚಿಕೊಳ್ಳಲಾಗುತ್ತಿತ್ತು. ಇದೀಗ ಮೋತಿ ಗುಣಮುಖವಾಗುತ್ತಿದ್ದು ಶೀಘ್ರ ಗುಣಮುಖವಾಗಲೆಂದು ಲಕ್ಷಾಂತರ ಮಂದಿ ಹಾರೈಸುತ್ತಿದ್ಧಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೇನಾ ಅಧಿಕಾರಿಗಳ ಈ ವಿಶೇಷ ಕಾಳಜಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.