ಉಳ್ಳಾಲ/ಚಿಕ್ಕಮಗಳೂರು: ಕಳೆದ ಮೂರು ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆ ಇದೀಗ ಮತ್ತೆ ವ್ಯಾಪಾರಿಯೊಬ್ಬರ ಆತ್ಮಹತ್ಯೆಯಿಂದ ಸುದ್ಧಿಯಾಗಿದೆ. ಸೋಮವಾರ ಮಂಗಳೂರಿನ ಸಮೀಪದಲ್ಲಿ ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿ ಚಿಕ್ಕಮಗಳೂರು ಮೂಲದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಪ್ರಸನ್ನ ಕುಮಾರ್ (40 ) ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವವರ ಪುತ್ರ ಪ್ರಸನ್ನಕುಮಾರ್ ತರಕಾರಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ಕೊತ್ತಂಬರಿ ಸೊಪ್ಪು ಸರಬರಾಜು ಮಾಡುತ್ತಿದ್ದರು. ಬೆಳಗ್ಗೆ ವ್ಯಾಪಾರದ ಹಣ ಬರಲು ಇದೆ, ವಸೂಲಿ ಮಾಡಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.
ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ನೇತ್ರಾವತಿ ನದಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕಾರಿನ ಪೋಟೋ ತೆಗೆದು ಮಾಹಿತಿ ಹಂಚಿಕೊಂಡಿದ್ದು, ನದಿಗೆ ಹಾರಿದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿದೆ.
ಪ್ರಸನ್ನಕುಮಾರ್ ಉತ್ತಮ ಆರ್ಥಿಕ ಹಿನ್ನಲೆ ಹೊಂದಿದ್ದು, ಇತ್ತೀಚೆಗೆ ಹೊಸ ಮನೆಯನ್ನು ಕಟ್ಟಿಸಿದ್ದರು ಎನ್ನಲಾಗಿದೆ. ಪ್ರಸನ್ನ ಕುಮಾರ್ ವಿವಾಹಿತರಾಗಿದ್ದು, ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಇದ್ದಾರೆ, ಅವರ ಪತ್ನಿ ಮೂಡಿಗೆರೆ ತಾಲೂಕಿನ ಜೇನುಬೈಲು ಗ್ರಾಮದವರು ಎಂದು ತಿಳಿದುಬಂದಿದೆ.ಅವರು ನದಿಗೆ ಹಾರಿರುವುದಕ್ಕೆ ಕಾರಣ ತಿಳಿದುಬಂದಿಲ್ಲ, ಘಟನೆ ಅನುಮಾನಾಸ್ಪದವಾಗಿದೆ. ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತತ್ ಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ನೀರುಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು.
2019 ರಲ್ಲಿ ಕೆಫೆ ಕಾಫಿ ಡೇ ಮಾಲಕ ಸಿದ್ದಾಥ್೯ ಆತ್ಮಹತ್ಯೆ ನಂತರ ಸರಣಿ ಆತ್ಮಹತ್ಯೆಗಳೇ ನೇತ್ರಾವತಿ ಸೇತುವೆಯಲ್ಲಿ ನಡೆದಿತ್ತು.2020 ರಲ್ಲಿ ಆತ್ಮಹತ್ಯೆ ತಡೆಗಾಗಿ ಮುಡಾ ಅಭಿವೃದ್ಧಿ ಅನುದಾನದ ಮೂಲಕ ತಡೆಬೇಲಿ ಅಳವಡಿಸಲಾಯಿತು. ತದನಂತರ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳು ನಿಂತಿತ್ತು.