Advertisement

ನೇತ್ರಾವತಿ, ಫಲ್ಗುಣಿಗೆ 400 ಕೋ.ರೂ. ವೆಚ್ಚದ ನದಿ ದಂಡೆ

10:12 AM Sep 24, 2018 | |

ಮಂಗಳೂರು: ಸಬರಮತಿ, ಬ್ರಹ್ಮಪುತ್ರ ನದಿ ದಂಡೆಯಲ್ಲಿ ಸಂರಕ್ಷಣೆ ಕೈಗೊಂಡ ಮಾದರಿಯಲ್ಲಿ ದ. ಕನ್ನಡ ಜಿಲ್ಲೆಯ ನೇತ್ರಾವತಿ ಹಾಗೂ ಫಲ್ಗುಣಿ ನದಿ ದಂಡೆಗಳಲ್ಲೂ ಕೈಗೊಳ್ಳಲು ರಾಜ್ಯ ಸಣ್ಣ ನೀರಾವರಿ ಇಲಾಖೆ ನಿರ್ಧರಿಸಿದೆ. ಭಾರೀ ಪ್ರವಾಹದಿಂದ ಕೊರೆದು ಆಗುವ ಹಾನಿಯನ್ನು ತಪ್ಪಿಸುವುದು ಇದರ ಉದ್ದೇಶ. 

Advertisement

ನೇತ್ರಾವತಿ ನದಿಯಲ್ಲಿ ಬಿ.ಸಿ. ರೋಡ್‌ನ‌ ಸೇತುವೆಯಿಂದ ಮಂಗಳೂರಿನ ಅಳಿವೆ ಬಾಗಿಲುವರೆಗೆ ಹಾಗೂ ಫಲ್ಗುಣಿ ನದಿಯಲ್ಲಿ ಗುರುಪುರ ಡ್ಯಾಂನಿಂದ ಸಮುದ್ರ ಸೇರುವ ಪ್ರದೇಶದವರೆಗಿನ ದಂಡೆ ನಿರ್ಮಾಣಕ್ಕೆ ಪ್ರಾಥಮಿಕವಾಗಿ ಯೋಚಿಸಲಾಗಿದೆ. ಈ ಸಂಬಂಧ 400 ಕೋಟಿ ರೂ.ಗಳ ಪ್ರಸ್ತಾವನೆಯನ್ನು ದ.ಕ. ಸಣ್ಣ ನೀರಾವರಿ ಇಲಾಖೆಯು ಸರಕಾರಕ್ಕೆ ಸಲ್ಲಿಸಿದೆ. ಕೇಂದ್ರ ಸರಕಾರದ ನೆರವು ಪಡೆದು ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ.

ಪ್ರಸ್ತಾವನೆ ಸಂಬಂಧ ಎರಡೂ ನದಿ ಪಾತ್ರದಲ್ಲಿ ಹಿಂದೆ ಪ್ರಾಥಮಿಕ ಸರ್ವೇ ಕೂಡ ನಡೆಸಲಾಗಿತ್ತು. ಮತ್ತೂಮ್ಮೆ ಸರ್ವೇ ನಡೆಸಿ ವರದಿ ನೀಡುವಂತೆ ರಾಜ್ಯ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸರ್ವೇಗೆ ಸಚಿವ ಸಿ.ಎಸ್‌. ಪುಟ್ಟರಾಜು ಒಪ್ಪಿಗೆ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಲಾಭವೇನು?
ಈ ಬಾರಿ ಭಾರೀ ಮಳೆಯಿಂದ ನೇತ್ರಾವತಿ ಹಾಗೂ ಫಲ್ಗುಣಿ ಉಕ್ಕಿ ಹರಿದಿದ್ದವು. ನದಿ ದಡದ ಕೃಷಿ, ವಸತಿ ಪ್ರದೇಶಕ್ಕೆ ಹಾನಿಯಾಗಿತ್ತು. ನದಿದಂಡೆ ನಿರ್ಮಿಸಿ ನದಿ ಪಾತ್ರದ ಜನರಿಗೆ ನೆರೆ ನೀರಿನ ಸಮಸ್ಯೆ ಆಗದಂತೆ ಕಾಪಾಡುವುದು ಯೋಜನೆಯ ಮುಖ್ಯ ಗುರಿ. ಪ್ರವಾಸೋದ್ಯಮಕ್ಕೂ ಇದು ಪೂರಕ ವಾತಾವರಣ ನಿರ್ಮಿಸಬಹುದು. 
ಅಗತ್ಯವಿದ್ದಲ್ಲಿ  ಮಾತ್ರ! ಪ್ರಸ್ತಾವಿತ ಯೋಜನೆಯಂತೆ ಎರಡೂ ನದಿಗಳ ಉದ್ದಕ್ಕೆ ದಂಡೆ ನಿರ್ಮಾಣದ ಉದ್ದೇಶವಿಲ್ಲ, ಬಹಳ ಅಗತ್ಯ ಇದ್ದಲ್ಲಿ ಮಾತ್ರ ಕಾಂಕ್ರೀಟ್‌ ಅಥವಾ ಇತರ ಮಾದರಿಯ ದಂಡೆ ನಿರ್ಮಿಸಲಾಗುತ್ತದೆ. 
ಪ್ರವಾಸೋದ್ಯಮ ಸ್ನೇಹಿ ಸಬರಮತಿ ನದಿದಂಡೆ.

ಗುಜರಾತ್‌ನ ಸಬರಮತಿಯನ್ನು “ನದಿ ದಂಡೆ ಸಂರಕ್ಷಣ ಯೋಜನೆಯಡಿ’ ಅಭಿವೃದ್ಧಿಪಡಿಸಲಾಗಿದೆ. ನೀರು ಕೃಷಿ, ವಸತಿ ಪ್ರದೇಶಗಳಿಗೆ ನುಗ್ಗದಂತೆ ಮುನ್ನೆಚ್ಚರಿಕೆ ಒಂದಾದರೆ, ತೀರ ಪ್ರದೇಶವನ್ನು ಪ್ರವಾಸೋದ್ಯಮ ಹಾಗೂ ಪರಿಸರಪೂರಕವಾಗಿ ಮಾಡುವುದು ಯೋಜನೆಯ ಉದ್ದೇಶ. ಪ್ರಸ್ತುತ ಯೋಜನೆಯಿಂದಾಗಿ ಅಲ್ಲಿ ಪ್ರವಾಸೋದ್ಯಮ ಪೂರಕ ಚಟುವಟಿಕೆಗಳು ಗರಿ ಗೆದರಿವೆ. ಬ್ರಹ್ಮಪುತ್ರ ನದಿ ಭಾಗದಲ್ಲೂ ಅಗತ್ಯವಿರುವ ಪ್ರದೇಶಗಳಲ್ಲಿ ಕಾಂಕ್ರೀಟ್‌ ದಂಡೆ ನಿರ್ಮಿಸಲಾಗಿದೆ. ನರ್ಮದಾ ನದಿಯಲ್ಲೂ ಕೆಲವೆಡೆ ನದಿ ದಂಡೆ ನಿರ್ಮಾಣ ಮಾಡಲಾಗಿದೆ.

Advertisement

ನದಿ ತೀರ ಸಂಪರ್ಕಿಸುವ ರಸ್ತೆ
ನೇತ್ರಾವತಿ ಹಾಗೂ ಫಲ್ಗುಣಿ ನದಿ ದಂಡೆ ಯೋಜನೆ ಜಾರಿ ಸಂದರ್ಭ ಹಲವು ವರ್ಷದಿಂದ ಬಾಕಿಯುಳಿದಿರುವ ಮಂಗಳಾ ಕಾರ್ನಿಷ್‌ ಯೋಜನೆಗೆ ಮರುಜೀವ ದೊರೆಯಬಹುದೇ ಎಂಬ ಆಶಾಭಾವ ಈಗ ಮೂಡಿದೆ. ನೇತ್ರಾವತಿ ಹರಿಯುವ ಜಪ್ಪು ಸೇತುವೆಯಲ್ಲಿಂದ ಫಲ್ಗುಣಿ ನದಿಯ ಕೂಳೂರುವರೆಗೆ ನದಿಯ ಪಕ್ಕ ರಸ್ತೆ ನಿರ್ಮಿಸುವ ಈ ಯೋಜನೆ ಘೋಷಣೆಯಲ್ಲಿ ಬಾಕಿಯಾಗಿದೆ. ನದಿದಂಡೆ ಅನುಷ್ಠಾನಗೊಂಡಲ್ಲಿ ಮಂಗಳಾ ಕಾರ್ನಿಷ್‌ ಯೋಜನೆಯೂ ಜಾರಿಯಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ಹೊಸ ನಿರೀಕ್ಷೆಯನ್ನು ಆಶಿಸಬಹುದು.

ನೇತ್ರಾವತಿ ಹಾಗೂ ಫಲ್ಗುಣಿಗೆ ನದಿದಂಡೆ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ಮಾಸ್ಟರ್‌ಪ್ಲ್ಯಾನ್‌ ಸಿದ್ಧಪಡಿಸಲಾಗುತ್ತಿದೆ. ನೆರೆ ನೀರು ಕೃಷಿ, ವಸತಿ ಪ್ರದೇಶಕ್ಕೆ ನುಗ್ಗುವ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಶೀಘ್ರ ಸೂಕ್ತ ಸರ್ವೇ ನಡೆಸಲಾಗುವುದು.
ಗೋಕುಲ್‌ದಾಸ್‌, ಕಾ.ಪಾ. ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ, ದ.ಕ.

* ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next