Advertisement

ಅಪಾಯದ ಮಟ್ಟದಲ್ಲಿ ನೇತ್ರಾವತಿ –ಕುಮಾರಧಾರಾ

10:46 AM Aug 09, 2018 | |

ಉಪ್ಪಿನಂಗಡಿ: ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿನ ನೀರಿನ ಮಟ್ಟದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದ್ದು, ನದಿ ನೀರು ಅಪಾಯದ ಮಟ್ಟಕ್ಕೆ ಸನಿಹ ತಲುಪಿದೆ. ಕೆಲವು ದಿನಗಳಿಂದೀಚೆಗೆ ಒಣಹ ವೆಯಿತ್ತು. ನದಿಗಳಲ್ಲಿ ನೀರಿನ ಮಟ್ಟದಲ್ಲಿ ಗಂಭೀರ ಪ್ರಮಾಣದ ಇಳಿಕೆಯಾಗಿತ್ತು. ಆದರೆ, ಮಂಗಳವಾರ ರಾತ್ರಿಯಿಂದ ಭಾರೀ ಮಳೆಯಾಗಿದ್ದು, ನೀರಿನ ಮಟ್ಟ ತೀವ್ರಗತಿಯಲ್ಲಿ ಏರಿಕೆ ಕಂಡಿತು. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ಈ ಬಾರಿಯ ಗರಿಷ್ಠ ಮಟ್ಟವನ್ನು ತಲುಪಿದೆ. ಬುಧವಾರ ಸಾಯಂಕಾಲ ಪರಿಷ್ಕೃತ ಅಪಾಯ ಮಟ್ಟವಾಗಿರುವ 30.5 ಮೀ.ಗೆ ಸನಿಹದಲ್ಲಿ ನೀರು ಹರಿಯುತ್ತಿದೆ.

Advertisement

ವಿಪತ್ತು ನಿರ್ವಹಣ ತಂಡ
ಜಿಲ್ಲಾಡಳಿತದಿಂದ ತರಬೇತುಗೊಂಡಿರುವ ಗೃಹರಕ್ಷಕ ದಳ ಕೇಂದ್ರೀಕೃತ ವಿಪತ್ತು ನಿರ್ವಹಣ ತಂಡ ನದಿಯ ನೀರಿನ ಹೆಚ್ಚಳದಿಂದಾಗಿ ಸಂಭಾವ್ಯ ಅಪಾಯವನ್ನು ಎದುರಿಸಲು ಸನ್ನದ್ಧವಾಗಿದ್ದು, ಸುರಕ್ಷತಾ ಕ್ರಮಕ್ಕೆ ಅಗತ್ಯವಾದ ಪರಿಕರಗಳನ್ನು ಹೊಂದಿಸಿಕೊಂಡಿವೆ. ಗೃಹ ರಕ್ಷಕ ದಳದ ಘಟಕಾಧಿಕಾರಿ ದಿನೇಶ್‌ ನೇತೃತ್ವದಲ್ಲಿ ವಿಪತ್ತು ನಿರ್ವಹಣ ತಂಡ, ಮಹಮ್ಮದ್‌ ಬಂದಾರು ನೇತೃತ್ವದಲ್ಲಿ ಈಜುಗಾರರ ತಂಡ ನದಿ ಸಂಗಮ ಸ್ಥಳದಲ್ಲಿ ಬೀಡುಬಿಟ್ಟಿವೆ. ಕಂದಾಯ ಇಲಾಖೆ ಅಧಿಕಾರಿಗಳೂ ಸ್ಥಳದಲ್ಲಿದ್ದು, ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ.

ಕುಕ್ಕೆ ಸ್ನಾನಘಟ್ಟ ಮುಳುಗಡೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸುತ್ತಮುತ್ತ ಭಾರೀ ಮಳೆಯಾಗಿದೆ. ಇಲ್ಲಿನ ಪುಣ್ಯ ನದಿ ಕುಮಾರಧಾರಾ ತುಂಬಿ ಹರಿಯುತ್ತಿದೆ. ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಯಾತ್ರಿಗಳಿಗೆ ಪುಣ್ಯಸ್ನಾನ ನೆರವೇರಿಸಲು ತೊಡಕುಂಟಾಯಿತು. ವ್ಯಾಪಕ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಭಾಗಗಳ ಹಳ್ಳ-ಕೊಳ್ಳಗಳೂ ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೆರೆ ನೀರು ಹರಿದ ಪರಿಣಾಮ ಹಲವು ಭಾಗಗಳಲ್ಲಿ ಕೃಷಿ ತೋಟಗಳು ಜಲಾವೃತಗೊಂಡಿವೆ. ಸುಬ್ರಹ್ಮಣ್ಯ-ಪಂಜ – ಕಾಣಿಯೂರು ಸಂಪರ್ಕ ಮಾರ್ಗದಲ್ಲಿ ಕುಮಾರಧಾರಾ ಬಳಿ ಇರುವ ಸೇತುವೆ ಮುಳುಗಡೆಯಾಗಿ, ಈ ಮಾರ್ಗದಲ್ಲಿ ಸಂಚಾರ ಕೆಲ ಸಮಯ ಕಡಿತಗೊಂಡಿತು.

ಹೊಸಮಠ ಸೇತುವೆ ಮುಳುಗಡೆ
ಕಡಬ: ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಹೊಸ ಮಠ ಹೊಸಮಠ ಮುಳುಗು ಸೇತುವೆ ಬುಧವಾರ ಮುಳುಗಿದೆ. ಬಿಳಿನೆಲೆ ಗ್ರಾಮದ ನೆಟ್ಟಣ ದಲ್ಲಿಯೂ ಸೇತುವೆ ಮುಳುಗಿ, ಸಂಚಾರಕ್ಕೆ ಅಡ್ಡಿಯಾಯಿತು. ಸಂಜೆ ತನಕವೂ ಹೊಸಮಠ ಸೇತುವೆ ಮೇಲಿನ ನೀರು ಇಳಿದಿರಲಿಲ್ಲ. ಮಧ್ಯಾಹ್ನದ ವೇಳೆಗೆ ನೀರಿನ ಪ್ರಮಾಣ ಭಾರೀ ಏರಿಕೆ ಯಾಗಿತ್ತು. ಕಳೆದ ತಿಂಗಳು ಸತತ 11 ದಿನಗಳ ಕಾಲ ಹೊಸಮಠ ಸೇತುವೆ ನೀರಿನಲ್ಲಿ ಮುಳುಗಿ, ಸಂಚಾರಕ್ಕೆ ತೊಡಕಾಗಿತ್ತು. ಸೇತುವೆ ಮುಳುಗಡೆಯಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡಿದರು. ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿನಿಂದ ಜನರು ನಡೆದು ಹೋಗಿ ಹೊಳೆಯನ್ನು ದಾಟುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next