ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ʼಜೈಲರ್ʼ ಸಿನಿಮಾ ದೊಡ್ಡ ಹಿಟ್ ಆಗಿದೆ. ವರ್ಲ್ಡ್ ವೈಡ್ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇನ್ನು ಕೂಡ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ.
ʼಜೈಲರ್ʼ ಸಿನಿಮಾ ಯಶಸ್ಸಾದ ಖುಷಿಯಲ್ಲಿ ʼತಲೈವಾʼ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಸಿನಿಮಾರಂಗಕ್ಕೆ ಬರುವ ಮುನ್ನ ರಜಿನಿಕಾಂತ್ ಬೆಂಗಳೂರಿನಲ್ಲಿ ಹತ್ತಾರು ವರ್ಷ ನೆಲೆಸಿದ್ದರು. ಬಸ್ ಕಂಡೆಕ್ಟರ್ ಬದುಕನ್ನು ಸಾಗಿಸುತ್ತಿದ್ದರು. ಜಯನಗರ ಡಿಪೋಗೆ ದಿಢೀರ್ ಭೇಟಿ ನೀಡಿದ್ದರು. ಆ ಬಳಿಕ ಅವರು ಚಾಮರಾಜಪೇಟೆಯ ರಾಯರ ಮಠಕ್ಕೆ ಭೇಟಿ ನೀಡಿದ್ದರು. ರಾಯರ ಮಠಕ್ಕೆ ಭೇಟಿ ನೀಡಿದ ಕ್ಷಣದ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.
ರಾಯರ ಮಠಕ್ಕೆ ರಜಿನಿಕಾಂತ್ ಭೇಟಿ ನೀಡಿದ ವೇಳೆ ಮಂಗಳಾರತಿ ತಟ್ಟೆಗೆ ದಕ್ಷಿಣೆಯನ್ನು ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದು ರಾಯರ ಮಠಕ್ಕೆ ಬಂದಾಗ ರಜಿನಿಕಾಂತ್ ಬಿಳಿ ಬಣ್ಣದ ಉದ್ದ ಕೈ ಅಂಗಿ ಹಾಗೈ ಬಿಳಿ ಪಂಚೆ ತೊಟ್ಟು ಬಂದಿದ್ದರು. ಸಾಮಾನ್ಯವಾಗಿ ನಾವು ಮಂಗಳಾರತಿ ತಟ್ಟೆಗೆ ಪ್ಯಾಂಟ್ ಅಥವಾ ಶರ್ಟ್ ಕಿಸೆಯಿಂದ ತೆಗೆದು ಹಣವನ್ನು ಹಾಕುತ್ತೇವೆ. ಆದರೆ ರಜಿನಿಕಾಂತ್ ಕಿಸೆಯಿಂದ ಹಣ ತೆಗೆಯದೆ ಶರ್ಟ್ ತೋಳಿನಲ್ಲಿ ಹಣವನ್ನಿಟ್ಟು ಅದನ್ನು ದಕ್ಷಿಣೆ ರೂಪದಲ್ಲಿ ಮಂಗಳಾರತಿ ತಟ್ಟೆಗೆ ಹಾಕಿದ್ದಾರೆ.
ʼತಲೈವಾʼ ಅವರು ಮಾತ್ರ ಇಂಥದ್ದನ್ನು ಮಾಡಬಲ್ಲರೆಂದು ಅವರ ಅಭಿಮಾನಿಗಳು ವಿಡಿಯೋವನ್ನು ಹಂಚಿಕೊಂಡು ಹೇಳುತ್ತಿದ್ದಾರೆ.