ಜೆರುಸಲೇಂ:ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಅಮೆರಿಕ ವಾಯುಪಡೆ ದಾಳಿ ನಡೆಸಿ ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಇರಾಕ್ ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಒಂದು ವೇಳೆ ಇರಾನ್ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ನಡೆಸುವ ಪ್ರತಿದಾಳಿಯ ಸ್ಫೋಟ ಪ್ರತಿಧ್ವನಿಸಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಯಾರೇ ಆಗಲಿ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ನಡೆಸುವ ದಾಳಿ ಪ್ರತಿಧ್ವನಿಸುವಂತಿರುತ್ತದೆ ಎಂದು ನೆತನ್ಯಾಹು ಜೆರುಸಲೇಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇರಾಕ್ ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದ ನಂತರ ಈ ರೀತಿ ಪ್ರತಿಕ್ರಿಯೆ ನೀಡುವ ಮೂಲಕ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಅಮೆರಿಕದ ಡ್ರೋನ್ ಹೊಡೆದುರುಳಿಸಿದ ಸಂದರ್ಭದಲ್ಲಿ ಇರಾನ್ ಮೇಜರ್ ಜನರಲ್ ಖಾಸಿಂ ಸೊಲೆಮನಿಯನ್ನು ಟೆರರಿಸ್ಟ್ ಇನ್ ಚೀಫ್ ಎಂದು ನೆತನ್ಯಾಹು ವಾಗ್ದಾಳಿ ನಡೆಸಿದ್ದರು.