ಮುಂಬಯಿ: ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಪ್ರವಾಸಿ ಆಸ್ಟ್ರೇಲಿಯ ಆಟಗಾರರು ಬುಧವಾರ ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಕಠಿನ ತಾಲೀಮ್‌ನಲ್ಲಿ ತೊಡಗಿಸಿಕೊಂಡರು. ಹೆಚ್ಚಿನ ಆಟಗಾರರು ವಿಕೆಟ್ ನಡುವಣ ಓಟಕ್ಕೆ ಹೆಚ್ಚಿನ ಗಮನ ಹರಿಸಿದರು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯ ತಂಡ ಎರಡು ದಿನಗಳ ಹಿಂದೆ ಭಾರತಕ್ಕೆ ಆಗಮಿಸಿತ್ತು. ಸರಣಿಯ ಮೊದಲ ಟೆಸ್ಟ್ ಪುಣೆಯಲ್ಲಿ ಫೆ. 23ರಿಂದ ಆರಂಭವಾಗಲಿದೆ. ಪುಣೆಗೆ ತೆರಳುವ ಮೊದಲು ಆಸ್ಟ್ರೇಲಿಯ ತಂಡವು ಫೆ. 17ರಿಂಧ ಆರಂಭವಾಗುವ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತ “ಎ’ ತಂಡವನ್ನು ಎದುರಿಸಲಿದೆ.
ಮೊದಲ ಅಭ್ಯಾಸ ಅವಧಿಯಲ್ಲಿ ಡೇವಿಡ್ ವಾರ್ನರ್, ನಾಯಕ ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಉಸ್ಮಾನ್ ಖ್ವಾಜ ಸಹಿತ ಹೆಚ್ಚಿನೆಲ್ಲ ಆಟಗಾರರು ನೆಟ್‌ನಲ್ಲಿ ಅಭ್ಯಾಸ ನಡೆಸಿದರು. ವಿಕೆಟ್ ನಡುವಣ ಓಟಕ್ಕೂ ಹೆಚ್ಚಿನ ಗಮನ ಹರಿಸಿದರು. ಕೆಲವು ಆಟಗಾರರು ಸ್ಲಿಪ್ ಕ್ಯಾಚ್ ಅಭ್ಯಾಸದಲ್ಲಿ ತೊಡಗಿದರು.
ಸ್ಪಿನ್‌ಗೆ ನೆರವು ನೀಡುವ ಪಿಚ್‌ನಲ್ಲಿ ಭಾರತದ ಸ್ಪಿನ್ ದಾಳಿಯನ್ನು ಎದುರಿಸುವ ಸಲುವಾಗಿ ಆಸ್ಟ್ರೇಲಿಯ ಆಟಗಾರರು ಗಂಭೀರವಾಗಿ ತಾಲೀಮ್‌ನಲ್ಲಿ ಭಾಗವಹಿಸಿದರು. ತಂಡದ ಸ್ಪಿನ್ ಸಲಹೆಗಾರ ಶ್ರೀರಾಮ್ ಶ್ರೀಧರನ್ ಮತ್ತು ಸ್ಪಿನ್ ಬೌಲರ್‌ಗಳ ದಾಳಿಯನ್ನು ಹೆಚ್ಚಾಗಿ ಆಟಗಾರರು ಎದುರಿಸಿದರು.
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸದ್ಯ ಪ್ರಚಂಡ ಫಾರ್ಮ್ನಲ್ಲಿದ್ದು ಸತತ 19 ಪಂದ್ಯಗಳಲ್ಲಿ ಗೆದ್ದ ಸಾಧನೆ ಮಾಡಿದೆ. 2012ರ ಬಳಿಕ ತಂಡವು ತವರಿನಲ್ಲಿ ಅಜೇಯ ಸಾಧನೆ ಹೊಂದಿದ್ದು ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದ ಹಿರಿಮೆ ಹೊಂದಿದೆ.
ಭಾರತದಲ್ಲಿ ಆಡುವುದು ನಮ್ಮ ಪಾಲಿನ ಬಲುದೊಡ್ಡ ಸವಾಲು. ಒಂದು ವೇಳೆ ನಾವು ಕಠಿನ ಪರಿಶ್ರಮ ವಹಿಸಿ ಸರಣಿ ಗೆದ್ದರೆ ಇದೊಂದು ಬಲುದೊಡ್ಡ ಸಾಧನೆಯಾಗಲಿದೆ ಮತ್ತು 10-120 ವರ್ಷಗಳ ಹಿಂದೆ ನಾವು ಮಾಡಿದ ಸಾಧನೆಯನ್ನು ಅವಲೋಕಿಸಬಹುದು. ಇದೊಂದು ಬಲುದೊಡ್ಡ ಸಂದರ್ಭ ಎಂದು ಸ್ಮಿತ್ ಹೇಳಿದ್ದಾರೆ.
ಬಾರ್ಡರ್-ಗಾವಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶಭ್ ಕ್ರೀಡಾಂಗಣದಲ್ಲಿ ಫೆ. 23ರಿಂದ 27ರ ವರೆಗೆ ನಡೆಯಲಿದೆ. ಇದು ಪುಣೆ ಆತಿಥ್ಯ ವಹಿಸಲಿರುವ ಮೊದಲ ಟೆಸ್ಟ್ ಆಗಿದೆ. ದ್ವಿತೀಯ ಟೆಸ್ಟ್ ಮಾ. 4ರಿಂದ 8ರ ವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರಗಲಿದೆ.