Advertisement
ಇದು ನೆಟ್‌ಬ್ಯಾಂಕಿಂಗ್ ಅವಾಂತರದ ಒಂದು ಪ್ರಕರಣ. ತಪ್ಪಾಗಿ ಜಮೆಯಾದ ಈ ಹಣವನ್ನು ಬಿಡುಗಡೆ ಮಾಡದಂತೆ ಹರಿಯಾಣದ ಬ್ಯಾಂಕ್ ಶಾಖೆಯೊಂದಕ್ಕೆ ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶಿಸಿದೆ. ಡಾ| ಪೃಥ್ವಿನಾರಾಯಣ ಪಿ. ಅವರು ನೆಟ್ ಬ್ಯಾಂಕಿಂಗ್ ಮೂಲಕ ತನ್ನ ಪತ್ನಿಯ ಖಾತೆಗೆ 3 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಆದರೆ ಕಣ್ತಪ್ಪಿನಿಂದಾಗಿ ಈ ಹಣ ಹರಿಯಾಣದ ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್‌ನ ಬಿವಾನಿ ಶಾಖೆಯ ಖಾತೆಯೊಂದಕ್ಕೆ ಜಮೆಯಾಗಿತ್ತು. ಮೂರು ದಿನಗಳ ಬಳಿಕ ಈ ವಿಷಯ ಅವರ ಗಮನಕ್ಕೆ ಬಂದಿದ್ದು, ಹಣ ಬಿಡುಗಡೆ ಮಾಡದಂತೆ ಬಿವಾನಿ ಶಾಖೆಗೆ ಮನವಿ ಮಾಡಲಾಗಿತ್ತು. ಅಷ್ಟರಲ್ಲಿ ಈ ಹಣ ತನಗೆ ಸೇರಿದ್ದು ಎಂದು ಬಿವಾನಿ ಶಾಖೆಯ ಗ್ರಾಹಕಿ ಕೂಡ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಹಣ ಬಿಡುಗಡೆ ಮಾಡದಂತೆ ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್‌ನ ಬಿವಾನಿ ಶಾಖಾ ಪ್ರಬಂಧಕರಿಗೆ ಮಧ್ಯಾಂತರ ತಡೆಯಾಜ್ಞೆ ನೀಡಿದೆ. ಪ್ರಕರಣದಲ್ಲಿ ನ್ಯಾಯವಾದಿ ಗಿರೀಶ ಮಳಿ ವಾದಿಸಿದ್ದರು.
ಮಾಣಿ ಸಮೀಪದ ಬರಿಮಾರ್ ನಿವಾಸಿ ಡಾ| ಪೃಥ್ವಿನಾರಾಯಣ ಪಿ. ಅವರು ಪಾಲಕ್ಕಾಡ್ ಐಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕ. ಇಸ್ರೇಲ್‌ನಲ್ಲಿದ್ದ ಸಂದರ್ಭ ಪುತ್ತೂರಿನ ಕರ್ಣಾಟಕ ಬ್ಯಾಂಕ್‌ನಲ್ಲಿ ಎನ್‌ಆರ್‌ಐ ಖಾತೆ ತೆರೆದಿದ್ದರು. ಇದರ ಮೂಲಕ ಹರಿಯಾಣದ ಕರೂರ್ ವೈಶ್ಯ ಬ್ಯಾಂಕ್‌ನ ಸೋನೆಪತ್ ಶಾಖೆಯಲ್ಲಿರುವ ಪತ್ನಿ ಕುಸುಮ್ ಅವರ ಖಾತೆಗೆ 3 ಲಕ್ಷ ರೂ.ಗಳನ್ನು ಜು. 27ರಂದು ವರ್ಗಾವಣೆ ಮಾಡಿದ್ದರು. ಮೂರು ದಿನವಾದರೂ ಹಣ ಬಾರದ್ದನ್ನು ಗಮನಿಸಿದ ಕುಸುಮ್, ಪತಿಗೆ ವಿಷಯ ತಿಳಿಸಿದ್ದರು. ಪರಿಶೀಲಿಸಿದಾಗ ಹಣ ಕಣ್ತಪ್ಪಿನಿಂದ ಹರಿಯಾಣದ ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್‌ನ ಬಿವಾನಿ ಶಾಖೆಯ ಕುಸುಮ್ ಎಂಬವರ ಖಾತೆಗೆ ವರ್ಗಾವಣೆಗೊಂಡಿತ್ತು. ಈರ್ವರ ಹೆಸರು ಒಂದೇ ಆಗಿರುವುದು ಸಮಸ್ಯೆಗೆ ಕಾರಣವಾಗಿತ್ತು. ತತ್‌ಕ್ಷಣ ಬಿವಾನಿ ಶಾಖಾ ಪ್ರಬಂಧಕರಿಗೆ ವಿಷಯ ತಿಳಿಸಲಾಯಿತು. ಅಷ್ಟರಲ್ಲಿ ಹರಿಯಾಣದ ಕುಸುಮ್‌ಗೂ ವಿಷಯ ತಿಳಿದು, ಆಕೆ ಹಣ ತನ್ನದೆಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜು. 31ರಂದು ಪುತ್ತೂರು ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ದಾಖಲೆಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಮಧ್ಯಾಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.