Advertisement

ನೆರೂಲ್‌ ಶ್ರೀ ಶನೀಶ್ವರ ಸೇವಾ ಸಮಿತಿಯ ರಜತ ಸಂಭ್ರಮ

04:38 PM Feb 08, 2017 | |

ನವಿಮುಂಬಯಿ: ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ ಕಾರ್ಯಕ್ರಮಗಳಿಗೂ ಪ್ರಾಮುಖ್ಯತೆ ಕೊಡಬೇಕು. ಆಗ ಮಾತ್ರ ಸಮಾಜದ ಸುಧಾರಣೆಯಾಗುತ್ತದೆ. ಧಾರ್ಮಿಕ ಕ್ಷೇತ್ರಗಳು ಘನತೆಯನ್ನು ತೋರಿಸುವ ಕೇಂದ್ರವಾಗಬಾರದು. ಒಂದು ಕ್ಷೇತ್ರವು ಬೆಳಗಬೇಕಾದರೆ ಅಲ್ಲಿರುವ ದೇವರು ಮಾತ್ರ ಕಾರಣವಾಗಿರುವುದಿಲ್ಲ. ಅದರ ಆಡಳಿತ ಸಮಿತಿಯು ಉತ್ತಮವಾಗಿದ್ದಾಗ ಮಂದಿರದ  ಪಾವಿತ್ರÂತೆ ಹೆಚ್ಚುತ್ತದೆ ಎಂದು ಮಾತೃಭೂಮಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ  ನುಡಿದರು.

Advertisement

ಫೆ. 6ರಂದು ನೆರೂಲ್‌ ಶ್ರೀ ಶನೀಶ್ವರ ಮಂದಿರದಲ್ಲಿ ಜರಗಿದ ಶ್ರೀ ಶನೀಶ್ವರ ಸೇವಾ ಸಮಿತಿಯ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮುಂಬಯಿ ಮಹಾನಗರದಲ್ಲಿ ತುಳು-ಕನ್ನಡಿಗರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ಅತೀ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿರುವುದರಿಂದ ಇಂತಹ ಧಾರ್ಮಿಕ ಕ್ಷೇತ್ರ ಹಾಗೂ ಸಾಮಾಜಿಕ ಸಂಘಟನೆಗಳು ಬೆಳೆಯಲು ಸಾಧ್ಯವಾಗುತ್ತಿದೆ. ನಮ್ಮ ಕರ್ಮಭೂಮಿಯಾದ ಮಹಾರಾಷ್ಟ್ರದ ಸಂಸ್ಕೃತಿಯೊಂದಿಗೆ ಸೇರಿಕೊಂಡು ಇಲ್ಲಿಯ ಆಚಾರ-ವಿಚಾರಗಳಿಗೂ ಗೌರವ ನೀಡುತ್ತಾ, ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು. ನೆರೂಲ್‌ ಶ್ರೀಕ್ಷೇತ್ರದ ಅಭಿವೃದ್ಧಿಯಲ್ಲಿ  ಸಂತೋಷ್‌ ಶೆಟ್ಟಿ ಹಾಗೂ ರಮೇಶ್‌ ಪೂಜಾರಿ ಅವರ ನೇತೃತ್ವ ಹಾಗೂ ಇಲ್ಲಿಯ ಆಡಳಿತ ಸಮಿತಿ, ಸದಸ್ಯರ ಪರಿಶ್ರಮ, ತ್ಯಾಗ ಅಡಗಿದೆ. ಮಂದಿರವು  ಇನ್ನಷ್ಟು ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದರು.

ತುಳು-ಕನ್ನಡಿಗರ ಸೇವೆ ಅಪಾರ
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಮಾತನಾಡಿ, ಮುಂಬಯಿಯಲ್ಲಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತುಳು-ಕನ್ನಡಿಗರ ಸೇವೆ ಅಪಾರವಾಗಿದೆ. ನಾವೆಲ್ಲರೂ ಯಾವುದೇ ಭೇದ-ಭಾವವಿಲ್ಲದೆ ಎಲ್ಲರೊಂದಿಗೆ ಸೇರಿ ಕಾರ್ಯನಿರ್ವಹಿಸುವುದರಿಂದ ನಮ್ಮ ಯೋಜನೆಗಳು ಯಶಸನ್ನು ಕಾಣುತ್ತಿವೆ. ಈ ಮಂದಿರದ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿದ್ದು ಈ ಕಾರಣದಿಂದಲೇ ಪವಿತ್ರ ಕ್ಷೇತ್ರವಾಗಿ ಬೆಳೆದಿದೆ. ಇಲ್ಲಿನ ರಥೋತ್ಸವವು ಊರಿನ ರಥೋತ್ಸವವನ್ನು ನೆನಪಿಸುತ್ತಿದ್ದು, ಇಲ್ಲಿಯ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ನುಡಿದರು.

ಫೆಡರೇಷನ್‌ ಆಫ್‌ ಹೊಟೇಲ್‌ ಓನರ್‌ ಅಸೋಸಿಯೇಶನ್‌ ಮಹಾರಾಷ್ಟ್ರ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಾತನಾಡಿ, ನಾವು ಇನ್ನೊಬ್ಬರಿಗೆ ಕೆಡುಕನ್ನು ಬಯಸದೆ ಒಬ್ಬರನ್ನೊಬ್ಬರು ಅರಿತುಕೊಂಡು ಜೀವನ ಸಾಗಿಸಿದಾಗ ಮಾತ್ರ ನಮ್ಮ  ಕಾರ್ಯವು ಯಶಸ್ವಿಯಾಗಲು ಸಾಧ್ಯ. ದೇವಸ್ಥಾನಗಳು ನಮಗೆ ಶಾಂತಿನೀಡುವ ಕೇಂದ್ರಗಳಾಗಬೇಕು. ನೆರೂಲ್‌ ಶ್ರೀ ಶನೀಶ್ವರ ಕ್ಷೇತ್ರದ ದರ್ಶನಗೈದರೆ ನಮ್ಮ ಮನಸಿಗೆ ಶಾಂತಿ ದೊರೆಯುತ್ತದೆ ಎಂದರು.

ಇನ್ನೋರ್ವ ಅತಿಥಿ ಉದ್ಯಮಿ ಶಿವರಾಮ ಜಿ. ಶೆಟ್ಟಿ ಅವರು ಮಾತನಾಡಿ, ಯಾವುದೇ ರೀತಿಯ ಸ್ವಾರ್ಥ ಹಾಗೂ ಫಲಾನುಭವ ಇಲ್ಲದೆ ಸಮಾಜ ಸೇವೆಯಲ್ಲಿ ತೊಡಗಿದಾಗ ಅದರ ಪ್ರತಿಫಲವು ನಮಗೆ ದೊರೆಯುತ್ತದೆ. ಶ್ರೀಕ್ಷೇತ್ರದಲ್ಲಿ ಸಂತೋಷ್‌ ಶೆಟ್ಟಿ ಹಾಗೂ ರಮೇಶ್‌ ಪೂಜಾರಿ ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಕರ್ತರ ಪಡೆಯು ಕಾರ್ಯನಿರ್ವಹಿಸುತ್ತಿದ್ದು ಈ ಕ್ಷೇತ್ರವು ದಿನೇ ದಿನೇ ಬೆಳಗಲು ಕಾರಣವಾಯಿತು. ಇಲ್ಲಿ ಭೇದ-ಭಾವವನ್ನು ಮರೆತು ಎಲ್ಲರನ್ನು ಒಂದಾಗಿ ಕಾಣುವ ಗುಣವಿರುವುದರಿಂದ ಈ ಕ್ಷೇತ್ರದ ಪ್ರಾಮುಖ್ಯತೆ ಹೆಚ್ಚಿದೆ ಎಂದು ಹೇಳಿದರು.

Advertisement

ಇದೇ ಸಂದರ್ಭದಲ್ಲಿ ಶನೀಶ್ವರ ಸೇವಾ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ದಂಪತಿಯನ್ನು ಸಮ್ಮಾನಿಸಲಾಯಿತು. ಸಮಿತಿಯ ಸ್ಥಾಪಕ ಸದಸ್ಯರುಗಳನ್ನು ಗೌರವಿಸಲಾಯಿತು. ವಿಶ್ವಸ್ಥ ಅನಿಲ್‌ ಕುಮಾರ್‌ ಹೆಗ್ಡೆ ಸಮಿತಿಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಪ್ರಭಾಕರ ಹೆಗ್ಡೆ ಸಮ್ಮಾನಿತರ ಹೆಸರು ವಾಚಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಸಹಕರಿಸಿದರು. ಜತೆ ಕೋಶಾಧಿಕಾರಿ ಕರುಣಾಕರ ಎಸ್‌. ಆಳ್ವ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸದಸ್ಯರು, ಮಕ್ಕಳಿಂದ ನೃತ್ಯ ವೈಭವ ಮತ್ತು ಅನಿಲ್‌ ಕುಮಾರ್‌ ಹೆಗ್ಡೆ ಅವರ ನಿರ್ದೇಶನದಲ್ಲಿ ನಾಗರಾಜ ಗುರುಪುರ ರಚಿಸಿರುವ ಯಕ್ಷನಿಲಯ ನಾಟಕ ಪ್ರದರ್ಶನಗೊಂಡಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಗೋಪಾಲ್‌ ವೈ. ಶೆಟ್ಟಿ, ಗೌರವ ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ವಿಶ್ವಸ್ಥರಾದ ಜಯಕರ ಬಿ. ಪೂಜಾರಿ, ಎನ್‌. ಡಿ. ಶೆಣೈ,  ಕೃಷ್ಣ ಎಂ. ಪೂಜಾರಿ, ದಾಮೋದರ ಶೆಟ್ಟಿ, ದಯಾನಂದ ಶೆಟ್ಟಿ, ತಾರನಾಥ ಶೆಟ್ಟಿ, ಮಹಿಳಾ ವಿಭಾಗದ ತಾರಾ ಬಂಗೇರ ಮೊದಲಾದವರು ಉಪಸ್ಥಿರಿದ್ದರು. ಪೂಜಾ ಸಮಿತಿ, ಮಹಿಳಾ ವಿಭಾಗದವರು ಸಹಕರಿಸಿದರು.

ಈ ದೇವಸ್ಥಾನ ನಿರ್ಮಾಣ ನಮ್ಮ ಕನಸಾಗಿತ್ತು. ಇದಕ್ಕೆ ಅನೇಕ ಮಹಾನೀಯರ ಸಹಕಾರವು ನಮಗೆ ದೊರೆತಿದೆ. ಸಂತೋಷ್‌ ಶೆಟ್ಟಿ ಅವರ ಪರಿಶ್ರಮ ಹಾಗೂ ಅಂದಿನ ಕಾರ್ಯಕರ್ತರ ನಿಷ್ಠಾವಂತ ಸೇವೆಯೇ ಈ ಭವ್ಯ ದೇಗುಲ ನಿರ್ಮಾಣವಾಗಲು ಸಾಧ್ಯವಾಯಿತು. ಇಂದು ನೆರೂಲ್‌ನ
ರಾಜನೆಂದೇ ಪ್ರಸಿದ್ಧಿಯನ್ನು ಶ್ರೀ ಶನೀಶ್ವರ ದೇವರು ಪಡೆದಿರುವುದು  ಹೆಮ್ಮೆಯ ವಿಷಯವಾಗಿದೆ. ಇಂದು ನನಗೆ ದೊರೆತ ಸಮ್ಮಾನ, ನನ್ನ ಮನೆಯ ಸಮ್ಮಾನವಾಗಿದೆ. ಇದನ್ನು ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಮಹಾನೀಯರಿಗೂ, ಗುರುಹಿರಿಯರಿಗೂ ಅರ್ಪಿಸುತ್ತಿದ್ದೇನೆ 
– ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ (ಸಮ್ಮಾನಿತರು).

ಕಳೆದ 25 ವರ್ಷಗಳಿಂದ ಈ ಕ್ಷೇತ್ರದ ಮೂಲಕ ನಾವು ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದೇವೆ. ಈ ಪ್ರೀತಿ, ವಿಶ್ವಾಸದಿಂದಲೇ ಇಂತಹ ಭವ್ಯ ದೇಗುಲ ನಿರ್ಮಾಣವಾಗಲು ಸಾಧ್ಯವಾಯಿತು. ಇಲ್ಲಿ ಎಲ್ಲರೂ ಸಮಾನರು. ಯಾವುದೇ ಭೇದಭಾವ ಇಲ್ಲದೆ ದೇವರ ಸೇವೆ ಮಾಡಲಾಗುತ್ತಿದೆ. ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ಜನ ಸೇವೆಯೇ ಜನಾದ‌ìನ ಸೇವೆಯೆಂದು ಮನಗಂಡು ಶ್ರೀಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಈ ಕ್ಷೇತ್ರವು ದಿನೇ ದಿನೇ ಬೆಳಗುತ್ತಾ ಭಕ್ತರ ಸಂಕಷ್ಟಗಳನ್ನು ದೂರಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಜಾತಿ ಭೇದ ಮರೆತು ಪ್ರೀತಿ, ವಿಶ್ವಾಸವನ್ನು ತೋರಿದರೆ ದೇವರ ಆಶೀರ್ವಾದ ನಮಗೆ ಸದಾ ಇರುತ್ತದೆ. ಕ್ಷೇತ್ರ ಬೆಳಗುವಲ್ಲಿ ಸಹಕರಿಸಿದ ಎಲ್ಲರನ್ನು ಗೌರವಿಸಲು ಸಂತೋಷವಾಗುತ್ತದೆ 
– ಸಂತೋಷ್‌ ಶೆಟ್ಟಿ (ಕಾರ್ಯಾಧ್ಯಕ್ಷರು : ಶ್ರೀ ಶನೀಶ್ವರ ಮಂದಿರ ನೆರೂಲ್‌).

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next