ಆನೇಕಲ್: ಕಳೆದ ಮೂರು ವರ್ಷಗಳು ಕೊರೊನಾ ಹಿನ್ನೆಲೆ ನೆಲಕ್ಕಚ್ಚಿದ್ದ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಆದಾಯ, ಈ ವರ್ಷ ದಾಖಲೆ ಬರೆದಿದೆ. ಬರೋಬ್ಬರಿ 53 ಕೋಟಿ ಕಲೆಕ್ಷನ್ ಮಾಡುವ ಮೂಲಕ ಪ್ರಮುಖ ಪ್ರವಾಸಿ ತಾಣಗಳಿಗೆ ಪೈಪೋಟಿಯಲ್ಲಿ ಮುಂದಿದೆ.
ತಾಲೂಕಿನ ಬೆಂಗಳೂರು ಬನ್ನೇರುಘಟ್ಟ ಬಯೋ ಲಾಜಿಕಲ್ ಪಾರ್ಕ್ 2020-21 ರಲ್ಲಿ ಅತಿ ಹೆಚ್ಚು ನಷ್ಟ ಹೊಂದಿತ್ತು, 2022 -23ನೇ ಸಾಲಿನಲ್ಲಿ 53 ಕೋಟಿ ಸಂಗ್ರಹ ಮಾಡುವ ಮೂಲಕ ಮತ್ತೆ ಪುಟಿದೆದ್ದಿದೆ. ಕಳೆದೆರಡು ವರ್ಷ ಪ್ರಾಣಿಗಳಿಗೆ ಊಟ ಉಪಚಾರಕ್ಕೂ ಕಷ್ಟ ಅನುಭವಿಸಿದ್ದ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಆಗ ಪ್ರಾಣಿಗಳನ್ನು ದತ್ತು ತೆಗೆದು ಕೊಳ್ಳುವಂತೆ ಪ್ರಾಣಿ ಪ್ರಿಯರಲ್ಲಿ ಮನವಿ ಮಾಡಿತ್ತು. ಆದರೆ, ಈಗ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ತನ್ನ ಆದಾಯ ಮೂಲ ವೃದ್ಧಿಸಿಕೊಂಡಿದೆ.
ಆದಾಯದಲ್ಲಿ ಪ್ರಗತಿ: ಸದಾ ವಿಭಿನ್ನತೆ ಹಾಗೂ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಒಂದಲ್ಲ ಒಂದು ರೀತಿಯಲ್ಲಿ ಭಿನ್ನ ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಈ ಬಾರಿ ಆದಾಯದಲ್ಲಿ ಪ್ರಗತಿ ಕಂಡಿರುವುದು ಪಾರ್ಕಿನ ಸಿಬ್ಬಂದಿಗೂ ಖುಷಿ ತಂದಿದೆ. ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ರಾಜ್ಯದ ಫ್ರಂಟ್ ಲೈನ್ ಪ್ರವಾಸಿ ತಾಣಕ್ಕೂ ಕಡಿಮೆ ಇಲ್ಲ ಅನ್ನೋ ದನ್ನು ತನ್ನ ಹಣ ಸಂಗ್ರಹದ ಮೂಲಕ ಸಾಬೀತು ಪಡಿಸಿದೆ. ಕೊರೊನಾ ಬಳಿಕ ಅಂದರೆ 2022-23ನೇ ವರ್ಷದಲ್ಲಿ ಬರೊಬ್ಬರಿ 2ಲಕ್ಷ, 22 ಸಾವಿರದ 993 ಪ್ರವಾಸಿಗರು ಭೇಟಿ ಕೊಟ್ಟಿದ್ದು, 53 ಕೋಟಿ 89 ಲಕ್ಷ 75 ಸಾವಿರದಷ್ಟು ಹಣ ಸಂಗ್ರಹ ಆಗಿದೆ.
20 ಕೋಟಿಗೂ ಹೆಚ್ಚು ಆದಾಯ: 2019-20ರಲ್ಲಿ 31ಕೋಟಿ 99ಲಕ್ಷ, 2020-21 ಬರೀ 15 ಕೋಟಿ ಕಲೆಕ್ಷನ್ ಆಗಿತ್ತು, ಈ ಬಾರಿ 20ಕೋಟಿಗೂ ಹೆಚ್ಚು ಆದಾಯ ಗಿಟ್ಟಿಸಿ ಕೊಳ್ಳುವ ಮೂಲಕ ದಾಖಲೆ ಸಂಗ್ರಹ ಮಾಡಿದೆ.
ಕೋವಿಡ್ ವೇಳೆ 2 ವರ್ಷ ಆರ್ಥಿಕ ಸಂಕಷ್ಟ : ಕೋವಿಡ್ 19ನಿಂದ ಉದ್ಯಾನವನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು, ಇಡೀ ಉದ್ಯಾನವನದ ಇತಿಹಾಸದಲ್ಲಿ ಆ ಎರಡು ವರ್ಷ ಕರಾಳ ದಿನಗಳಂತಿತ್ತು. ಅದಾದ ಬಳಿಕ ನಿಧಾನವಾಗಿ ಪ್ರವಾಸಿಗರು ಬರ ತೊಡಗಿದರು. ಇದರಿಂದ ಈ ವರ್ಷ ಅತಿ ಹೆಚ್ಚು ಆದಾಯ ಸಂಗ್ರಹವಾಗಿರುವು ದರಿಂದ ಪ್ರವಾಸಿಗರಿಗೆ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಪನ್ವಾರ್ ತಿಳಿಸಿದರು.
ಪಿಕ್‌ನಿಕ್‌ಗೆ ಹೇಳಿಮಾಡಿಸಿದ ಜಾಗ: ಬೆಂಗಳೂರಿನಿಂದ ಕೇವಲ 30 ಕಿ.ಮಿ ದೂರದಲ್ಲಿ ರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಒಂದು ದಿನದ ಪಿಕ್‌ನಿಕ್‌ಗಾಗಿ ಹೇಳಿ ಮಾಡಿಸಿದ ಜಾಗ, ಹೀಗಾಗಿ ಬಹುತೇಕ ಕುಟುಂಬಸ್ಥರು ವೀಕೆಂಡ್ ಇಲ್ಲಿ ಕಾಲ ಕಳೆಯಲು ಬಯಸುತ್ತಾರೆ, ಹುಲಿ, ಸಿಂಹ, ಆನೆ, ಕರಡಿ ಸಫಾರಿ ಇದ್ದು, ಜೂ ಕೂಡ ಇರೋದ್ರಿಂದ ಇದು ಮಕ್ಕಳ ಫೇವರೇಟ್ ಜಾಗ ಅನಿಸಿದೆ. ಬೇಸಿಗೆ ಕಾಲದಲ್ಲಿ ಇನ್ನಷ್ಟು ಜನ ಇಲ್ಲಿ ಸಮಯ ಕಳೆಯಲು ಬರುವುದರಿಂದ ಈ ವರ್ಷ ಕೂಡ ಇನ್ನಷ್ಟು ಮೊತ್ತದ ಸಂಗ್ರಹ ಆಗಬಹುದೆಂಬ ನಿರೀಕ್ಷೆಯಲ್ಲಿದೆ.