Advertisement

ನರಿಂಗಾನ: ಬತ್ತಿದ ಕೊಳವೆಬಾವಿ; ಟ್ಯಾಂಕರ್‌ ನೀರೇ ಆಶ್ರಯ

06:18 PM Apr 27, 2019 | Suhan S |

 

Advertisement

ಬಂಟ್ವಾಳ, ಎ. 26: ಜಿಲ್ಲೆಯ ಅತ್ಯಂತ ಹೆಚ್ಚು ಡ್ರೈ ಏರಿಯಾ ಎಂದು ಗುರುತಿಸಲ್ಪಟ್ಟಿರುವ ಕರ್ನಾಟಕ- ಕೇರಳ ಗಡಿ ಗ್ರಾಮ ಬಂಟ್ವಾಳ ತಾ|ನ ನರಿಂಗಾನ ಗ್ರಾ.ಪಂ.ವ್ಯಾಪ್ತಿಯಲ್ಲಿ ನೀರಿನದ್ದೇ ಸಮಸ್ಯೆ. ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನತೆ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ನೀರಿಗಾಗಿ ಕೊಳವೆಬಾವಿ ತೆಗೆದರೂ ಪ್ರಯೋಜನ ಇಲ್ಲದ ಸ್ಥಿತಿ ಇದೆ.

ಗ್ರಾಮದಲ್ಲಿ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ಸದ್ಯಕ್ಕೆ ಟ್ಯಾಂಕರ್‌ಗಳ ಮೂಲಕ ನೀರನ್ನು ತಂದು ಟ್ಯಾಂಕ್‌ಗಳಿಗೆ ಹಾಕಿ ಅದನ್ನು ಪೈಪಿನ ಮೂಲಕ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಸೀಮಿತ ಬಜೆಟ್‌ನಲ್ಲಿ ಅದನ್ನೂ ಪೂರೈಸುವುದು ಗ್ರಾ.ಪಂ.ಗೆ ಹೊರೆಯಾಗಿ ಪರಿಣಮಿಸಿದೆ.

ಗ್ರಾ.ಪಂ. ಒಟ್ಟು 6500 ಜನಸಂಖ್ಯೆಯಲ್ಲಿ 4 ಸಾವಿರದಷ್ಟು ಮಂದಿ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಗ್ರಾ.ಪಂ.ಮಾಹಿತಿ ನೀಡುತ್ತಿದೆ. ಗ್ರಾ.ಪಂ.ನ ಕಲ್ಮಂಜ ಭಾಗದಲ್ಲಿ 2-3 ಕೊಳವೆ ಬಾವಿಗಳು ಬತ್ತಿ ಹೋಗಿವೆ. ಆಳ್ವರಬೆಟ್ಟು ಪ್ರದೇಶ ದಲ್ಲಿ 2 ಕೊಳವೆಬಾವಿಗಳು ಬತ್ತಿವೆ. ಜತೆಗೆ ಹೊಸ ಕೊಳವೆಬಾವಿ ಕೊರೆದರೂ ಪ್ರಯೋಜನ ಆಗುತ್ತಿಲ್ಲ.

ಗ್ರಾ.ಪಂ. ವ್ಯಾಪ್ತಿಗೆ ಕಿನ್ಯಾದಿಂದ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ನೇರವಾಗಿ ಟ್ಯಾಂಕ್‌ಗಳಿಗೆ ನೀಡುವುದರಿಂದ ನೀರು ಪೋಲು ಸಾಧ್ಯತೆ ಕಡಿಮೆ ಇದೆ. ಆಳ್ವರಬೆಟ್ಟು ಭಾಗದಲ್ಲಿ ನೀರನ್ನು ಟ್ಯಾಂಕರ್‌ ಮೂಲಕ ನೇರವಾಗಿ ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ಮನೆಯವರ ಟ್ಯಾಂಕ್‌ಗೆ ನೀರು ಪೂರೈಕೆ ಮಾಡುತ್ತಾರೆ.

Advertisement

ಗ್ರಾಮ ಪಂಚಾಯತ್‌ನ ನೀರಿನ ಸಮಸ್ಯೆ ನೀಗಿಸುವುದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಹರೇಕಳ-ಪಾವೂರು ಭಾಗದಲ್ಲಿ ನೇತ್ರಾವತಿ ನದಿಗೆ ಕಿರು ಅಣೆಕಟ್ಟು ನಿರ್ಮಿಸಿ, ಅದರ ನೀರನ್ನು ಗ್ರಾಮ ಪಂಚಾಯತ್‌ನ ಭಾಗಕ್ಕೆ ತಂದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು. ಆದರೆ ಅದು ಇಂದು-ನಾಳೆ ಆಗುವ ಯೋಜನೆಯಲ್ಲ. ಪ್ರಸ್ತುತ ಗ್ರಾಮ ಪಂಚಾಯತ್‌ ಬಂಟ್ವಾಳ ತಾಲೂಕಿಗೆ ಸೇರಿದರೂ ಅದು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಹಾಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ. ಖಾದರ್‌ ಅವರು ಈ ಭಾಗದ ಶಾಸಕರಾಗಿದ್ದು, ಡ್ಯಾಮ್‌ನ ಪ್ರಸ್ತಾವವೂ ಅವರ ಮುಂದಿದೆ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ.

 

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next