Advertisement

ಗುಳೆ ತಪ್ಪಿಸಲು ನರೇಗಾ ವಿಫ‌ಲ

11:02 AM Jan 30, 2019 | |

ವಿಜಯಪುರ: ಶಾಶ್ವತ ಬರ ಪೀಡಿತ ಎಂಬ ಅಪಕೀರ್ತಿ ಸಂಪಾದಿಸಿರುವ ವಿಜಯಪುರ ಜಿಲ್ಲೆಯಲ್ಲಿ ಉದ್ಯೋಗ ಇಲ್ಲದೇ ಜನ ಗುಳೆ ಹೋಗಿದ್ದಾರೆ. ಗ್ರಾಮೀಣ ಪ್ರದೇಶದ ಗುಳೆ ತಡೆಯಲೆಂದೇ ನರೇಗಾ ಯೋಜನೆ ಜಾರಿಯಾಗಿ ದಶಕ ಕಳೆದರೂ ಜಿಲ್ಲೆಯ ಗುಳೆ ಪರಿಸ್ಥಿತಿ ತಪ್ಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ಗ್ರಾಮಗಳು ಜನ ಮುಕ್ತವಾಗಿದ್ದು ಬೀಗ ಹಾಕಿದ ಮನೆಗಳು, ಮುಳ್ಳು ಬೇಲಿ ದರ್ಶನ ನೀಡುತ್ತಿವೆ.

Advertisement

ವಿಜಯಪುರ ಜಿಲ್ಲೆಯಲ್ಲಿ 213 ಗ್ರಾಪಂಗಳಿದ್ದು, ನರೇಗಾ ಯೋಜನೆಯಲ್ಲಿ 21,22,210 ಕಾರ್ಮಿಕರಿಗೆ ನರೇಗಾ ಕಾರ್ಡ್‌ ವಿತರಿಸಲಾಗಿದೆ. ಗುಳೆ ತಪ್ಪಿಸಲು ವಿವಿಧ ಗ್ರಾಪಂಗಳಲ್ಲಿ 32,238 ಕಾಮಗಾರಿ ಕೈಗೆತ್ತಿಕೊಂಡಿದ್ದರೂ ಪ್ರಗತಿಯಲ್ಲಿರುವ 24 ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆ 28,272 ಮಾತ್ರ ಎಂದು ಸರ್ಕಾರಿ ದಾಖಲೆ ಹೇಳುತ್ತದೆ. ಅಲ್ಲಿಗೆ ಸುಮಾರು 2 ಲಕ್ಷ ಕಾರ್ಮಿಕರು ಸದರಿ ಯೋಜನೆಯಿಂದ ದೂರವೇ ಉಳಿದಿದ್ದಾರೆ.

ಪರಿಣಾಮ ಸರ್ಕಾದ ನರೇಗಾ ಯೋಜನೆಯಿಂದ ಜಿಲ್ಲೆಯ ಗ್ರಾಮೀಣ ಜನರು ಉದ್ಯೋಗ ಅರಸಿ ಊರೂರು ಆಲೆಯುವ ಗುಳೆ ಎಂಬ ದುಸ್ಥಿತಿಯಿಂದ ಗ್ರಾಮೀಣ ಜನರಿಗೆ ಮುಕ್ತಿ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳ ಮನೆಗಳು ಬೀಗ ಹಾಕಿ, ಮುಳ್ಳು ಬೇಲಿ ಬಡಿದುಕೊಂಡಿವೆ.

ಇನ್ನು ಸರ್ಕಾರಿ ಯೋಜನೆಯಲ್ಲಿ ವಾರ್ಷಿಕ ಪ್ರತಿ ಕುಟುಂಬಕ್ಕೆ ಕೇವಲ 100 ದಿನಗಳು ಮಾತ್ರ ಉದ್ಯೋಗ ಕೊಡಲು ಅವಕಾಶ ಇದ್ದು, ಬರ ಹಿನ್ನೆಲೆಯಲ್ಲಿ ಈ ಪ್ರಮಾಣವನ್ನು 150 ದಿನಗಳಿಗೆ ಹೆಚ್ಚಿಸಲಾಗಿದೆ. ಆದರೆ ಇತರೆ 215 ದಿನಗಳಲ್ಲಿ ಕೂಲಿ ಸಿಗದೇ ಕುಟುಂಬ ಗುಳೆ ಹೋಗುವುದು ಅನಿವಾರ್ಯತೆ ತಪ್ಪಿಸಲು ಸಾಧ್ವವಾಗುತ್ತಿಲ್ಲ. ಸರ್ಕಾರ ಊರಲ್ಲೆ 365 ದಿನ ನಿರಂತರ ಉದ್ಯೋಗ ನೀಡಿದರೆ ನಾಳೆಯೇ ಊರಿಗೆ ಬರುತ್ತೇವೆ ಎನ್ನುತ್ತಾರೆ ಕಾರ್ಮಿಕರು.

ಇದಲ್ಲದೇ ಸದರಿ ಯೋಜನೆಯಲ್ಲಿ ಓರ್ವ ಕಾರ್ಮಿಕನಿಗೆ ದಿನಗೂಲಿಯಾಗಿ 249 ರೂ. ಹಾಗೂ ಕೆಲಸಕ್ಕೆ ಬಳಸುವ ಸಲಿಕೆ-ಗುದ್ದಲಿಯಂಥ ಸಾಧನಗಳ ದುರಸ್ತಿಗೆ 10 ರೂ. ನೀಡಲಾಗುತ್ತಿದೆ. ಆದರೆ ಖಾಸಗಿ ವ್ಯವಸ್ಥೆಯಲ್ಲಿ ಓರ್ವ ಕಾರ್ಮಿಕ ದಿನಕ್ಕೆ ಕನಿಷ್ಠ 500-600 ರೂ. ದುಡಿಯುತ್ತಿದ್ದು, ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿದರೆ ಕನಿಷ್ಠ 1 ಸಾವಿರ ರೂ. ಕೂಲಿ ತರುತ್ತಾರೆ. ಹೀಗಾಗಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಕಾರ್ಮಿಕರು ಆಸಕ್ತಿ ತೋರುತ್ತಿಲ್ಲ. ಖಾಸಗಿ ವ್ಯವಸ್ಥೆಯಲ್ಲಿ ಅನ್ಯ ರಾಜ್ಯಗಳಿಗೆ ಗುಳೆ ಹೋಗಿ ದುಡಿಯುವ ಕಾರ್ಮಿಕರಿಗೆ ಪ್ರತಿ ದಿನ ಕೂಲಿ ದೊರೆಯುತ್ತದೆ. ಜಿಲ್ಲೆಯ ಮಟ್ಟಿಗೆ ಕಾರ್ಮಿಕರನ್ನು ಪೂರೈಕೆ ಮಾಡುವುದಕ್ಕಾಗಿಯೇ ನಾಯಕರಿದ್ದಾರೆ. ಮಗದುಮ ಹೆಸರಿನ ಈ ನಾಯಕ ಗುಳೆ ಹೋಗಲು ಇಚ್ಛಿಸುವ ಕಾರ್ಮಿಕರ ಕುಟುಂಬಕ್ಕೆ ಮುಂಗಡವಾಗಿ ಲಕ್ಷಾಂತರ ಹಣ ನೀಡುವ ಜೊತೆಗೆ, ವರ್ಷ ಪೂರ್ತಿ ಉದ್ಯೋಗ ನೀಡುವ ಮೌಖೀಕ ಒಪ್ಪಂದವೂ ಮಾಡಿಕೊಂಡಿರುತ್ತಾನೆ.

Advertisement

ಆದರೆ ಸರ್ಕಾರಿ ವ್ಯವಸ್ಥೆಯ ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ದುಡಿದ ಕೂಲಿ ಹಣ ಪಡೆಯಲು 15 ದಿನ ಕಾಯಕಬೇಕು. ಹಲವು ಸಂದರ್ಭಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ತಿಂಗಳಾದರೂ ಕೂಲಿ ಹಣ ಪಾವತಿ ಆಗದ ಕಾರಣ ಕಾರ್ಮಿಕರು ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಬರಲು ನಿರಾಸಕ್ತಿ ತೋರುತ್ತಿದ್ದಾರೆ.

ವರ್ಷ ಪೂರ್ತಿ ಉದ್ಯೋಗ, ಸರ್ಕಾರಿ ಕೆಲಸಕ್ಕಿಂತ ದ್ವಿಗುಣ ಕೂಲಿ, ಪ್ರತಿ ದಿನ ಕೂಲಿ ವಿತರಣೆ ಹಾಗೂ ಮುಂಗಡವಾಗಿ ಲಕ್ಷಾಂತರ ರೂ. ದೊರೆಯುವ ಕಾರಣ ಕಾರ್ಮಿಕರು ನರೇಗಾ ಯೋಜನೆಗೆ ಆಸಕ್ತಿ ತೋರುತ್ತಿಲ್ಲ. ಭೀಕರ ಬರ ಪರಿಸ್ಥಿತಿಯಲ್ಲಿ ಸರ್ಕಾರ ಗುಳೆ ತಪ್ಪಿಸಲು ನರೇಗಾ ಯೋಜನೆ ಅನುಷ್ಠಾನ ಮಾಡಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದರೂ ವಾಸ್ತವಿಕ ಪರಿಸ್ಥಿತಿ ಗುರಿ ಸಾಧನೆಗೆ ತೊಡಕಾಗಿದೆ. ಇಂಥ ಸ್ಥಿತಿಯಲ್ಲಿ ಅಧಿಕಾರಿಗಳು ಒತ್ತಡಕ್ಕೆ ಸಿಲುಕಿ ಕಾಗದದ ದಾಖಲೆಯಲ್ಲಿ ಪ್ರಗತಿ ಸಾಧಿಸಲು ಮುಂದಾಗುತ್ತಿದ್ದಾರೆ.

ಪರಿಣಾಮ ಜಿಲ್ಲೆಗೆ ಮಾತ್ರ ಗುಳೆ ಪರಿಸ್ಥಿತಿಯಿಂದ ಮುಕ್ತಿ ದೊರೆಯುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ನರೇಗಾ ಯೋಜನೆಯಲ್ಲಿರುವ ಈ ವಾಸ್ತವಿಕ ತೊಡಕುಗಳನ್ನು ನಿವಾರಿಸಿ, ವರ್ಷ ಪೂರ್ತಿ ಕುಟುಂಬದ ಬದಲಾಗಿ ಎಲ್ಲರಿಗೂ ಕೆಲಸ ಕೊಡಲು ನಿಯಮ ಸಡಿಲಿಕೆ ಮಾಡಬೇಕಿದೆ. ಪ್ರತಿ ಕಾರ್ಮಿಕರಿಗೆ ಆಯಾ ದಿನವೇ  ಕೂಲಿ ದೊರಕಿಸಿ ಕೊಡಲು ಯೋಜನೆಯ ನಿಯಮ ಸಡಿಲಿಸಬೇಕು ಎಂಬೆ ಬೇಡಿಕೆ ಹೆಚ್ಚಿದೆ.

ಸರ್ಕಾರ ಹಾಗೂ ಅಧಿಕಾರಿಗಳು ಊರಲ್ಲೇ ಕೆಲಸ ಕೊಟ್ಟಿದ್ದರೆ ನಾವೇಕೆ ಹುಟ್ಟಿದೂರು ಬಿಟ್ಟು ನೂರಾರು ಮೈಲಿ ದೂರ ದುಡಿಯಲು ಬರಬೇಕಿತ್ತು. ನಿತ್ಯ ದುಡಿದ ಕೂಲಿ ತರದಿದ್ದರೆ ನಮ್ಮ ಮನೆ ನಡೆಯುವುದಿಲ್ಲ. ಕೆಲಸ ಕೊಡುತ್ತೇವೆ ಎಂದು ಅಧಿಕಾರಿಗಳು ಸುಳ್ಳು ಹೇಳುವುದು ಬಿಡಬೇಕು. ವರ್ಷ ಪೂರ್ತಿ ಕೆಲಸ ಕೊಟ್ಟು, 3-4 ದಿನಕ್ಕೆ ಕೂಲಿ ವಿತರಿಸುವ ಖಚಿತ ಭರವಸೆ ನೀಡಿದರೆ ನಾಳೆಯೇ ಕುಟುಂಬ ಸಮೇತ ಊರಿಗೆ ಮರಳುತ್ತೇನೆ.
•ಕಾಳು ಮನ್ನು ರಾಠೊಡ , ಸ್ವಗ್ರಾಮ-ಅಲ್ಲಾಪೂರ ತಾಂಡೆ ಗುಳೆ ಗ್ರಾಮ-ರರಾಸೋಡೆ, ಕೊಲ್ಲಾಪುರ

ಜಿಲ್ಲೆಯಲ್ಲಿ ಭೀಕರ ಬರ ಇರುವ ಕಾರಣ ಕುಟುಂಬಕ್ಕೆ 100 ದಿನ ಕೂಲಿ ಕೊಡುವ ಮಿತಿಯನ್ನು 150ಕ್ಕೆ ಹೆಚ್ಚಿಸಲಾಗಿದೆ. ಕೂಲಿ ವಿತರಣೆಯನ್ನು 15 ದಿನಕ್ಕೆ ಬದಲಾಗಿ 8 ದಿನಕ್ಕೆ ಇಳಿಸಲಾಗಿದೆ. ಇದರ ಹೊರತಾಗಿ ಬರ ಪೀಡಿತ ಈ ಜಿಲ್ಲೆಗೆ 365 ದಿನ ಕೆಲಸ ಕೊಡುವ, ದಿನ ಕೂಲಿ ಹೆಚ್ಚಿಸುವ ಹಾಗೂ ದಿನವೂ ಕೂಲಿ ಕೊಡುವ ಅಧಿಕಾರ ನಮಗಿಲ್ಲ.
•ವಿಕಾಸ ಸುರಳಕರ ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next