Advertisement

ನೆರೆ ನೀರು ಅವಾಂತರ, ಕುಡಿಯುವ ನೀರಿಗೆ ಬರ

01:56 PM Jul 08, 2023 | Team Udayavani |

ಮಹಾನಗರ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಎದುರಾದ ನೆರೆ ನೀರು ನಗರದ ಕೆಲವು ಕಡೆಗಳಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ!

Advertisement

ನಗರದ ಬಹುತೇಕ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗಿದೆ. ಹೀಗಾಗಿ ಬಾವಿ, ನೀರಿನ ಸಂಪ್‌, ಬೋರ್‌ವೆಲ್‌ ನಂಬಿಕೊಂಡ ನಗರದ ಕೆಲವು ಮಂದಿ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಜತೆಗೆ ಬೆಂಗ್ರೆ, ಕೊಟ್ಟಾರ, ಜಪ್ಪಿನಮೊಗರು ಸಹಿತ ವಿವಿಧ ಕಡೆಗಳಲ್ಲಿ ಹಾವಿನ ಕಾಟ ಶುರುವಾಗಿದೆ. ನೆರೆ ನೀರಿನಲ್ಲಿ ಹಾವು ಬರುತ್ತಿದೆ ಎಂದು ಕೆಲವರು ದೂರುತ್ತಿದ್ದಾರೆ.

ಬಾವಿಗೆ ಕೆಸರು ನೀರು ನುಗ್ಗಿ ಸಮಸ್ಯೆ
ನಗರದ ಜಪ್ಪಿನಮೊಗರು, ಬೆಂಗ್ರೆ, ಕುದ್ರೋಳಿ, ಕೊಡಿಯಾಲಬೈಲು, ಸುಭಾಶ್‌ ನಗರ, ಕೊಟ್ಟಾರಚೌಕಿ ಸಹಿತ ಕೆಲವು ಕಡೆಯಲ್ಲಿ ನೆರೆನೀರು ರಸ್ತೆ-ಮನೆ ಮುಂಭಾಗಕ್ಕೆ ನುಗ್ಗಿ ಸಮಸ್ಯೆ ಸೃಷ್ಟಿಯಾಗಿತ್ತು. ಈ ಪೈಕಿ ಎತ್ತರದ ಕಟ್ಟೆ ಇಲ್ಲದ ಕೆಲವು ಬಾವಿಗಳಿಗೂ ನೀರು ವ್ಯಾಪಿಸಿತ್ತು. ಸಂಪ್‌ನ ಒಳಗೂ ನುಗ್ಗಿದೆ. ಇದರಿಂದಾಗಿ ಬಾವಿ, ಸಂಪ್‌ ನೀರನ್ನು ನಂಬಿಕೊಂಡಿದ್ದ ಜನರಿಗೆ ಸಮಸ್ಯೆಯಾಗಿದೆ. ಕೆಸರು ತುಂಬಿದ ನೀರು ಬಾವಿ ಸೇರಿದ ಪರಿಣಾಮ ಬಳಕೆ ಮಾಡಲು ಅಸಾಧ್ಯ. ಪಾಲಿಕೆಯ ನೀರಿನ ಪೈಪ್‌ಲೈನ್‌ ವ್ಯವಸ್ಥೆ ಇದ್ದವರು ಅದನ್ನೇ ಬಳಸಿದರೆ ಕೆಲವರಿಗೆ ಈ ಸೌಲಭ್ಯವೂ ಇರಲಿಲ್ಲ!

ಒಳಚರಂಡಿ ಸಮಸ್ಯೆ ಗಂಭೀರ!
ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಇನ್ನೂ ಹಲವೆಡೆ ಒಳಚರಂಡಿ ಸಮಸ್ಯೆಯೂ ಬಿಗಡಾಯಿಸಿದೆ. ಮನೆಯ ಮಳೆ ನೀರನ್ನು ನೇರವಾಗಿ ಒಳಚರಂಡಿ ಸಂಪರ್ಕಕ್ಕೆ ಲಿಂಕ್‌ ಮಾಡಿದ ಪರಿಣಾಮ ಕೆಲವೆಡೆ ಮ್ಯಾನ್‌ಹೋಲ್‌ನಿಂದ ಗಲೀಜು ನೀರು ಹೊರಬರುತ್ತಿದೆ. ಜತೆಗೆ ರಸ್ತೆಯಲ್ಲಿ ವ್ಯಾಪಿಸಿದ ನೆರೆ ನೀರು ಮ್ಯಾನ್‌ಹೋಲ್‌ನ ಒಳಗೆ ನುಗ್ಗಿ ವಾಪಾಸ್‌ ಬರುತ್ತಿರುವ ಘಟನೆಯೂ ನಡೆಯುತ್ತಿದೆ. ಕೆಲವೆಡೆ ರಸ್ತೆಗಳೆಲ್ಲವೂ ಕೆರೆಯಂತಾಗಿ ಮ್ಯಾನ್‌ಹೋಲ್‌ಗ‌ಳು ಉಕ್ಕಿ ಮಲಿನ ನೀರು ರಸ್ತೆಗಳಲ್ಲಿ ಹರಿದು ಅಸಹನೀಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಈ ಮಧ್ಯೆ ವಿದ್ಯುತ್‌ ಸಮಸ್ಯೆ ಕಾರಣದಿಂದ ನಗರದ ವಿವಿಧ ಕಡೆಗಳಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿಯೂ ವ್ಯತ್ಯಯ ಉಂಟಾಗಿದೆ. ಕೆಲವು ವಾರ್ಡ್‌ಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಲಭಿಸುತ್ತಿಲ್ಲ ಎಂದು ಪಾಲಿಕೆ ಕಾರ್ಪೋರೆಟರ್‌ನವರು ದೂರಿದ್ದಾರೆ.

Advertisement

ಪ್ರಾಣಿಗಳ ಗೋಳು!
ನೆರೆ ನೀರು ವ್ಯಾಪಿಸಿದ ಕಾರಣದಿಂದ ಮನೆಯಲ್ಲಿದ್ದ ಸಾಕುಪ್ರಾಣಿಗಳ ಗೋಳು ಕೇಳುವವರಿಲ್ಲ ಎಂಬಂತಾಗಿದೆ. ಕೆಲವರು ಕಾಳಜಿ ಕೇಂದ್ರಕ್ಕೆ ಹೋಗಿದ್ದರೂ ಅಲ್ಲಿ ನಾಯಿ- ಬೆಕ್ಕುಗಳಿಗೆ ಆಶ್ರಯ ನೀಡುವುದೇ ಈಗ ಸವಾಲಾಗಿದೆ. ಜತೆಗೆ ಕೆಲವು ಕಡೆ ಬೀದಿನಾಯಿಗಳು ಕೂಡ ಆಹಾರವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ.

ಬಿರುಸಿನ ಮಳೆಗೆ ಗುಡ್ಡ ಕುಸಿಯುವ ಭೀತಿ!
ಮಹಾನಗರ: ಕೆಲವು ದಿನ ಗಳಿಂದ ಭಾರೀ ಮಳೆಯಾಗುತ್ತಿದ್ದು, ನಗರದಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ.

ಮೊದಲ ಬಿರುಸಿನ ಮಳೆಗೆ ನಗರದ ಪಿವಿಎಸ್‌ ಜಂಕ್ಷನ್‌ನಿಂದ ಬಿಜೆಪಿ ಕಚೇರಿ ಮುಂಭಾಗದಿಂದ ಹಂಪನಕಟ್ಟೆಗೆ ಹೋಗುವ ಕೈಬರ್‌ ಪಾಸ್‌ ಲೇನ್‌ನ ರಸ್ತೆ ಯಲ್ಲಿ ಗುಡ್ಡ ಕುಸಿದು ಅಪಾಯ ಸೃಷ್ಟಿಯಾಗಿತ್ತು. ನಂತೂರು ಬಸ್‌ನಿಲ್ದಾಣದ (ನಂತೂರು-ಮಲ್ಲಿಕಟ್ಟೆ ರಸ್ತೆ) ಎಡಭಾಗದಲ್ಲಿರುವ ಗುಡ್ಡ ಕುಸಿದ ಘಟನೆ ಕೆಲವು ದಿನದ ಹಿಂದೆ ಸಂಭವಿಸಿದೆ. ಪಡೀಲ್‌ನ ವೀರನಗರದಲ್ಲಿ ಮನೆಯೊಂದರ ಆವರಣ ಗೋಡೆ, ಅಳಪೆ ಬಳಿ ಗುಡ್ಡ ಕುಸಿದು ಅಪಾಯಕ್ಕೆ ಕಾರಣವಾಗಿತ್ತು. ಮಳೆಗಾಲ ಆರಂಭದಲ್ಲೇ ಈ ರೀತಿಯ ಅವಘಡಗಳು ಸಂಭವಿಸಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿರುಸಿನ ಗಾಳಿ-ಮಳೆಯಾಗುವ ನಿರೀಕ್ಷೆ ಇದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.
ಕೆಲವು ವರ್ಷಗಳ ಹಿಂದೆ ಗುರುಪುರ ಕೈಕಂಬದ ಬಂಗ್ಲೆಗುಡ್ಡದಲ್ಲಿ ಭೂಕುಸಿತ ದಿಂದ ಮಣ್ಣಿನಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಈ ಹಿಂದೆ ನಗರದ ಹೊರವಲಯದ ಮಲ್ಲೂರಿ ನಲ್ಲಿ ಮನೆಯ ಮೇಲೆ ಗುಡ್ಡ ಕುಸಿತು ಮಹಿಳೆ ಗಾಯಗೊಂಡಿದ್ದು. ಅಲ್ಲದೆ, ಮಂಗಳೂರು ಏರ್‌ಪೋರ್ಟ್‌ ಬಳಿಯೂ ಗುಡ್ಡ ಕುಸಿತ ಉಂಟಾಗಿತ್ತು. ನಂತೂರಿನಲ್ಲಿಯೂ ಸಮಸ್ಯೆಗೆ ಕಾರಣವಾಗಿತ್ತು.

ಗುಡ್ಡ ಕುಸಿತ ಪ್ರದೇಶಕ್ಕೆ
ಟರ್ಪಲ್‌ ಹೊದಿಕೆ
ಕಳೆದ ವರ್ಷ ಪಡೀಲ್‌ ಬಳಿಯ ಬಳ್ಳೂರು ಗುಡ್ಡ ಸಹಿತ ಸುತ್ತಮುತ್ತ ಕೆಲವು ಪ್ರದೇಶಗಳಲ್ಲಿ ಗುಡ್ಡ ಜರಿದು ಆತಂಕಕ್ಕೆ ಕಾರಣವಾಗಿತ್ತು. ಪಕ್ಕದಲ್ಲಿ ರುವ ಮನೆಗಳು ಅಪಾಯಕ್ಕೆ ಸಿಲುಕಿತ್ತು. ಮನೆ ಮಂದಿಯನ್ನು ಸ್ಥಳಾಂತರಗೊಳಿಸಲಾಗಿತ್ತು. ಈ ಬಾರಿ ಆ ಭಾಗದಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಗುಡ್ಡಕ್ಕೆ ಟರ್ಪಲ್‌ ಹೊದಿಕೆ ಹಾಕಲಾಗಿದೆ ಎನ್ನುತ್ತಾರೆ ಸ್ಥಳೀಯ ಮನಪಾ ಸದಸ್ಯೆ ಚಂದ್ರಾವತಿ ವಿಶ್ವನಾಥ್‌.

ಮುನ್ನೆಚ್ಚರಿಕೆ
ನಗರದಲ್ಲಿ ಗುಡ್ಡ ಜರಿಯುವ ಸಂಭಾವ್ಯ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಯಾವೆಲ್ಲ ಪ್ರದೇಶಗಳಿವೆ ಅಪಾಯಕಾರಿ ಗುಡ್ಡಗಳಿವೆ ಎಂದು ಗುರುತಿಸಿ ತಹಶೀಲ್ದಾರ್‌ರಿಗೆ ಮಾಹಿತಿ ನೀಡಲು ಈಗಾಗಲೇ ಪಾಲಿಕೆ ಸದಸ್ಯರಿಗೆ ತಿಳಿಸಲಾಗಿದೆ. ಒಂದು ವೇಳೆ ಗುಡ್ಡ ಜರಿತ ಉಂಟಾದರೆ ತತ್‌ಕ್ಷಣ ಸ್ಪಂದಿಸಲಾಗುವುದು.
-ಜಯಾನಂದ ಅಂಚನ್‌, ಮನಪಾ ಮೇಯರ್‌

ಪ್ರಸ್ತಾವನೆ ಕಡತದಲ್ಲೇ ಬಾಕಿ
ನಗರದ ಸರ್ಕ್ಯೂಟ್ ಹೌಸ್ ಬಳಿಯ ಗುಡ್ಡಕ್ಕೆ ಮಳೆಗಾಲಕ್ಕೂ ಮುನ್ನ ತಡೆಗೋಡೆ ನಿರ್ಮಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಬೇಡಿಕೆಗೆ ಹಲವು ವರ್ಷಗಳಾದರೂ ಈಡೇರಲಿಲ್ಲ. ರಸ್ತೆ ಬದಿಯೇ ಈ ಗುಡ್ಡ ಇದ್ದು, ಅಪಾಯದ ಸ್ಥಿತಿಯಲ್ಲಿದೆ. ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಗುಡ್ಡದಲ್ಲಿ ಏರುವ ಮಣ್ಣು ಫುಟ್‌ಪಾತ್‌ಗೆ ಬೀಳಲು ಆರಂಭಿಸಿದೆ. ಕೆಲವು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ, ವಾಹನ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿತ್ತು. ಬಳಿಕ ಮರಳು ತುಂಬಿಸಿದ ಗೋಣಿ ಚೀಲಗಳನ್ನು ಇಟ್ಟು ತಾತ್ಕಾಲಿಕ ಪರಿಹಾರವನ್ನು ಕಲ್ಪಿಸಲಾಗಿತ್ತು. ಮತ್ತೆ ಮಳೆಗಾಲ ಆರಂಭ ವಾ ದರೂ ಶಾಶ್ವತ ಪರಿಹಾರ ಕಾಮ ಗಾರಿ ನಡೆ ಸ ಲಾಗಿಲ್ಲ. ಇದೀಗ ಮರಳು ಗೋಣಿ ಚೀಲಗಳು ರಸ್ತೆಗೆ ಬೀಳುವ ಆತಂಕ ದಲ್ಲಿದೆ. ಕಾಮಗಾರಿಯ ಪ್ರಸ್ತಾವನೆ ಕಡತದಲ್ಲಿಯೇ ಬಾಕಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next