Advertisement

ಪಂಪ್‌ವೆಲ್‌: “ನೆರೆ’ಯ ಗೋಳು “ಮರೆ’ವು

03:48 PM Jul 05, 2023 | Team Udayavani |

ಮಹಾನಗರ: ಪಂಪ್‌ವೆಲ್‌ ಮತ್ತು ಕೊಟ್ಟಾರ ಚೌಕಿ ಪ್ರದೇಶ ಕೃತಕ ನೆರೆಯಿಂದ ಮುಳುಗಡೆಯಾಗಿ ಮತ್ತೆ ಸುದ್ದಿಯಾಗುವುದರೊಂದಿಗೆ ಟ್ರೋಲ್‌ಗ‌ೂ ಒಳಗಾಗುತ್ತಿದೆ. ಸೋಮವಾರ ಸಂಜೆ ಎರಡು ಗಂಟೆಗಳ ಕಾಲ ಸುರಿದ ಮಳೆಗೆ ಕೃತಕ ನೆರೆ ಉಂಟಾಗಿದ್ದು, ಪಾಲಿಕೆ ಮಳೆಗಾಲಕ್ಕೆ ಏನು ಸಿದ್ಧತೆ ನಡೆಸಿತ್ತು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

Advertisement

ಪ್ರತೀ ವರ್ಷ ಈ ಎರಡು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸುವುದು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಜೋರಾದ ಮಳೆ ಬಂದು ನೆರೆ ಉಂಟಾದಾಗ ಎಲ್ಲರೂ ಆಕ್ರೋಶ ವ್ಯಕ್ತಪಡಿಸುವುದು, ಟ್ರೋಲ್‌ ಮಾಡುವುದು, ಅಧಿಕಾರಿಗಳು ತತ್‌ಕ್ಷಣಕ್ಕೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಸುವುದು ಮತ್ತೆ ಮರೆತು ಬಿಡುವುದು, ಇಷ್ಟೇ ನಡೆಯುತ್ತಿದೆ. ಇದರ ಹೊರತು ನೆರೆ ಬರದಂತೆ ತಡೆಯುವ ನಿಟ್ಟಿನಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳುವುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ನಡುವೆ ಈ ನೆರೆಗೆ ಕಾರಣವೇನೆಂಬ ಬಗ್ಗೆ ಉದಯವಾಣಿ ಪರಿಶೀಲಿಸಿದಾಗ ಕಂಡು ಬಂದ ಅಂಶಗಳು ಇಲ್ಲಿವೆ.

ಪಂಪ್‌ವೆಲ್‌ನಲ್ಲಿ ನೆರೆಗೆ ಕಾರಣವೇನು?
ಪಂಪ್‌ವೆಲ್‌ನಲ್ಲಿ ನೀರು ನಿಲ್ಲುವ ಫ್ಲೆ$ç ಓವರ್‌ನ ಅಡಿಭಾಗ ಇತರ ಎಲ್ಲ ಕಡೆಗಳಿಗಿಂತ ತಗ್ಗಿನಲ್ಲಿದೆ. ಎತ್ತರವಿರುವ ಕಂಕನಾಡಿ ಸೇರಿದಂತೆ ಸುತ್ತಮುತ್ತಲಿನ ಭಾಗದಿಂದ ಹರಿದು ಬರುವ ನೀರು ಇಲ್ಲಿ ಸಂಗ್ರಹಗೊಂಡಿದೆ. ಇನ್ನು ಫ್ಲೆ$ç ಓವರ್‌ ನಿರ್ಮಾಣವೇ ಅವೈಜ್ಞಾನಿಕವಾಗಿದೆ ಪಿಲ್ಲರ್‌ಗಳನ್ನು ಎತ್ತರವಾಗಿ ನಿರ್ಮಿಸದಿರುವ ಕಾರಣವೇ ಈಗ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ರಾಜಕಾಲುವೆ ನೀರು ರಸ್ತೆಗೆ
ಮೇಲ್ಸೇತುವೆ ಅಡಿಭಾಗದಲ್ಲಿ ರಾಜಕಾಲುವೆಯೊಂದು ಹಾದು ಹೋಗುತ್ತದೆ. ಇದಕ್ಕೆ ತಡೆಗೋಡೆ ಇಲ್ಲದೆ, ಅಧಿಕ ಪ್ರಮಾಣದಲ್ಲಿ ನೀರು ಬಂದರೆ ಇದು ಕೂಡ ನೇರವಾಗಿ ರಸ್ತೆಗೆ ಬರುತ್ತದೆ. ಪಂಪ್‌ವೆಲ್‌ನ ಪ್ರಮುಖ ರಾಜಕಾಲುವೆ ಪಂಪ್‌ವೆಲ್‌ ನಿಂದ ಮುಂದಕ್ಕೆ ಹೋದಂತೆ ಗಾತ್ರ ಕಿರಿದಾಗುತ್ತದೆ. ಇದರಿಂದ ನೀರು ಒಂದೇ ಪ್ರಮಾಣ ಹರಿದು ಹೋಗಲು ಸಾಧ್ಯವಾಗದೆ ನಿಧಾನವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಉಪಯೋಗಕ್ಕೆ ಬಾರದ ತೋಡು:
ಕಳೆದ ಬಾರಿ ಮಳೆ, ನೆರೆ ಬಂದ ಬಳಿಕ ಪಂಪ್‌ವೆಲ್‌ನಲ್ಲಿ ನೀರು ಹರಿದು ಹೋಗಲು ಮೇಲ್ಸೇತುವೆ ಅಡಿಭಾಗದಲ್ಲಿ ಸಣ್ಣ ತೋಡು ನಿರ್ಮಿಸಿ ಅದರ ಮೇಲೆ ಕಬ್ಬಿಣದ ಆ್ಯಂಗ್ಲರ್‌ಗಳನ್ನು ಅಳವಡಿಸಲಾಗಿದೆ. ಸಾಮಾನ್ಯ ಮಳೆಗೆ ಇದರಲ್ಲಿ ನೀರು ಹರಿದು ಹೋಗುತ್ತದೆ. ಆದರೆ ಸೋಮವಾರದ ಮಳೆ ರಾಜಕಾಲುವೆಯನ್ನೇ ಮೀರಿ ಹರಿದ ಪರಿಣಾಮ ಈ ತೋಡಿನಲ್ಲಿ ನೀರು ಹರಿದು ಹೋಗಲು ಅವಕಾಶವೇ ಇಲ್ಲದೆ ಅಲ್ಲೇ ನಿಂತಿದೆ. ಜತೆಗೆ ಅದರಲ್ಲಿ ಹೂಳು ತುಂಬಿದೆ. ಇದನ್ನು ತೆರವುಗೊಳಿಸುವ ಕೆಲಸಗಳು ನಡೆದಿಲ್ಲ.

Advertisement

ಫ್ಲೈ ಓವರ್ ನಿರ್ಮಾಣ: ನಿರ್ಲಕ್ಷ್ಯ
ಫ್ಲೈ ಓವರ್ ನಿರ್ಮಾಣ ಮಾಡಿದ ಬಳಿಕವೇ ಇಲ್ಲಿ ಸಮಸ್ಯೆಗಳು ಆರಂಭವಾಗಿದ್ದು. ಅದಕ್ಕಿಂತ ಮೊದಲು ಎಷ್ಟು ಮಳೆ ಬಂದರೂ ಸಮಸ್ಯೆಯಾಗುತ್ತಿರಲಿಲ್ಲ. ಈಗ ಸುರಿಯುವುದಕ್ಕಿಂತಲೂ ಭಾರೀ ಪ್ರಮಾಣದ ಮಳೆ ಆಗ ಬರುತ್ತಿತ್ತು. ಅವೈಜ್ಞಾನಿಕ ಕಾಮಗಾರಿ, ಸರ್ವೀಸ್‌ ರಸ್ತೆಗಳು, ಇತರ ಸಂಪರ್ಕ ರಸ್ತೆಗಳು, ರಾಜಕಾಲುವೆಗೆ ಎಸೆಯುವ ಕಸಕಡ್ಡಿ, ತ್ಯಾಜ್ಯಗಳೇ ಇಲ್ಲಿನ ಸಮಸ್ಯೆಗೆ ಮೂಲಕ ಕಾರಣ ಎನ್ನುತ್ತಾರೆ ಇಲ್ಲಿನ ವರ್ತಕರು.

ಕೊಟ್ಟಾರ ಚೌಕಿಯಲ್ಲಿ ಮುಗಿಯದ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ
ಕೊಟ್ಟಾರ ಚೌಕಿಯಲ್ಲಿ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಕೆಲವೆಡೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ, ಕಟ್ಟಡಗಳ ತಳ ಅಂತಸ್ತಿನಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿದ್ದು, ಸುದಿನ ತಂಡ ಭೇಟಿ ನೀಡಿದ ವೇಳೆ ನೀರು ಹಾಗೇ ಇರುವುದು ಕಂಡು ಬಂತು. ಆಯಿಲ್‌ ಮಾರಾಟ ಅಂಗಡಿ, ಹೊಟೇಲ್‌, ಇತರ ಅಂಗಡಿಗಳಿಗೆ ನೀರು ನುಗ್ಗಿದೆ. ಇನ್ನು ರಸ್ತೆಯ ಮಟ್ಟ ಹಿಂದೆ ಇದ್ದುದಕ್ಕಿಂತಲೂ ಎತ್ತರವಾಗಿದ್ದು, ಅಂಗಡಿಗಳು ಮತ್ತಷ್ಟು ತಗ್ಗಿಗೆ ಹೋಗಿದೆ. ರಸ್ತೆಯ ನೀರು ಅಂಗಡಿಗಳಿಗೆ ಹರಿದು ಹೋಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಂಗಡಿ ಮಾಲೀಕರಾದ ಬಾಬು ಆಗ್ರಹಿಸಿದ್ದಾರೆ

ರಾಜಕಾಲುವೆಯಲ್ಲಿ ಸಿಕ್ಕಿ ಹಾಕಿಕೊಂಡ ಕಸಕಡ್ಡಿ ತ್ಯಾಜ್ಯ
ಬಂಗ್ರಕೂಳೂರಿನ ಫೋರ್ಥ್ ಮೈಲ್‌ ಬಳಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿದು ಹೋಗುವಲ್ಲಿ ಸಮಸ್ಯೆಯಾಗಿದೆ. ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಗೆ ಕಾಂಕ್ರೀಟ್‌ ಹಾಕಲಾಗಿದ್ದು, ಪರಿಣಾಮ ಅದಕ್ಕೆ ಅಳವಡಿಸಲಾಗಿರುವ ಕಂಬಗಳು ರಾಜಕಾಲುವೆಯಲ್ಲಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗುವಲ್ಲಿ ಸಮಸ್ಯೆಯಾಗಿರುವುದು ಮಾತ್ರವಲ್ಲದೆ ಕಸಕಡ್ಡಿಗಳು ಈ ಕಂಬಗಳಲ್ಲಿ ಸಿಕ್ಕಿಹಾಕಿಕೊಂಡಿವೆ. ಇದು ಕೂಡ ಈ ಬಾರಿಯ ಕೃತಕ ನೆರೆಗೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.

ಹೆಚ್ಚು ಹರಿದು ಬಂದ ನೀರು

ಕೊಟ್ಟಾರ ಚೌಕಿ ರಾಜಕಾಲುವೆಗೆ ಮೇರಿಹಿಲ್‌ ಹೆಲಿಪ್ಯಾಡ್‌, ಲ್ಯಾಂಡ್‌ ಲಿಂಕ್ಸ್‌, ಹರಿಪದವು ಸೇರಿದಂತೆ ಸುತ್ತಮುತ್ತಲಿನ ಎತ್ತರ ಪ್ರದೇಶಗಳ ನೀರು ಹರಿದು ಬರುತ್ತದೆ. ಎರಡು ಗಂಟೆಯ ಧಾರಾಕಾರ ಮಳೆಗೆ ಎಲ್ಲ ಕಡೆಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ರಾಜಕಾಲುವೆಗೆ ಭಾರೀ ಪ್ರಮಾ ಣ ದಲ್ಲಿ ನೀರು ಬಂದ ಕಾರಣ, ಕಾಲುವೆಯಲ್ಲಿ ಹರಿದು ಹೋಗಲು ಸಾಧ್ಯವಾಗದೆ ನೆರೆ ಉಕ್ಕಿದೆ.

ಭೇಟಿ ನೀಡಿ ಪರಿಶೀಲಿಸಿದ್ದೇವೆ
ಪಂಪ್‌ವೆಲ್‌ ಘಟನೆಗೆ ಸಂಬಂಧಿಸಿದ ಮೇಯರ್‌, ಎಂಜಿನಿಯರ್‌ಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಭಾರೀ ಮಳೆಯಾದ ಹಿನ್ನೆಲೆಯಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ಸಮಸ್ಯೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನ ಸಭಾ ಅಧ್ಯಕ್ಷರು, ಶಾಸಕರು ಮಾಹಿತಿ ಪಡೆದಿದ್ದಾರೆ.
-ಆನಂದ ಸಿ. ಎಲ್‌.,
ಪಾಲಿಕೆ ಆಯುಕ್ತ

- ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next